77ನೇ ಗಣರಾಜ್ಯೋತ್ಸವ ದಿನಾಚರಣೆ ಭಾರತದ ಸಂವಿಧಾನ ಜಗತ್ತಿನಲ್ಲೇ ಅಗ್ರಮಾನ್ಯ ಸಂವಿಧಾನಗಳಲ್ಲಿ ಒಂದಾಗಿದೆ

77ನೇ ಗಣರಾಜ್ಯೋತ್ಸವ ದಿನಾಚರಣೆ ಭಾರತದ ಸಂವಿಧಾನ ಜಗತ್ತಿನಲ್ಲೇ ಅಗ್ರಮಾನ್ಯ ಸಂವಿಧಾನಗಳಲ್ಲಿ ಒಂದಾಗಿದೆ 77th Republic Day Celebrations The Constitution of India is one of the most respected constitutions

       ಹಾವೇರಿ 27 : ಭಾರತದ ಸಂವಿಧಾನ ಜಗತ್ತಿನಲ್ಲೇ ಅಗ್ರಮಾನ್ಯ ಸಂವಿಧಾನಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಧ್ಯೇಯಗಳನ್ನು ಪ್ರತಿಪಾದಿಸುವ ಈ ಸಂವಿಧಾನ ಜಗತ್ತಿಗೇ ದಾರೀದೀವಿಗೆಯಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಅವರು ಹೇಳಿದರು. 

ನಗರದ ದಿ.ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ  ಸೋಮವಾರ 77ನೇ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನ ಕಾಲದ ಅಗತ್ಯಕ್ಕೆ ತಕ್ಕಂತೆ ಬದಲಾವಣೆ, ತಿದ್ದುಪಡಿಗಳನ್ನು ಕಾಣುತ್ತಿದ್ದರೂ ಮೂಲಭೂತ ಸ್ವರೂಪವನ್ನು ಉಳಿಸಿಕೊಂಡು ಭಾರತೀಯತ್ವವನ್ನು ಮೆರೆಯುತ್ತಿದೆ ಎಂದರು. 

1946ರ ಡಿಸೆಂಬರ್ 11 ರಂದು ಡಾ.ರಾಜೇಂದ್ರ ಪ್ರಸಾದ್ ಅವರನ್ನು ಸಂವಿಧಾನ ಸಭೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು.  1947ರ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದೊರೆಯುತ್ತಲೇ ಡಾ.ಬಿ.ಆರ್‌.ಅಂಬೇಡ್ಕರ್ ಅವರನ್ನು ಭಾರತ ಸರ್ಕಾರದ ಮೊದಲ ಕಾನೂನು ಸಚಿವರನ್ನಾಗಿ ಹಾಗೂ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ನ್ಯಾಯಾಂಗ ತಜ್ಞರ ಸಲಹೆಯಂತೆ  ಬಿ.ಆರ್‌.ಅಂಬೇಡ್ಕರ್‌ರ ನೇತೃತ್ವದಲ್ಲಿ 299 ಸದಸ್ಯರ ಸಂವಿಧಾನ ಸಭೆಗೆ, ಸಂವಿಧಾನ ರೂಪಿಸಲು ಎರಡು ವರ್ಷ 11 ತಿಂಗಳು ಮತ್ತು 18 ದಿನಗಳು ಹಿಡಿದಿದ್ದವು. ಭಾರತ ದೇಶದ ಸಂವಿಧಾನವು 26 ನವೆಂಬರ್ 1949 ರಂದು ಅಂಗೀಕೃತವಾಗಿ, 26 ಜನವರಿ 1950 ರಿಂದ ಜಾರಿಗೆ ಬಂದಿದೆ. 395 ವಿಧಿಗಳು, 8 ಅನುಸೂಚಿಗಳು, 22 ಭಾಗಗಳನ್ನು ಒಳಗೊಂಡ ಭಾರತ ಸಂವಿಧಾನ ಅಂಗೀಕರಿಸಲಾಗಿದೆ.  

