ಕಾಮ್ರೇಡ್ ಶಿವದಾಸ್ ಘೋಷ್‌ರ 49ನೇ ಸ್ಮರಣೋತ್ಸವ ಕಾರ್ಯಕ್ರಮ

ಕಾಮ್ರೇಡ್ ಶಿವದಾಸ್ ಘೋಷ್‌ರ 49ನೇ ಸ್ಮರಣೋತ್ಸವ ಕಾರ್ಯಕ್ರಮ 49th Commemoration Program of Comrade Shivdas Ghosh

ಧಾರವಾಡ, 16 ; ಎಸ್ ಯು ಸಿ ಐ ಕಮ್ಯುನಿಸ್ಟ್‌ ಪಕ್ಷದ ಧಾರವಾಡ ಜಿಲ್ಲಾ ಸಮಿತಿ ವತಿಯಿಂದ ಇಂದು ನಗರದ ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಕಾರ್ಮಿಕ ವರ್ಗದ ಮಹಾನ್ ನಾಯಕ ಮತ್ತು ಎಸ್ ಯು ಸಿ ಐ ಕಮ್ಯುನಿಸ್ಟ್‌ ಪಕ್ಷದ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಕಾಮ್ರೆಡ್ ಶಿವದಾಸ್ ಘೋಷ್ ರವರ 49 ನೇ ಸ್ಮರಣ ವಾರ್ಷಿಕದ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 

ಈ ಸಂಧರ್ಭದಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಸೆಕ್ರೆಟರಿಯೆಟ್ ಸದಸ್ಯರಾದ ಕಾಮ್ರೇಡ್ ರಾಮಾಂಜನಪ್ಪ ಆಲ್ದಳ್ಳಿಯವರು ಮಾತನಾಡುತ್ತಾ- ದೇಶ 79ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿದೆ. ಆದರೆ ದೊರೆತ ಸ್ವಾತಂತ್ರ್ಯದೇಶದ ದುಡಿಯುವ ಜನತೆಯ ಸ್ವಾತಂತ್ರ್ಯವಾಗಿರದೇ, ಬಂಡವಾಳಿಗರ ಸ್ವಾತಂತ್ರ್ಯ ವಾಗಿದೆ ಎಂದು ಕಳೆದ 79 ವರ್ಷಗಳಲ್ಲಿ ಸಾಬೀತಾಗಿದೆ. ತೀವ್ರ ಆರ್ಥಿಕ-ರಾಜಕೀಯ-ಸಾಂಸ್ಕೃತಿಕ ಬಿಕ್ಕಟ್ಟಿನಿಂದಾಗಿ ಜನರ ಬದುಕು ಸಂಕಷ್ಟಕ್ಕೀಡಾಗಿದೆ. ಅಂದು ಕೇವಲ ರಾಜಕೀಯ ಅಧಿಕಾರ ಬ್ರಿಟಿಷರ ಕೈಯಿಂದ ಭಾರತದ ಬಂಡವಾಳಶಾಹಿಗಳ ಕೈಗೆ ಹಸ್ತಾಂತರವಾಯಿತು. ಹಾಗಾಗಿ ಆಗಸ್ಟ್‌ 15 ನೈಜ ವಿಮೋಚನೆಗಾಗಿ ಸಂಕಲ್ಪ ತೋಡುವ ದಿನವಾಗಿದೆ ಎಂದು ಅರಿತ ಮಹಾನ್ ಮಾರ್ಕ್ಸ್‌ ವಾದಿ ಚಿಂತಕ ಕಾಮ್ರೇಡ್ ಶಿವದಾಸ್ ಘೋಷ್ ರವರು 1948ರಲ್ಲೇ  ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯ ಆಶಯದೊಂದಿಗೆ ಎಸ್ ಯು ಸಿ ಐ ಕಮ್ಯುನಿಸ್ಟ್‌ ಪಕ್ಷವನ್ನು ಹುಟ್ಟುಹಾಕಿದರು. ಅವರ ಚಿಂತನೆ,ವಿಚಾರಧಾರೆ ಕಾರ್ಮಿಕ ವರ್ಗಕ್ಕೆ ಒಂದು ಬಲಿಷ್ಠ ಅಸ್ತ್ರವಾಗಿದೆ, ಜೀವನ ಸಿದ್ಧಾಂತವಾಗಿದೆ.  

