“ಗಜಲ್ ಗಮಲು”
ಮೇಟಿ ಮರೆತು ಪ್ಯಾಟಿಯತ್ತ ಹೆಜ್ಜೆ ಹಾಕಿ ಬದುಕಲಿ ಸೋತೆ ನಾನು
ಮೇಟಿ ಹಿಡಿದು ಉಳುವ ಯೋಗಿಯಾಗಿ ಉಸಿರು ಗೆದ್ದೆ ನೀನು
ಇಂದು ಅನ್ನ ಕೊಡುವ ಭೂಮಿಯನ್ನು ಮರೆತು ಆಕರ್ಷಣೆಗೆ ಪಟ್ಟಣ ಸೇರಿರುವವರ ಪರಿಸ್ಥಿತಿ ಏನಾಗಿದೆ ಎಂದು ಬಣ್ಣಿಸುವ ಈ ಗಜಲ್ ಸಾಲುಗಳು ಸಹದೇವ ಯರಗೊಪ್ಪ ಅವರದು. ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದವರಾದ ಸಹದೇವ ಯರಗೊಪ್ಪ, ಪ್ರಸ್ತುತ ಕೊಪ್ಪಳ ಜಿಲ್ಲೆಯ ಕೃಷಿ ಇಲಾಖೆಯಲ್ಲಿ ಜಿಲ್ಲಾ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಕಲೆ, ಸಾಹಿತ್ಯ, ನಟನೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿರುವ ಇವರು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದ ಗೀಳನ್ನು ಹಚ್ಚಿಕೊಂಡವರು. ಸದ್ಯದ ವ್ಯವಸಾಯದ ಸಮಸ್ಯೆಗಳು, ರೈತನ ಬದುಕು, ನೆಲದ ಋಣದ ಕುರಿತಾಗಿಯೇ ಅರ್ಥಪೂರ್ಣ ಗಜಲ್‌ಗಳನ್ನು ಬರೆಯುತ್ತಲೇ ನಾಡಿನ ತುಂಬ ಗುರುತಿಸಿಕೊಂಡವರು. ‘ಸಾಹಿತ್ಯ ಸಂಪ್ರೀತಿ’ ಇವರ ಮೊದಲ ಪ್ರಕಟಿತ ಕೃತಿ. ‘ಗದಗಿನ ಕೃಷಿ ಸಾಧಕರು’, ‘ಗದಗಿನ ಹಸಿರು ಪ್ರವರ್ತಕರು’, ‘ಕೃಷಿ ಬೆಳೆಗಳಲ್ಲಿ ಕಳೆ ನಾಶಕಗಳ ಬಳಕೆ’ ಎಂಬ ಮೂರು ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಸಾಚಿ ಗಜಲ್’, ‘ಬಿರಿದ ನೆಲದ ಧ್ಯಾನ’ ಇವರ ಪ್ರಕಟಿತ ಗಜಲ್ ಸಂಕಲನಗಳು. ಕರ್ನಾಟಕ ವಿಶ್ವವಿದ್ಯಾಲಯ ಆಯೋಜಿಸಿದ್ದ ವಚನಗಳಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕತೆ ಎಂಬ ವಿಷಯದ ಕುರಿತು ಪ್ರಬಂಧ ಮಂಡನೆ ಮಾಡಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ನಾಡೋಜ ಡಾ. ಚೆನ್ನವೀರ ಕಣವಿ ಉತ್ತಮ ಕನ್ನಡ ಕೃಷಿ ಲೇಖನ ಪ್ರಶಸ್ತಿ, ಇವರು ಕೃಷಿಯಲ್ಲಿ ಸಲ್ಲಿಸಿದ ಉತ್ತಮ ಸೇವೆಗೆ ರಾಜ್ಯಪಾಲರಿಂದ ರಾಜ್ಯಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ, ರಾಜ್ಯಮಟ್ಟದ ಗಜಲ್ ಕಾವ್ಯ ಪ್ರಶಸ್ತಿ ಕೂಡ ಲಭಿಸಿದೆ. ಬರವಣಿಗೆಯ ಜೊತೆಗೆ ನಾಡಿಗೆ ಅನ್ನ ಕೊಡುವ ರೈತನ ಬದುಕು ಹಸನಾಗಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ಸಹದೇವ ಯರಗೊಪ್ಪ ಬರೆದಿರುವ ಗಜಲ್‌ನ ಓದು ಮತ್ತು ಒಳನೋಟ.