ಭಾರತದ ಸಂವಿಧಾನ ಒಂದು ಜಾಗತಿಕ ಅದ್ಬುತವಾಗಿದೆ. ಜಗತ್ತಿನ ಅತ್ಯಂತ ದೀರ್ಘ ಲಿಖಿತ ಸಂವಿಧಾನ. ಇದರಲ್ಲಿ 1.45 ಲಕ್ಷ ಶಬ್ದಗಳಿವೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಕೈಬರಹದಲ್ಲಿರುವ ಮೂಲ ಪ್ರತಿಗಳನ್ನು ಇಂದಿಗೂ ‘ಪಾರ್ಲಿಮೆಂಟ್ ಹೌಸ್ ಲೈಬ್ರರಿ’ಯಲ್ಲಿ ಹೀಲಿಯಂ ಅನಿಲ ತುಂಬಿದ ಪೆಟ್ಟಿಗೆಗಳಲ್ಲಿ ಸುಭದ್ರವಾಗಿ  ಇಡಲಾಗಿದೆ. ಸಂಪ್ರದಾಯ ಮತ್ತು ಬಳುವಳಿಯ ಚಿರಾಯು ದಾಖಲೆ ಇದಾಗಿದೆ.  

ಸಮಗ್ರ ಭಾರತದ ಆ ಕಾಲದ ಸುಪ್ರಸಿದ್ದ ನಾಯಕರು, ನ್ಯಾಯಾಂಗ ತಜ್ಞರು, ವಿಚಾರವಾದಿಗಳು ಮತ್ತು ಸಾಮಾಜಿಕ ನೇತಾರರನ್ನು ಸೇರಿಸಿ ಸಂವಿಧಾನ ಸಭೆಯ ರಚನೆಯಾಗಿತ್ತು ಎಂದರು. 

ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರವರು ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಲ್ಲಿ ನಂಬಿಕೆಯನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ. ಗಣತಂತ್ರದ ಅತಿದೊಡ್ಡ ಹಬ್ಬವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಅಸಮಾನತೆ ರಹಿತ ಸಮಾಜ ನಿರ್ಮಾಣಕ್ಕೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗ ತನ್ನ ಹೊಣೆಗಾರಿಕೆ ಮತ್ತು ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಬೇಕಾಗಿದೆ. ಇದೇ ಸಂವಿಧಾನಕ್ಕೆ ಸಲ್ಲಿಸಬಹುದಾದ ದೊಡ್ಡ ಗೌರವ. ಈ ನಿಟ್ಟಿನಲ್ಲಿ ನಾವೆಲ್ಲ ಸಂಕಲ್ಪಮಾಡೋಣ. 

ನಮ್ಮ ಸಂವಿಧಾನ, ನಮಗೆ ಅಪರಿಮಿತ ಹಕ್ಕುಗಳನ್ನು ಕೊಟ್ಟಿರುವಂತೆ, ಕರ್ತವ್ಯಗಳನ್ನೂ ಸೂಚಿಸಿದೆ. ನಮ್ಮ ಸಂವಿಧಾನದ ನಿರ್ದೇಶಕ ಸೂತ್ರಗಳು, ಭಾರತೀಯರಾದ ನಾವು ಎಂಥ ದೇಶವನ್ನು ರೂಪುಗೊಳಿಸಬೇಕೆಂಬ ಕನಸುಗಳನ್ನು ನೀಡಿದೆ. ಈ ಕನಸುಗಳು ಬರೀ ಸಂವಿಧಾನದ ಆಶಯಗಳಾಗಿ ಉಳಿಯದೇ ಸಾಕಾರಗೊಳ್ಳಬೇಕು. ಈ ದೇಶದ ಸಾರ್ವಭೌಮನಾದ ಜನ ಸಾಮಾನ್ಯನ ಬದುಕು ಸುಂದರವಾಗಬೇಕು. ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪವಂತಾಗಬೇಕು ಎಂದು ಹೇಳಿದರು. 

