21 ವರ್ಷಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿರುವ ವೈದ್ಯ

21 ವರ್ಷಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಸುತ್ತಿರುವ ವೈದ್ಯ  A doctor who has been making eco-friendly clay Ganesha idols for 21 years


ಮುಂಡಗೋಡ 16: ವೃತ್ತಿಯಲ್ಲಿ ತಾಲೂಕು ವೈದ್ಯಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಡಾ. ನರೇಂದ್ರ ಪವಾರ್ ಅವರು ಪ್ರವೃತ್ತಿಯಲ್ಲಿ ಸೃಜನಶೀಲ ಕಲಾವಿದರಾಗಿದ್ದು, ಕಳೆದ 21 ವರ್ಷಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ತಯಾರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  

ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ತಮ್ಮ ಬಿಡುವಿನ ವೇಳೆಯನ್ನು ಸೃಜನಾತ್ಮಕ ಕಾರ್ಯಕ್ಕೆ ಬಳಸಿಕೊಳ್ಳುವ ಡಾ. ಪವಾರ್, ಮಣ್ಣಿನಿಂದ ಕಲಾತ್ಮಕ ಗಣಪತಿ ಮೂರ್ತಿಗಳನ್ನು ತಯಾರಿಸಿ, ವಾಟರ್ ಕಲರ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳನ್ನು ಬಳಸಿ ಅಲಂಕರಿಸುತ್ತಾರೆ. ಈ ಮೂಲಕ ಮಣ್ಣಿನ ಗಣೇಶನಿಗೆ ಕಲಾತ್ಮಕ ಹಾಗೂ ಪರಿಸರ ಸ್ನೇಹಿ ರೂಪ ನೀಡುತ್ತಿದ್ದಾರೆ.  

ಈ ಬಾರಿಯೂ ತಮ್ಮ ಮನೆಯಲ್ಲಿ ತಾವೇ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿ-ಭಾವದಿಂದ ಆರಾಧಿಸಿದ್ದಾರೆ.  ರೋಗಿಗಳ ಆರೈಕೆ ಹಾಗೂ ತಾಲೂಕಿನ ವೈದ್ಯಕೀಯ ಜವಾಬ್ದಾರಿಗಳ ಒತ್ತಡದ ನಡುವೆಯೂ ತಮ್ಮ ಕಲಾ ಹವ್ಯಾಸ ಮತ್ತು ಪರಿಸರ ಪ್ರೇಮವನ್ನು ಜೀವಂತವಾಗಿರಿಸಿಕೊಂಡಿರುವ ಡಾ. ನರೇಂದ್ರ ಪವಾರ್ ಅವರ ಕಾರ್ಯವೈಖರಿಗೆ ತಾಲೂಕಿನಲ್ಲಿ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.