ಬೆಂಗಳೂರು, ಏ 11, ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 7 ಹೊಸ ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 214ಕ್ಕೇರಿಕೆಯಾಗಿದೆ. ಮೈಸೂರಿನಲ್ಲಿ ಮತ್ತೆ ಐದು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ 47ಕ್ಕೇರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 72 ಸೋಂಕಿನ ಪ್ರಕರಣಗಳು ವರದಿಯಾಗಿವೆ. ಜ್ಯುಬಿಲಿಯೆಂಟ್ ಔಷಧ ಕಂಪನಿಯ ಸೋಂಕಿತ ಕಾರ್ಮಿಕರೊಂದಿಗೆ ಸಂಪರ್ಕ ಹೊಂದಿದ 46, 43, 27, 31, 26 ವರ್ಷದ ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟಿದೆ. ಇದನ್ನು ಹೊರತುಪಡಿಸಿ, ಬಿಬಿಎಂಪಿ ವ್ಯಾಪ್ತಿಯ 32 ವರ್ಷದ ಪುರುಷ, ಬೀದರ್ ನ 50 ವರ್ಷದ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಆರು ಮಂದಿ ಸೋಂಕಿನಿಂದ ಮೃತಪಟ್ಟಿದ್ದು, 37 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.