“ಭಾರತದ ಪ್ರಜೆಗಳಾದ ನಾವು ನಮ್ಮ ಸಂವಿಧಾನವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಆತ್ಮಾರ​‍್ಿತ ಮಾಡಿಕೊಂಡಿದ್ದೇವೆ. “ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ” ಇವು ಭಾರತ ರಾಜಕೀಯ ಪದ್ಧತಿಯ ನಾಲ್ಕು ಆಧಾರ ಸ್ಥಂಬಗಳು. ರಾಷ್ಟ್ರದ ಎಲ್ಲ ಪ್ರಜೆಗಳಿಗೂ ಸಾಮಾಜಿಕ ನ್ಯಾಯ, ಆರ್ಥಿಕ ನ್ಯಾಯ ಮತ್ತು ರಾಜಕೀಯ ನ್ಯಾಯವನ್ನು ದೊರಕಿಸಿಕೊಡುವುದೇ ನಮ್ಮ ಸಂವಿಧಾನದ ಮುಖ್ಯ ಗುರಿಯಾಗಿದೆ” ಎಂದರು. 

ಭಾರತದ ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಮ್ಮ ಸರ್ಕಾರ ಸರ್ವರನ್ನೂ ಒಳಗೊಂಡ, ಸರ್ವರನ್ನು ಬೆಸೆಯುವ ಮತ್ತು ಸರ್ವರಿಗೂ ಸಮಪಾಲು-ಸಮಬಾಳು ನೀಡಬೇಕೆಂಬ ಪ್ರಾಮಾಣಿಕ ಆಶಯದ ಸರ್ಕಾರವಾಗಿ ಬಡವರ, ದಮನಿತರ, ಶೋಷಿತರ ಏಳಿಗೆಗಾಗಿ ವಿಶೇಷ ಒತ್ತು ನೀಡಿದೆ. ಸಂಪತ್ತು, ಅಧಿಕಾರ ಮತ್ತು ಅವಕಾಶ ಸಮನಾಗಿ ಎಲ್ಲರಿಗೂ ಹಂಚಿಕೆಯಾಗಬೇಕು ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸಿಕೊಂಡು ಬಂದಿದ್ದೇವೆ. ನುಡಿದಂತೆ ನಡೆದಿದ್ದೇವೆ ಹಾಗೂ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ಜನತೆಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.  

ಜಿಲ್ಲೆಯಲ್ಲಿ ರೂ.500 ಕೋಟಿ ವೆಚ್ಚದಲ್ಲಿ ಸುಜ್ಜಿತವಾಗಿ ನಿರ್ಮಾಣ ಮಾಡಲಾದ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಲೋಕಾರೆ​‍್ಣಗೊಳಿಸಲಾಗಿದೆ. ರಾಜ್ಯದಲ್ಲೇ ಮಾದರಿ ವೈದ್ಯಕೀಯ ಕಾಲೇಜ್ ಇದಾಗಿದೆ.  ಜಿಲ್ಲೆಗೆ ಸೂಪರ್ ಮಲ್ಟಿಸ್ಪೆಷೆಲಿಟಿ  ಆಸ್ಪತ್ರೆ ಮಂಜೂರು ಮಾಡುವುದಾಗಿ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಯ 330 ಹಾಸಿಗೆಗಳನ್ನು 500 ಹಾಸಿಗೆಗೆ ಉನ್ನತೀಕರಿಸಲಾಗಿದೆ. ಆಸ್ಪತ್ರೆ ಉನ್ನತೀಕರಣ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ರೂ.20 ಕೋಟಿ ವೆಚ್ಚ ಮಾಡಲಾಗಿದೆ. ಶೀಘ್ರದಲ್ಲೇ ಜಿಲ್ಲೆಗೆ ಎಂ.ಐ.ಆರ್‌. ಯಂತ್ರ ಬರಲಿದೆ. ಇದರಿಂದ ರೋಗಿಗಳು ಚಿಕಿತ್ಸೆಗೆ ದಾವಣಗೆರೆ ಹಾಗೂ ಹುಬ್ಬಳ್ಳಿಗೆ ಹೋಗುವುದು ತಪ್ಪಲಿದೆ. 

