ಧಾರವಾಡ ಕೃಷಿ ವಿವಿಯಲ್ಲಿ 9ನೇ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನಾ ಸಮ್ಮೇಳನ ಉದ್ಘಾಟನೆ

ಧಾರವಾಡ ಕೃಷಿ ವಿವಿಯಲ್ಲಿ 9ನೇ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನಾ ಸಮ್ಮೇಳನ ಉದ್ಘಾಟನೆ  9th Postgraduate Students' Research Conference inaugurated at Dharwad Agricultural University

ಲೋಕದರ್ಶನ ವರದಿ 

ಧಾರವಾಡ  19: ರಾಷ್ಟ್ರದ ಆಹಾರ ಭದ್ರತೆಯನ್ನು ಸಾಧಿಸುವಲ್ಲಿ ವಿದ್ಯಾರ್ಥಿಗಳ ಸಂಶೋಧನೆ ಮಹತ್ವದ ಪಾತ್ರ ವಹಿಸಬೇಕು ಎಂದು ಭಾರತೀಯ ಕೃಷಿ ಸಂಶೋಧನಾ ಮಂಡಳಿ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಬೆಂಗಳೂರಿನ  ನಿರ್ದೇಶಕರಾದ ಡಾ. ತುಷಾರ್ ಕಾಂತಿ ಬೆಹೆರಾ ಅಭಿಪ್ರಾಯಪಟ್ಟರು.  

ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಆಯೋಜಿಸಲಾದ ಎರಡು ದಿನಗಳ 9ನೇ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, 2047ರ ವೇಳೆಗೆ ಭಾರತದ ಜನಸಂಖ್ಯೆ 1.60 ಬಿಲಿಯನ್ಗೆ ತಲುಪುವ ನೀರೀಕ್ಷೆಯಿದ್ದು, ಈ ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಭದ್ರತೆ ಒದಗಿಸುವುದು ದೊಡ್ಡ ಸವಾಲಾಗಿದೆ ಎಂದು ಹೇಳಿದರು. ಉತ್ತಮ ಸಂಶೋಧನೆಗಾಗಿ ಕಲಿಕೆ, ಚಿಂತನೆ ಮತ್ತು ಸೃಜನಶೀಲತೆ ಅತ್ಯಗತ್ಯ ಎಂದು ಅವರು ತಿಳಿಸಿದರು.  

ವಿದ್ಯಾರ್ಥಿಗಳು ತಮ್ಮ ಸಂಶೋಧನೆಯನ್ನು ಸಮಾಜದ ಅಗತ್ಯತೆಗಳು ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಗುರಿಗಳಿಗೆ ಅನುಗುಣವಾಗಿ ರೂಪಿಸಬೇಕು ಎಂದು ಅವರು ಕರೆ ನೀಡಿದರು.  ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಯು. ಕೃಷ್ಣರಾಜ ಅವರು, ವಿದ್ಯಾರ್ಥಿಗಳು ಪ್ರಯೋಗಾತ್ಮಕ ಕೌಶಲ್ಯಗಳನ್ನು ಕಲಿತು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ವ್ಯಕ್ತಿತ್ವ ವಿಕಸನವನ್ನು ವೃದ್ಧಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು. ವಿದ್ಯಾರ್ಥಿಗಳೇ ದೇಶದ ಭವಿಷ್ಯದ ಶಿಲ್ಪಿಗಳು ಎಂದು ಅವರು ಹೇಳಿದರು.  

ಈ ಸಮ್ಮೇಳನದಲ್ಲಿ ಕೃಷಿ, ಅರಣ್ಯ ಮತ್ತು ಸಮುದಾಯ ವಿಜ್ಞಾನ ಮಹಾವಿದ್ಯಾಲಯಗಳ ವಿವಿಧ ವಿಭಾಗಗಳ 39 ಪಿಎಚ್ಡಿ ವಿದ್ಯಾರ್ಥಿಗಳು ಮೌಖಿಕ ಪ್ರಬಂಧಗಳನ್ನು ಮಂಡಿಸಲಿದ್ದು, 212 ಸ್ನಾತಕೋತ್ತರ ವಿದ್ಯಾರ್ಥಿಗಳು ಪೋಸ್ಟರ್ಗಳ ಮೂಲಕ ಸಂಶೋಧನೆ ಪ್ರಸ್ತುತಪಡಿಸಲಿದ್ದಾರೆ.  

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ವೀರನಗೌಡ ಪಿ. ಪೋಲಿಸಗೌಡರ್,  ರವಿಕುಮಾರ ಮಾಳಿಗೇರ ಮತ್ತು ಶ್ರೀ ಮಾಲತೇಶ ಶ್ಯಾಗೋಟಿ ಉಪಸ್ಥಿತರಿದ್ದರು. ಡಾ. ಶ್ರೀಪಾದ ಕುಲಕರ್ಣಿ ಸ್ವಾಗತಿಸಿದರು. ಡಾ. ಮಂಜುಳಾ ಎನ್‌. ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು. ಡಾ.   ಟಿ. ಸುಧಾ ವಂದಿಸಿದರು. ಈ ಸಂದರ್ಭದಲ್ಲಿ “ಕಿರು ಹೊತ್ತಿಗೆ” ಬಿಡುಗಡೆ ಮಾಡಲಾಯಿತು.