ಜಾನುವಾರುಗಳ ಆರೋಗ್ಯ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸೂಚನೆ: ಜಿಲ್ಲಾಧಿಕಾರಿ

ಜಾನುವಾರುಗಳ ಆರೋಗ್ಯ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಕ್ಕೆ ಸೂಚನೆ: ಜಿಲ್ಲಾಧಿಕಾರಿ 8th round of foot-and-mouth disease vaccination program

8ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮ 

ಹಾವೇರಿ 05:  ಜಾನುವಾರುಗಳು ರೈತನ ಬೆನ್ನೆಲುಬು ಅವುಗಳ ರಕ್ಷಣೆಗೆ ಕಾಲ ಕಾಲಕ್ಕೆ ಲಸಿಕೆ ಹಾಕುವ ಮೂಲಕ ಮತ್ತು ರೋಗ ಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಎಲ್ಲ ಅಗತ್ಯ ಕ್ರಮಗಳನ್ನು ಪಶುಪಾಲನಾ ಇಲಾಖೆಯ ವತಿಯಿಂದ ಸೂಕ್ತವಾಗಿ ನಿರ್ವಹಿಸಲು ಸೂಚಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 8 ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಹಾವೇರಿ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯ  ಸಭೆ  ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ರೋಗ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ:  ಕಾಲು ಬಾಯಿ ಬೇನೆ ರೋಗವು ಜಾನುವಾರುಗಳಿಗೆ ಮಾರಕವಾಗಿದ್ದು, ನಮ್ಮ ದೇಶದಿಂದ ರೋಗವನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಾರ್ಷಿಕವಾಗಿ 2 ಬಾರಿ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ರೋಗದ ನಿರ್ಮೂಲನೆಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯೊಂದಿಗೆ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ. ಸಂಬಂಧಪಟ್ಟ ಇತರೆ ಇಲಾಖೆಗಳು ಪಶುಪಾಲನಾ ಇಲಾಖೆಯೊಂದಿಗೆ ಕೈಜೋಡಿಸಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಸೂಚನೆ ನೀಡಿದರು.  

ಈ ಕಾಲು ಬಾಯಿ ಬೇನೆ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆಗೆ ಅರ್ಹವಿರುವ ಜಾನುವಾರುಗಳಿಗೆ ಶೇ. 100 ರಷ್ಟು ಲಸಿಕೆ ಹಾಕುವ ಕಾರ್ಯವನ್ನು ನಿಗಧಿಪಡಿಸಿದ 30 ದಿನಗಳ ಅವಧಿಯಲ್ಲಿಯೇ ಕೈಗೊಂಡು ಪೂರ್ಣಗೊಳಿಸಲು ಎಲ್ಲ ಅಧಿಕಾರಿಗಳು ಸನ್ನದ್ದರಾಗಿರಬೇಕೆಂದು ಸೂಚಿಸಿದರು. 

ವ್ಯಾಪಕ ಪ್ರಚಾರಕೈಗೊಳ್ಳಿ: ಈ  ಲಸಿಕಾ ಕಾರ್ಯಕ್ರಮಕ್ಕೆ ಹಾವೇರಿ ಹಾಲು ಒಕ್ಕೂಟದ ಸಿಬ್ಬಂದಿಯವರ ಸಹಕಾರ ಪಡೆದುಕೊಳ್ಳಲು ಹಾಗೂ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಿಗೆ ಸೂಚಿಸುತ್ತಾ ಕಾರ್ಯಕ್ರಮದ ಬಗ್ಗೆ ವ್ಯಾಪಕವಾಗಿ ಪ್ರಚಾರ ಕೈಗೊಳ್ಳಲು ಸಹಕಾರ ನೀಡಬೇಕೆಂದು ಸೂಚನೆ ನೀಡಿದರು.  