1917ರಲ್ಲಿ ಲೆನಿನ್ ನೇತೃತ್ವದಲ್ಲಿ ಸಮಾಜವಾದಿ ಕ್ರಾಂತಿಯ ಮೂಲಕ ಲಾಭದಾಹಿ ಶೋಷಕ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆದು ಮಾನವನಿಂದ ಮಾನವನ ಶೋಷಣೆಯನ್ನು ಕೊನೆಗಾಣಿಸಿ, ಕಾರ್ಮಿಕರನ್ನು ದೇಶದ ಸಂಪತ್ತಿನ ಒಡೆಯರನ್ನಾಗಿ ಮಾಡಿದ  ಸೋವಿಯತ್ ರಷ್ಯಾ ನಮಗೆ ಮಾದರಿಯಾಗಿದೆ. ಈ ಸತ್ಯವನ್ನು ಅರ್ಥಮಾಡಿಕೊಳ್ಳಲು, ಜೀವನದಲ್ಲಿ ಅಳವಡಿಸಿಕೊಳ್ಳಲು ಶಿಕ್ಷಣ ಮಾನದಂಡವಲ್ಲ. ಬದಲಾಗಿ ನಿಸ್ವಾರ್ಥ ತೆರೆದ ಮನಸ್ಸು ಬೇಕು. ಹಳೆಯ ಮೌಲ್ಯ ನಂಬಿಕೆಗಳಿಂದ ಹೊರಬಂದು, ಹೊಸ ವೈಜ್ಞಾನಿಕ, ಜೀವನ ಮೌಲ್ಯಗಳನ್ನು ಅನುಸರಿಸಬೇಕು. ವೇದನೆಯಲ್ಲಿರುವ ಕೋಟ್ಯಂತರ ಜೀವಗಳ ವಿಮೋಚನೆಗಾಗಿ ನಾವು ಬಲಿಷ್ಠ ಸಂಘಟನಕಾರರಾಗುತ್ತಾ, ಸಾಮಾನ್ಯಜನರಿಗೆ ಘೋಷ್ ರವರ ಚಿಂತನೆಗಳನ್ನು ಮನವರಿಕೆ ಮಾಡಿಸಬೇಕು. ಘೋಷ್ ರವರು 25 ನೇ ವಯಸಿನಲ್ಲಿ ಅಂದು ಕಟ್ಟಿದ್ದ ನೈಜ ಕ್ರಾಂತಿಕಾರಿ ಪಕ್ಷ ಎಸ್ ಯು ಸಿ ಐ ಇಂದು ಇಡೀ ದೇಶದ 26 ರಾಜ್ಯಗಳಲ್ಲಿ ಒಂದು ಕುಟುಂಬದಂತೆ ಜಾತಿ, ಧರ್ಮ, ಭಾಷೆ, ಪ್ರದೇಶ ಮತ್ತು ರಕ್ತಸಂಭಂದದ ಗಡಿಗಳನ್ನು ಮೀರಿ ಗಟ್ಟಿಯಾಗಿ ಬೆಳೆಯುತ್ತಿದೆ. ಇಂದು ಅವರ ಸ್ಮರಣ ದಿನದ ಸಂದರ್ಭದಲ್ಲಿ ಅವರು ಕಂಡ ಕನಸು ಶೋಷಣೆಮುಕ್ತ ಸಮಾಜವಾದಿ ಸಮಾಜ ನಿರ್ಮಾಣದ ಹೋರಾಟವನ್ನು ತೀವ್ರಗೊಳಿಸುವ ಪಣ ತೊಡೋಣ ಎಂದು ಕರೆಕೊಟ್ಟರು.  