ಗಜಲ್
ಕರುಳಬಳ್ಳಿಯ ಕುಡಿಗಳಿಗೆ ಹೆತ್ತ ಜೀವದೊಡಲ ನರಳಾಟ ಚೀರಾಟ ಕೇಳುತ್ತಿಲ್ಲವಲ್ಲ
ಕಿವಿಯೊಳಗೆ ಕಸ ಬೆಳೆಸಿಕೊಂಡ ಜಾಣ ಕಿವುಡರಿಗೆ ವಸುಂಧರೆಯ ಆಕ್ರಂದನ ಕೇಳುತ್ತಿಲ್ಲವಲ್ಲ
ಚುಕ್ಕಿ ಚಂದ್ರಮನ ತೋರಿಸಿ ಕೈತುತ್ತು ಉಣಿಸಿ ನೋವುಂಡ ಜೀವದೊಡಲಿಗೆ ವಿಷ ಹಾಕಿದರು
ನೆಲದ್ಹಸಿರ ಹಾಸಿಗೆಯಲಿ ವಿಷ ಉಂಡು ಮಲಗಿರುವ ನನ್ನವ್ವನ ಮೈ ಬಣ್ಣ ಕಾಣುತ್ತಿಲ್ಲವಲ್ಲ
ಅನ್ನದ ಮೂಲ ಮರೆತ ಪಾಪಿ ಮನಸ್ಸಿಗೇನು ಗೊತ್ತು ಅವ್ವನ ಹಸಿರು ಸೀರೆ ದಡಿಯ ರಕ್ತ ಸಂಬಂಧ
ಹಸಿರನ್ನೇ ಉಸಿರಾಗಿಸಿದ ಭೂ ತಾಯಿಯ ಅನ್ನದ ಬದುಕಿನ ಕಸುವು ಕೊಂದು ಅನಾಥರಾದೆವಲ್ಲ
ಭೂ ತಾಯಿ ಮಡಿಲಿಗೆ ವಿಷದ ನೈವೇದ್ಯ ಹಿಡಿದ ತಪ್ಪಿಗೆ ಚಿನ್ನದ ತಟ್ಟೆ ತುಂಬ ಬಣ್ಣದ ಕೈಗಳು
ಮಣ್ಣಿನ ಕಣ ಕಣಗಳಿಗೆ ವಿಷ ಉಣಿಸಿ ವೈದ್ಯನರಮನೆ ಹೊಸ್ತಿಲಲಿ ನಿತ್ಯ ಭಿಕ್ಷುಕರಾದೆವಲ್ಲ
ಉಗುರು ಕಣ್ಣಿನಲ್ಲಿ ಮಣ್ಣ ನಂಟಿಗೆ ಉಸಿರಾಗದವರು ಹಸಿದವರ ತುತ್ತಿಗೆ ವಿಷವಾದರು ‘ಸಾಚಿ’
ವಿಷ ಉಂಡವರು ಮರಣ ಮೃದಂಗ ಬಾರಿಸಿದರು ಯಾರು ಮೂಲ ಕೃಷಿ ಮಂತ್ರ ಪಠಿಸುತ್ತಿಲ್ಲವಲ್ಲ
