ಕರೀಂನಗರ ಸಮೀಪ ಟಿಜಿಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗೆ ಬೆಂಕಿ; 41 ಪ್ರಯಾಣಿಕರು ಸುರಕ್ಷಿತವಾಗಿ ಪಾರು

ಕರೀಂನಗರ ಸಮೀಪ ಟಿಜಿಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗೆ ಬೆಂಕಿ; 41 ಪ್ರಯಾಣಿಕರು ಸುರಕ್ಷಿತವಾಗಿ ಪಾರು 41 Passengers Escape Unhurt as TGSRTC Electric Bus Catches Fire Near Karimnagar

ಹೈದರಾಬಾದ್, ಜೂನ್ 21 : ಕರೀಂನಗರ ಜಿಲ್ಲೆಯ ತಿಮ್ಮಾಪುರ ಹೊರವಲಯದ ಅಲುಗೂನೂರು ಸಮೀಪ ಭಾನುವಾರ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಎಲೆಕ್ಟ್ರಿಕ್ ಬಸ್‌ಗೆ ಬೆಂಕಿ ಕಾಣಿಸಿಕೊಂಡ ಘಟನೆ ಸಂಭವಿಸಿದ್ದು, ಸುಮಾರು 41 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಕರೀಂನಗರದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ಪರಿಸ್ಥಿತಿಯನ್ನು ಗಮನಿಸಿದ ಚಾಲಕ ಮತ್ತು ನಿರ್ವಾಹಕರು ತಕ್ಷಣ ಬಸ್‌ನ್ನು ನಿಲ್ಲಿಸಿ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು.

ಚಾಲಕ ಹಾಗೂ ಸ್ಥಳೀಯ ನಿವಾಸಿಗಳ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಆದರೆ ಬೆಂಕಿ ನಂದಿಸುವಷ್ಟರಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ 41 ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಈ ಘಟನೆ ಹಿನ್ನೆಲೆಯಲ್ಲಿ ಕರೀಂನಗರ–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು.

ಪ್ರಾಥಮಿಕ ತನಿಖೆಯ ಪ್ರಕಾರ, ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ. ಘಟನೆಯ ನಿಖರ ಕಾರಣವನ್ನು ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.