30ವರ್ಷಾಚರಣೆಎಂ.ಜಿ ರಸ್ತೆಯಲ್ಲಿ ಮಧ್ಯರಾತ್ರಿಯಲ್ಲಿ ನಡೆಯುವ ಹೊಸ ವರ್ಷಾಚರಣೆ ರದ್ದುಗೊಳಿಸುವಂತೆ ಒತ್ತಾಯ

ಬೆಂಗಳೂರು,ಡಿ.28, ಹೊಸ ವರ್ಷಾಚರಣೆ ಪ್ರಯುಕ್ತ ಡಿ.31ರ ರಾತ್ರಿ ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ನಡೆಯುವ ಆಚರಣೆಗಳನ್ನು ರದ್ದುಗೊಳಿಸಬೇಕೆಂದು ಜಂಗಮಮೀಡಿಯಾ ಪ್ರೈವೇಟ್ ಲಿಮಿಟೆಡ್ ಬಸವ ಟಿವಿ ನಿರ್ದೇಶಕ ಈ. ಕೃಷ್ಣಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಸ್ತೆಯಲ್ಲಿ ವರ್ಷಾಚರಣೆ ಹೆಸರಿನಲ್ಲಿ ಯುವಕ ಯುವತಿಯರು ಒಟ್ಟಾಗಿ ಸೇರಿ ಕಂಠ ಪೂರ್ತಿ ಕುಡಿದು, ಸ್ವೇಚ್ಛಾಚಾರಿಗಳಂತೆ ಕುಣಿದು, ಕುಪ್ಪಳಿಸಿ ಅಸಭ್ಯ ರೀತಿಯಲ್ಲಿ ವರ್ತಿಸುತ್ತಾರೆ. ಇದು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಇಂತಹ ಕೆಟ್ಟ ಆಚರಣೆಯನ್ನು ಸರ್ಕಾರ ಹತ್ತಿಕ್ಕಬೇಕು ಹಾಗೂ ಈ ಆಚರಣೆಗೆ ