ಶ್ರೀ ರಾಮನವಮಿ ಸಂಭ್ರಮದಲ್ಲಿ ಭಕ್ತಿ-ಭಾವ ಮಹೋತ್ಸವ

ಶ್ರೀ ರಾಮನವಮಿ ಸಂಭ್ರಮದಲ್ಲಿ ಭಕ್ತಿ-ಭಾವ ಮಹೋತ್ಸವ  A festival of devotion and passion on the occasion of Sri Ramanavami

    ರಾಣೇಬೆನ್ನೂರು 30 : ಮಾರುತಿ ನಗರದ ಶ್ರೀ ರಾಮ ದೇವಸ್ಥಾನದಲ್ಲಿ ನಡೆದ ಶ್ರೀ ರಾಮನವಮಿ ಮಹೋತ್ಸವವು ಭಕ್ತಾದಿಗಳ ಮಧ್ಯದಲ್ಲಿ ಅತ್ಯಂತ ಭಕ್ತಿ, ಶ್ರದ್ಧೆ ಮತ್ತು ಆಧ್ಯಾತ್ಮಿಕ ಚೈತನ್ಯದ ಸಂಗಮವಾಗಿ ಭಕ್ತರ ಮನಸ್ಸುಗಳನ್ನು ಆನಂದಭರಿತಗೊಳಿಸುವಲ್ಲಿ ಯಶಸ್ವಿ ಕಂಡಿತ್ತು.  ಶಾಲಿವಾಹನ ಶಕೆ 1948ರ ಪರಾಭವನಾಮ ಸಂವತ್ಸರದ ಚೈತ್ರಮಾಸ ಶುಕ್ಲ ನವಮಿ ಅಂಗವಾಗಿ ನಡೆದ ಈ ಪವಿತ್ರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಗಮದ  ಕಾರ್ಯಕ್ರಮವು ಮುಂಜಾನೆ ಶ್ರೀರಾಮನ ಪೂಜೆ ಮತ್ತು ಅಭಿಷೇಕ ನಡೆಯಿತು.  

  ದೇವಸ್ಥಾನದಲ್ಲಿ ವೇದ ಘೋಷ  ಮಂತ್ರಗಳ ನಡುವೆ ನಡೆದ ಅಭಿಷೇಕವು ಭಕ್ತರಲ್ಲಿ ಭಕ್ತಿ ಪರವಶತೆಯನ್ನು ಉಂಟುಮಾಡಿತು.  ಮಕ್ಕಳಿಗಾಗಿ   ಬಾಲರಾಮನ ವೇಷಭೂಷಣ ಸ್ಪರ್ಧೆಯಲ್ಲಿ ನಡೆಯಿತು ನೂರಾರು ಬಾಲ ಮಕ್ಕಳು  ತದ್ರುಪ ರಾಮನ ವಿವಿಧ ವೇಷಧಾರಿಗಳಾಗಿ  ರೂಪಗಳಲ್ಲಿ, ಪಾಲಕರ ಮತ್ತು ಭಕ್ತರ ಗಮನ ಸೆಳೆದರು.  ಮಕ್ಕಳ ನಿಷ್ಕಳಂಕ ಭಾವದಲ್ಲಿ ಕಾಣಿಸಿಕೊಂಡ ರಾಮನ ಭಕ್ತಿಯು ವಿಶೇಷವಾಗಿ ಗಮನಸೆಳೆಯಿತು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಕೆ. ಪಿ. ಒ.ವಿನೀತೀನಿ ಹಾಗೂ ರಿಷಿ ಡಿ, ದ್ವೀತೀಯ ಸ್ಥಾನ ಆಯುಷಿ ಎಮ್,  ಲಿಖಿತಾ ಅವರುಗಳು  ಬಹುಮಾನಗಳನ್ನು ಪಡೆದರು.  

 ನಂತರ ನಡೆದ  ಬಾಲರಾಮನ ತೊಟ್ಟಿಲು ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಿತ್ತು,. ಭಕ್ತರು ಭಜನೆಗಳ ನಡುವೆ ರಾಮನಾಮ ಸಂಕೀರ್ತನೆ ಮಾಡಿ, ಶ್ರೀರಾಮನ ಶರಣಾಗತ ಭಾವವನ್ನು ವ್ಯಕ್ತಪಡಿಸಿದರು. ದೇವಸ್ಥಾನದ ಪರಿಸರವೇ “ ಶ್ರೀ ರಾಮ್ ಜೈರಾಮ್ ಜೈಜೈರಾಮ್ ” ಎಂಬ ನಾಮಸ್ಮರಣೆಯಿಂದ ಪವಿತ್ರತೆಯನ್ನು ಪಡೆದುಕೊಂಡಿತು.  

ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ಶ್ರೀ  ಪ್ರಕಾಶಾನಂದಜಿ ಮಹಾರಾಜರು ಪ್ರವಚನ ನೀಡಿದರು.  ಉಪನ್ಯಾಸದಲ್ಲಿ ಅವರು “ಜೀವನದಲ್ಲಿ ಸಿಗುವ ಎಲ್ಲ ಅನುಭವಗಳನ್ನು ಸಮಭಾವದಿಂದ ಸ್ವೀಕರಿಸಿ ಜೀರ್ಣಿಸಿಕೊಳ್ಳುವ ಗುಣವೇ ಆಧ್ಯಾತ್ಮಿಕ ಸಾಧನೆಯ ಮೂಲ” ಎಂದು ತಿಳಿಸಿ, ಶ್ರೀರಾಮನ ಆದರ್ಶ ಜೀವನವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದು ಅವರು ಭಕ್ತ ಸಮುದಾಯಕ್ಕೆ  ಕರೆ ನೀಡಿದರು.  

 ವೇದಿಕೆಯಲ್ಲಿ ಪಾಂಡುರಂಗ ಪೂಜಾರ, ಮಲ್ಲೇಶಪ್ಪ ಐರಣಿ, ವಸಂತ ಪೂಜಾರ ಪರುಶುರಾಮ ಪೂಜಾರಿ,  ಇಂದ್ರವ್ವ ಕದರಮಂಡಲಗಿ,  ಎಂ. ಕೆ. ಮಡಿವಾಳರ, ಶೋಭಾ ಕದರ, ವಾಸಪ್ಪ ನೇಕಾರ, ಗೌರಮ್ಮ ನೇಕಾರ, ಸೇರಿದಂತೆ ಮತ್ತಿತರ ಗಣ್ಯರು ಭಕ್ತರು ಶ್ರೀರಾಮ ದೇವಸ್ಥಾನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.