- ಸಹದೇವ ಯರಗೊಪ್ಪ
“ನಾಡಿಗೆ ಅನ್ನ ಕೊಡುವ ರೈತ, ದೇಶ ಕಾಯುವ ಸೈನಿಕ ಯಾವತ್ತಿಗೂ ಕಣ್ಣಲ್ಲಿ ನೀರು ಹಾಕಬಾರದು’ ಎಂಬ ಉಕ್ತಿ ಇದೆ. ಈ ಭೂಮಿ ನಮ್ಮೆಲ್ಲರನ್ನು ಪೊರೆಯುವವಳು, ನಮ್ಮೆಲ್ಲರ ಆಸೆ-ಆಕಾಂಕ್ಷೆಗೆ ನೀರೆರೆದು ಪೋಷಿಸುವವಳು, ಹುಟ್ಟುತ್ತಲೇ ಆಸರೆಯಾಗಿ ನಮ್ಮ ಕೊನೆಯುಸಿರಿನವರೆಗೂ ಜೊತೆಗೆ ನಿಂತು ಕಣ್ಣು ಮುಚ್ಚಿದಾಗಲೂ ಮಡಿಲಿನಲ್ಲಿ ಮಲಗಿಸಿಕೊಳ್ಳುವವಳು. ಮಣ್ಣ ನಂಬಿ ಬದುಕುವವರು ಯಾವತ್ತಿಗೂ ಭರವಸೆ ಕಳೆದುಕೊಂಡ ಉದಾಹರಣೆಯಿಲ್ಲ. ಆದರಿಂದು ಅನ್ನ ನೀಡುವ ಮಣ್ಣಿಗೆ ವಿಷ ಬೆರೆಸುತ್ತಿದ್ದೇವೆ, ನಾನಾ ತೆವಲುಗಳನ್ನು ತೀರಿಸಿಕೊಳ್ಳಲು ಆಕೆಯ ಮೇಲೆ ಪ್ರಹಾರ ಮಾಡುತ್ತಿದ್ದೇವೆ. ಆಕೆಯ ಅಳಲು, ದುಃಖ, ಚೀರಾಟ ಯಾರ ಕಿವಿಗೂ ಬೀಳುತ್ತಿಲ್ಲ. ಇದು ಹೀಗೆಯೇ ಮುಂದುವರೆದರೆ ವಿನಾಶ ಕಟ್ಟಿಟ್ಟ ಬುತ್ತಿ ಎಂಬ ಸಂದೇಶವನ್ನು ಕವಿ ಸಹದೇವ ಯರಗೊಪ್ಪ ತಮ್ಮ ಗಜಲ್ ಮೂಲಕ ನೀಡುತ್ತಾರೆ. ಅನ್ನದಾತರ ಆಕ್ರಂದನದ ಜೊತೆಗೆ ವಸುಂಧರೆಯ ಮಡಿಲ ವ್ಯಥೆಯನ್ನು ಬಣ್ಣಿಸುವ ಗಜಲ್ ಇಷ್ಟವಾಗುತ್ತದೆ.