ರೈತರ ಹಿತದೃಷ್ಟಿಯಿಂದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಜಿಲ್ಲೆಯಲ್ಲಿ ಮೆಕ್ಕಜೋಳ ಖರೀದಿ ಕೇಂದ್ರ ಆರಂಭಿಸಲಾಗಿದೆ. ಎರಡುವರೇ ವರ್ಷದಲ್ಲಿ  ಮಾನ್ಯ ಮುಖ್ಯಮಂತ್ರಿಗಳು ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳಿಗೆ ರೂ.1,420 ಮಂಜೂರು ಮಾಡಿದ್ದಾರೆ. ರಾಷ್ಟ್ರದಲ್ಲೇ ಮೆಣಸಿನಕಾಯಿ ಮಾರುಕಟ್ಟೆಗೆ ಪ್ರಸಿದ್ಧವಾದ ಬ್ಯಾಡಗಿ ಪಟ್ಟಣದಲ್ಲಿ  ರಸ್ತೆ ಕಾಮಗಾರಿಗೆ ರೂ.78 ಕೋಟಿ ಮಂಜೂರು ಮಾಡಲಾಗಿದೆ.  ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶೈಕ್ಷಣಿಕ ಹಾಗೂ ನೀರಾವರಿ ಕ್ರಾಂತಿಯಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪಕ್ಷಾತೀತವಾಗಿ ಹಾಗೂ ಜ್ಯಾತ್ಯಾತೀತವಾಗಿ ಎಲ್ಲರೂ ಒಗ್ಗಟಿನಿಂದ ಕೆಲಸಮಾಡೋಣ ಎಂದು ಕರೆ ನೀಡಿದರು. 

ಪ್ರಸಕ್ತ 2025-26 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 16,995.74 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 33,979 ಅರ್ಹ ರೈತರಿಗೆ ಎನ್‌.ಡಿ.ಆರ್‌.ಎಫ್‌/ಎಸ್‌.ಡಿ.ಆರ್‌.ಎಂ ಮಾರ್ಗಸೂಚಿ ಅನುಸಾರ  ಹಾಗೂ ರಾಜ್ಯ ಸರ್ಕಾರದ  ಹೆಚ್ಚುವರಿ ಪರಿಹಾರ  ರೂ.14.18 ಕೋಟಿ ಸೇರಿ ರೂ. 29.04 ಕೋಟಿ ಪರಿಹಾರ ವಿತರಿಸಲಾಗಿದೆ. ಮಳೆಯಿಂದ ಹಾನಿಯಾದ 217 ಮನೆಗಳ ಸಂತ್ರಸ್ಥರ ಕುಟುಂಬಗಳಿಗೆ ಎನ್‌.ಡಿ.ಆರ್‌.ಎಫ್‌/ಎಸ್‌.ಡಿ.ಆರ್‌.ಎಂ ಮಾರ್ಗಸೂಚಿ ಅನುಸಾರ ರೂ.1.45 ಕೋಟಿ ಪರಿಹಾರ ನೀಡಲಾಗಿದೆ. ಮಾನವ ಮತ್ತು ಜಾನವಾರು ಜೀವ ಹಾನಿಗೆ ರೂ.63 ಲಕ್ಷ ಪರಿಹಾರ  ನೀಡಲಾಗಿದೆ.  

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನೆರೆ ಹಾವಳಿ ಪ್ರದೇಶಗಳನ್ನು ಗುರುತಿಸಿ ವಿಪತ್ತು ಉಪಶಮನ ನಿಧಿಯಡಿ ತಡೆಗೋಡೆ, ರಾಜಕಾಲುವೆ, ಸಿ.ಡಿ.ನಿರ್ಮಾಣ ಒಳಗೊಂಡಂತೆ ರೂ.10.34 ಕೋಟಿ ವೆಚ್ಚದಲ್ಲಿ  09 ಕಾಮಗಾರಿಗಳನ್ನು ಕೈಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು. 

