ಹಂಪಿಯಲ್ಲಿ ಭಕ್ತಿಭಾವದ ಸಾಂಸ್ಕೃತಿಕ ಕಾರ್ಯಕ್ರಮ

ಹಂಪಿಯಲ್ಲಿ ಭಕ್ತಿಭಾವದ ಸಾಂಸ್ಕೃತಿಕ ಕಾರ್ಯಕ್ರಮ  A cultural program imbued with devotion in Hampi

ಲೋಕದರ್ಶನ ವರದಿ 

ಹೊಸಪೇಟೆ, ಆ. 08: ಶ್ರೀ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದ ಕಡ್ಡಿರಾಂಪುರ (ಹಂಪಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಕಡ್ಡಿರಾಂಪುರದ ಶ್ರೀ ಸುಬ್ರಹ್ಮಣ್ಯ (ಮುರುಗನ್ ದೇವಾಲಯ) ಆವರಣದಲ್ಲಿ ಧಾರ್ಮಿಕ ಉತ್ಸವದ ಪ್ರಯುಕ್ತ ಭಕ್ತಿಭಾವದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಂಪಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಂಗಾಧರ, ಹಿಂದಿನಿಂದಲೂ ಗ್ರಾಮದಲ್ಲಿ ಜಾತ್ರೆ, ಉತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರುವುದು ಗ್ರಾಮಸ್ಥರು ಸೌಹಾರ್ದತೆಯಿಂದ ಜೀವನ ನಡೆಸುತ್ತಿರುವುದರ ಸಂಕೇತವಾಗಿದೆ ಎಂದರು.  

ಯುವಜನರು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಒಳಗಾಗದೆ ಭಾರತೀಯ ಸಂಸ್ಕೃತಿಯ ಸಂಗೀತ, ನೃತ್ಯ, ಜಾನಪದ ಹಾಗೂ ಸಾಂಪ್ರದಾಯಿಕ ಕಲೆಗಳನ್ನು ಕಲಿತು, ಉತ್ತಮ ಸಂಸ್ಕಾರ ಹಾಗೂ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.  

ಶ್ರೀ ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದವು ಕಳೆದ 30 ವರ್ಷಗಳಿಂದ ಹಂಪಿ ಪ್ರದೇಶಕ್ಕೆ ಆಗಮಿಸುವ ದೇಶ-ವಿದೇಶಗಳ ಪ್ರವಾಸಿಗರು ಹಾಗೂ ಭಕ್ತರಿಗೆ ಸಾಂಸ್ಕೃತಿಕ ಮನರಂಜನೆ ನೀಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.  

ಕಾರ್ಯಕ್ರಮದಲ್ಲಿ ಮಾಜಿ ಹಂಪಿ ಗ್ರಾಮ ಪಂಚಾಯಿತಿ ಸದಸ್ಯ ಕೆ. ಗೋಪಾಲ್, ಹೊಸಪೇಟೆಯ ಭರತನಾಟ್ಯ ಶಿಕ್ಷಕ ಎಂ. ಅಲ್ಲಾಭಕ್ಷ, ಹಿರಿಯ ಮುಖಂಡರಾದ ಕೆ. ಉದ್ದಾನಪ್ಪ, ನಾಗರಾಜ್ ಉಪ್ಪಾರಗಟ್ಟಿ, ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ, ಎಚ್‌.ಕೆ. ಶರಣೇಶ್, ವಡಿವೇಲು, ರಾಜು ಸತ್ಯವೇಲು, ಶ್ರೀ ಗೋವಿಂದ ಚಿನ್ನಪ್ಪಯ್ಯ, ವಿ. ಯಲ್ಲಪ್ಪ ಹಾಗೂ ಹಂಪಿ ಪೊಲೀಸ್ ಠಾಣೆಯ ಎಎಸ್‌ಐ ಶಂಭುಲಿಂಗ, ಎಂ.ಪಿ. ತಿಪ್ಪೇಶ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.  

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕುಮಾರಿ ಸ್ಫೂರ್ತಿ ಹುಲಿಗಿ, ಮಧುಸೂದನ್ ಯಾದವ್, ಅಂಗಡಿ ಸಮರ್ಥ, ಶ್ರೀಮತಿ ಪಲ್ಲವಿ ತಂಡ, ಮರಿಯಮ್ಮನಹಳ್ಳಿ, ಭರತನಾಟ್ಯ ಕಲಾವಿದೆ ಶ್ರೀ ಸ್ವರ್ಣಮುಖಿ, ಭರತನಾಟ್ಯ ಕಲಾಸಂಸ್ಥೆ ಹೊಸಪೇಟೆ ಹಾಗೂ ಜನಪದ ಕಲಾವಿದ ಯಲ್ಲಪ್ಪ ಭಂಡಾರ್ಧಾರ್ ಸೇರಿದಂತೆ ವಿವಿಧ ಕಲಾವಿದರು ಭಾಗವಹಿಸಿದರು.  

ಸಮೂಹ ನೃತ್ಯ, ಭಕ್ತಿಗೀತೆ, ಭರತನಾಟ್ಯ ಹಾಗೂ ಜಾನಪದ ಕಲಾ ಪ್ರದರ್ಶನಗಳು ಪ್ರೇಕ್ಷಕರ ಗಮನ ಸೆಳೆದವು. ಕೀಬೋರ್ಡ್ನಲ್ಲಿ ಗೋವಿಂದರಾಜ್, ತಬಲಾದಲ್ಲಿ ಮಹಾಂತೇಶ್ ಗುಂಡ್ಲವದ್ದಿಗೇರಿ, ಸತ್ಯನಾರಾಯಣ ಭಟ್ ಹಾಗೂ ರಿದಮ್ ಪ್ಯಾಡ್ನಲ್ಲಿ ಮಹೇಶ್ ಕಲಾವಿದರಿಗೆ ಸಾಥ್ ನೀಡಿದರು. ನಿರೂಪಣೆಯನ್ನು ಎ. ದೊಡ್ಡಬಸಪ್ಪ ಹಾಗೂ ಕೆ. ಪಂಪನಗೌಡ ನಡೆಸಿಕೊಟ್ಟರು.  

ಕಾರ್ಯಕ್ರಮವು ಸಂಜೆ 7ರಿಂದ ರಾತ್ರಿ 12ರವರೆಗೆ ಯಶಸ್ವಿಯಾಗಿ ನಡೆಯಿತು.