ಲಸಿಕೆ ಹಾಕಿಸಲು ಮನವಿ: ಕಾಲುಬಾಯಿ ರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯವು ಮುಂಚೂಣೆಯಲ್ಲಿದ್ದು, ಲಸಿಕಾ ಕಾರ್ಯಕ್ರಮದಲ್ಲಿ ಎಲ್ಲ ರೈತಾಪಿ ಜನರು ತಮ್ಮಲ್ಲಿರುವ ಎಲ್ಲ ಜಾನುವಾರುಗಳಿಗೆ (ದನ ಮತ್ತು ಎಮ್ಮೆಗಳಿಗೆ) ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡು ರಾಜ್ಯದಿಂದ ಕಾಲುಬಾಯಿ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಹಕರಿಸಬೇಕೆಂದು ಮನವಿ ಮಾಡಿದರು.  

2.99 ಲಕ್ಷ ಜಾನುವಾರುಗಳು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ  ಡಾ. ಶಿವಯೋಗಿ ಬ. ಯಲಿ ಅವರು ಮಾತನಾಡಿ,  ನ.3 ರಿಂದ ಡಿಸೆಂಬರ್ 2ರವರೆಗೆ  ಜಿಲ್ಲೆಯಲ್ಲಿ ಕಾಲು ಬಾಯಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಜಿಲ್ಲೆಯಲ್ಲಿ ಅಂದಾಜು 2.99 ಲಕ್ಷ (ದನ ಮತ್ತು ಎಮ್ಮೆ) ಜಾನುವಾರುಗಳಿರುತ್ತವೆ. ಲಸಿಕಾ ಅಭಿಯಾನದಲ್ಲಿ ಇಲಾಖೆಯ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮನೆ ಬಾಗಿಲಿಗೆ ಹೋಗಿ ಕಾಲುಬಾಯಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ ಎಂದರು. 

ಪಶುಪಾಲನಾ ಇಲಾಖೆಯ ಹಾಗೂ ಇಲಾಖೇತರ  ಲಸಿಕೆದಾರರನ್ನು ಒಳಗೊಂಡು ಒಟ್ಟು  149 ತಂಡಗಳನ್ನು ರಚಿಸಲಾಗಿರುತ್ತದೆ. ಪ್ರತಿ ತಾಲ್ಲೂಕಿನಲ್ಲಿ ಲಸಿಕಾ ವೇಳಾ ಪಟ್ಟಿ ಮತ್ತು ಜಾನುವಾರು ಹೊಂದಿರುವ ರೈತರ ಮಾಹಿತಿಯನ್ನು ಗ್ರಾಮವಾರು ತಯಾರಿಸಿಟ್ಟುಕೊಳ್ಳಲಾಗಿದ್ದು, ಅದರಲ್ಲಿ ಗ್ರಾಮಗಳ ಹೆಸರು, ಜಾನುವಾರುಗಳ ಸಂಖ್ಯೆ, ಜಾನುವಾರು ಮಾಲೀಕರ ಹೆಸರು, ಮೊಬೈಲ್ ಸಂಖ್ಯೆ, ಆಧಾರ ಸಂಖ್ಯೆ, ಲಸಿಕಾದಾರರ ವಿವರ ಹಾಗೂ ಜಾನುವಾರುವಿನ ಕಿವಿ ಓಲೆ ಸಂಖ್ಯೆ ವಿವರಗಳು ಲಭ್ಯವಿರುತ್ತವೆ.  ಪ್ರತಿ ಗ್ರಾಮ ಅಥವಾ ನಗರ ಪ್ರದೇಶವನ್ನು 100 ರಿಂದ 120 ಜಾನುವಾರುಗಳಿಗೆ ಒಂದು ಬ್ಲಾಕ್ ಎಂದು ವರ್ಗೀಕರಿಸಿ ಒಟ್ಟು 2,935 ಬ್ಲಾಕ್‌ಗಳಲ್ಲಿ ಲಸಿಕಾದಾರರು ಲಸಿಕೆಯನ್ನು ಹಾಕಲಿದ್ದಾರೆ. ಪ್ರತಿ ಜಾನುವಾರಿಗೆ ಒಂದರಂತೆ ಸೀರಿಂಜ್ ಉಪಯೋಗಿಸಿ ಲಸಿಕೆ ನೀಡಲಿದ್ದಾರೆ  ಎಂದು ಸಭೆಗೆ ಮಾಹಿತಿ ನೀಡಿದರು. 