ಈಲ್ಲಾ ಸಮಿತಿ ಹಿರಿಯ ಸದಸ್ಯರಾದ ಕಾಮ್ರೇಡ್ ಗಂಗಾಧರ್ ಬಡಿಗೇರ್ ಮಾತನಾಡುತ್ತಾ ಹಿ 1976 ಆಗಸ್ಟ್‌ 5 ರಂದು ಕಾಮ್ರೇಡ್  ಶಿವದಾಸ್ ಘೋಷ್ ನಮ್ಮಿಂದ ದೈಹಿಕವಾಗಿ ದೂರವಾದರು, ಅವರ ಚಿಂತನೆಗಳು ಇಂದಿಗೂ ಅಮರವಾಗಿ ಉಳಿದಿವೆ. ಅವರು ಶೋಷಿತರ, ಮರ್ದಿತರ ಧ್ವನಿಯಾಗಿದ್ದರು. ಕೇವಲ 13 ನೇ ವಯಸಿನಲ್ಲಿ ಕ್ರಾಂತಿಕಾರಿ ಬದುಕಿಗೆ ಕಾಲಿಟ್ಟ ಅವರು ಅನುಶೀಲನ್ ಸಮಿತಿಯ ಸಕ್ರಿಯ ಕಾರ್ಯಯೋಧರಾಗಿದ್ದರು. ಸತ್ಯದ ಹುಡುಕಾಟದ  ಮನಸ್ಸು ಅವರನ್ನು ರಾಜಿರಹಿತ ನಾಯಕನನ್ನಾಗಿ ಬೆಳೆಸಿತು. ಸ್ವಾತಂತ್ರ್ಯಕ್ಕಾಗಿ ದುಡಿದು ಪ್ರಾಣತೆತ್ತ ಮಹನೀಯರ, ಕ್ರಾಂತಿಕಾರಿಗಳ ನೈಜ ಉತ್ತರಾಧಿಕಾರಿಯಾಗಿ ಅವಿಶ್ರಾಂತ ಕ್ರಾಂತಿಕಾರಿ ಹೋರಾಟವನ್ನು ನಡೆಸಿದರು. ಅವರು ದುಡಿಯುವ ಜನತೆಯ ಶಿಕ್ಷಕ, ಮಾರ್ಗದರ್ಶಕ. ಅವರ ವಿಚಾರಧಾರೆಯ ದಾರೀದೀಪದ ಬೆಳಕಿನಲ್ಲಿ ನಾವು ನಡೆಯಬೇಕಿದೆ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಲಕ್ಷ್ಮಣ್ ಜಡಗನ್ನವರ ವಹಿಸಿ ಮಾತನಾಡಿದರು- ಇಂದು ಜನಸಮುದಾಯ ಎದುರಿಸುತ್ತಿರುವ ಬಡತನ, ನಿರುದ್ಯೋಗ, ಬೆಲೆ ಏರಿಕೆ, ಜಾತಿ-ಕೋಮು ಗಲಭೆ, ಮಹಿಳಾ ದೌರ್ಜನ್ಯ, ಸಾಂಸ್ಕೃತಿಕ ಅಧಪತನಕ್ಕೆ ಉತ್ತರ ಶಿವದಾಸ್ ಘೋಷ ರವರ ಚಿಂತನೆಗಳಲ್ಲಿ ಅಡಕವಾಗಿದೆ. ಅದನ್ನು ಜೀವನದ ತತ್ವಶಾಸ್ತ್ರವನ್ನಾಗಿ ಅಳವಡಿಸಿಕೊಂಡು ಪ್ರತಿಯೊಬ್ಬರೂ ಹೊಸ ಮನುಷ್ಯರಾಗಲು, ಕ್ರಾಂತಿಕಾರಿಗಳಾಗಲು ಶಪಥ ತೊಡಬೇಕು. 

ಆ ನಿಟ್ಟಿನಲ್ಲಿ ಹಳ್ಳಿ -ಬಡಾವಣೆ, ಕೊಳಗೇರಿಗಳಲ್ಲಿ ದುಡಿಯುವ ಜನರಿಗೆ ವಿಚಾರಕೊಟ್ಟು ಸಂಘಟಿಸಲು ಶ್ರಮಿಸಬೇಕು ಎಂದರು. 

ಈ ಸಂಧರ್ಭದಲ್ಲಿ ಪಕ್ಷದ ಸದಸ್ಯರುಗಳು, ಬೆಂಬಲಿಗರು, ಹಿತೈಷಿಗಳು ಭಾಗವಹಿಸಿದ್ದರು.