ಜಿಲ್ಲಾಧಿಕಾರಿಗಳಿಗೆ ಸನ್ಮಾನ:  ಇದೇ ಸಂದರ್ಭದಲ್ಲಿ ಉತ್ತಮ  ಜಿಲ್ಲಾ ಚುನಾಚಣಾಧಿಕಾರಿ ಪ್ರಶಸ್ತಿ ಪಡೆದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರನ್ನು ಗಣ್ಯರು ಸನ್ಮಾನಿಸಿದರು.  

ಸಾಧಕರಿಗೆ ಸನ್ಮಾನ: ಕ್ರೀಡೆ,  ಶಿಕ್ಷಣ, ಸಮಾಜ ಸೇವೆ,  ಪರಿಸರ ರಕ್ಷಣೆ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ 28 ಜನ ಸಾಧಕರನ್ನು, ಎಸ್‌.ಎಲ್‌.ಎಲ್‌.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು,  ಆರೋಗ್ಯ ಇಲಾಖೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. 

ಆಕರ್ಷಕ ಪಥಸಂಚಲನ: ಪರೇಡ ಕಮಾಂಡೆಂಟ್ ಶಂಕರಗೌಡ ಪಾಟೀಲ ಅವರ ನೇತೃತ್ವದಲ್ಲಿ ಸಶಸ್ತ್ರ ಮೀಸಲು ಪಡೆ,  ನಾಗರೀಕ ಸೇವಾ,  ಅಗ್ನಿಶಾಮಕ, ಅಬಕಾರಿ ದಳ, ಗೃಹರಕ್ಷಕ ದಳ,  ಎನ್‌.ಎಸ್‌.ಎಸ್, ಸ್ಕೌಟ್ಸ್‌ ಆಂಡ್ ಗೈಡ್ಸ್‌ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ವಿವಿಧ 15 ತಂಡಗಳಿಂದ ಆಕರ್ಷಕ ಪಥಸಂಚಲನ ಜರುಗಿತು. 

ಮಕ್ಕಳಿಂದ ನೃತ್ಯ:  ನಗರದ ಕೇಂದ್ರೀಯ ವಿದ್ಯಾಲಯ,  ಸರ್ಕಾರಿ ಉರ್ದು ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳು “ವಂದೇ ಮಾತರಂ” ಸೇರಿದಂತೆ  ರಾಷ್ಟ್ರಾಭಿಮಾನ  ಬಿಂಬಿಸುವ ದೇಶ ಭಕ್ತಿಗೀತೆಗಳಿಗೆ ಆಕರ್ಷಕ ನೃತ್ಯ ಮಾಡಿದರು. ವಿದ್ಯಾರ್ಥಿಗಳ ಕೈಯಲ್ಲ್ಲಿ ರಾಷ್ಟ್ರಧ್ವಜ ರಾರಾಜಿಸಿದವು. 

ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ವಿಧಾನಸಭೆ  ಉಪಾಧ್ಯಕ್ಷರಾದ ರುದ್ರ​‍್ಪ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಫ್‌.ಎನ್‌.ಗಾಜಿಗೌಡ್ರ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಎಂ.ಮೈದೂರ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ  ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಯಶೋಧಾ ವಂಟಗೋಡಿ , ಅಪರ ಜಿಲ್ಲಾಧಿಕಾರಿ ಡಾ.ನಾಗಾರಜ ಎಲ್‌., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಡಿಎಫ್‌ಒ ಅಕ್ಷಯ ಪ್ರಭಾಕರ, ಉಪ ವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಶೀಲ್ದಾರ  ಶರಣಮ್ಮ, ಕೊಟ್ರೇಶಪ್ಪ ಬಸೇಗಣ್ಣಿ, ಸಂಜೀವಕುಮಾರ ನೀರಲಗಿ ಇತರರು ಉಪಸ್ಥಿತರಿದ್ದರು.