ಜಿಲ್ಲೆಗೆ ಈಗಾಗಲೇ 3,10,950 ಡೋಸ್ ಲಸಿಕೆ ಸರಬರಾಜಾಗಿದ್ದು, ಈ ಲಸಿಕೆಯನ್ನು ತಾಲ್ಲೂಕಿನಲ್ಲಿರುವ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ವಿಂಗಡಿಸಿ ಮರು ಹಂಚಿಕೆ ಮಾಡಲಾಗಿರುತ್ತದೆ. ಸೀರೋಮಾನಿಟರಿಂಗ ಮಾಡಲು ಹಾನಗಲ್ ತಾಲೂಕಿನ ಕೋಡಿಯಲ್ಲಾಪುರ, ಶಿಗ್ಗಾಂವ್ ತಾಲೂಕಿನ ದುಂಡಶಿ ಮತ್ತು ಬ್ಯಾಡಗಿ ತಾಲೂಕಿನ ಬಡಮಲ್ಲಿ ಗ್ರಾಮಗಳಿಂದ ತಲಾ 16 ಮಾದರಿಗಳನ್ನು ತಪಾಸಣೆಗೆ ಸಲ್ಲಿಸಲಾಗುತ್ತದೆ ಎಂದು ವಿವರಿಸಿದರು. ಜಿಲ್ಲೆಗೆ ಸರಬರಾಜಾದಂತಹ ಪೋಸ್ಟರ​‍್ಸ‌, ಬ್ಯಾನರ​‍್ಸ‌ಗಳನ್ನು ಹಾಗೂ ವ್ಯತಿರಿಕ್ತ ಪರಿಣಾಮಗಳ ನಿರ್ವಹಣೆಗೆ ಅವಶ್ಯವಿರುವ ತುರ್ತು ಓಷಧಿ/ರಾಸಾಯನಿಕಗಳನ್ನು ಹಂಚಿಕೆ ಮಾಡಿ ಲಸಿಕಾ ಕಾರ್ಯಕ್ರಮವನ್ನು ಕೈಗೊಳ್ಳಲು ಮಾಡಿಕೊಂಡ ಪೂರ್ವತಯಾರಿ ಬಗ್ಗೆ ಸಭೆಗೆ ವಿವರಿಸಿದರು.  

ಇದೇ ಸಂದರ್ಭದಲ್ಲಿ  8 ನೇ ಸುತ್ತಿನ ಕಾಲುಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ಪೋಸ್ಟರ‌್ಸ ಮತ್ತು ಬ್ಯಾನರ್ಸಗಳನ್ನು ಬಿಡುಗಡೆಗೊಳಿಸಲಾಯಿತು.  

ಸಭೆಯಲ್ಲಿ ಹಾವೇರಿ ಹಾಲು ಒಕ್ಕೂಟ ವ್ಯವಸ್ಥಾಪಕ ನಿರ್ದೇಶಕ  ಪ್ರದೀಪ್ ಎಸ್‌.ಎಂ., ಪಾಲಿಕ್ಲಿನಿಕ್‌ನ ಉಪನಿರ್ದೇಶಕ  ಡಾ. ಜಯಕುಮಾರ ಕಂಕನವಾಡಿ,  ಲಸಿಕಾ ಕಾರ್ಯಕ್ರಮದ ಜಿಲ್ಲಾ ಉಸ್ತುವಾರಿ ಅಧಿಕಾರಿ ಡಾ.ಕಿರಣ ಕೊಪ್ಪದ,  ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಹಾಗೂ ಎಲ್ಲಾ ತಾಲ್ಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳು  ಇತರರು ಉಪಸ್ಥಿತರಿದ್ದರು.