ಮಕ್ಕಳ ನೋವು-ನಲಿವುಗಳಿಗೆ ಕಿವಿಯಾದ ತಾಯಿಯ ಮನಸಿನ ವ್ಯಥೆ, ಸಂಕಟವನ್ನು ಮಕ್ಕಳೇ ಅರ್ಥ ಮಾಡಿಕೊಳ್ಳದಿದ್ದರೇ ಹೇಗೆ? ಎಲ್ಲ ಗೊತ್ತಿದ್ದೂ ಜಾಣ ಮೌನ ತಾಳುತ್ತಿರುವ, ಧರಣಿಯ ನೋವನ್ನು ಕಡೆಗಣಿಸುತ್ತಿರುವ ದುರುಳರಿಗೆ ಹೇಗೆ ಅರ್ಥೈಸುವುದು? ಈ ನೆಲವನ್ನು ಸ್ವರ್ಗ ಮಾಡುತ್ತೇವೆ ಎಂದು ಆಸೆ ಹುಟ್ಟಿಸಿ ಭಾರಿ ಪ್ರಮಾಣದ ಕೈಗಾರಿಕೆ, ಕಾಂಕ್ರೀಟ್ ಕಾಡುಗಳನ್ನು ಹುಟ್ಟು ಹಾಕಿ ಮಣ್ಣಿಗೆ ವಿಷವುಣಿಸುತ್ತಿರುವಾಗ ಹಸಿರುಟ್ಟ ಭೂತಾಯಿ ಬಣ್ಣ ಬದಲಿಸಿ ನರಳುತ್ತಿರುವ ದೃಶ್ಯ ಕರುಳು ಹಿಂಡುತ್ತದೆ. ಚಿನ್ನದ ಬೆನ್ನು ಹತ್ತಿದ ಕಿರಾತಕರಿಗೆ ಅನ್ನದ ಮೂಲದ ಬಗ್ಗೆ ಹೇಗೆ ತಿಳೀದೀತು? ಅಡಿಗಡಿಗೂ ವಿಷಪ್ರಾಸನ ಮಾಡಿಸಿ, ನಮ್ಮ ಹೊಟ್ಟೆ ತುಂಬಿಸಿಕೊಂಡ ನಾವು ಈ ನೆಲದ ಸತ್ವವನ್ನೇ ಬರಿದು ಮಾಡಿಬಿಟ್ಟೆವು. ಹೌದು, ಶ್ರೀಮಂತನಾಗುವ ಕನಸಿಗೆ ವಿಷವನ್ನೇ ಹಿಡಿದು ಹೊರಟ ನಾವುಗಳು ಕೈಯಲ್ಲಿ ಚಿನ್ನದ ತಟ್ಟೆಯನ್ನೇನೋ ಹಿಡಿದೆವು. ಆದರೆ... ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಬಾಗಿಲನ್ನು ನಿತ್ಯ ತಟ್ಟುವಂತಾಯ್ತಲ್ಲ. ವಿಷವುಣಿಸಿದ ಕೈಗೂ ಬಿಸಿ ಮುಟ್ಟಿದ ಪರಿಣಾಮವಿದು. ವೈದ್ಯನ ಮನೆಬಾಗಿಲಿನಲ್ಲಿ ಭಿಕ್ಷುಕನಂತೆ ನಿಲ್ಲುವ ಪರಿಸ್ಥಿತಿ ನಾವೇ ಸೃಷ್ಟಿ ಮಾಡಿಕೊಂಡು ಬಿಟ್ಟಿದ್ದೇವೆ. ಮಣ್ಣನ್ನೇ ನಂಬಿಕೊಂಡವರು ವಿಷದ ಸಾಂಗತ್ಯಕ್ಕೆ ತಿಲಾಂಜಲಿ ಹೇಳುವ ಕಾಲವಿದು. ಭೂಮಿ ತಾಯಿ ಮುನಿಯಬಾರದೆಂದರೆ ಮೂಲ ಕೃಷಿಗೆ ಮರಳಬೇಕಾದ ಅನಿವಾರ್ಯತೆ ಅನ್ನದಾತನ ಮೇಲಿದೆ.
ಆಧುನಿಕ ಕೃಷಿ ಹಾಗೂ ಮಣ್ಣಿನ ಮೇಲಾಗುತ್ತಿರುವ ದೌರ್ಜನ್ಯಗಳು ಇಂದು ತಂದೊಡ್ಡಿರುವ ಸವಾಲುಗಳನ್ನು ಮನೋಜ್ಞವಾಗಿ ಗಜಲ್ ಮೂಲಕ ಬಣ್ಣಿಸಿದ ಸಹದೇವ ಯರಗೊಪ್ಪ ಅವರಿಗೆ ನಮನಗಳು.
- ನಾಗೇಶ್ ಜೆ. ನಾಯಕ
ಶಿಕ್ಷಕರು
ಮೊ. 9900817716
- * * * -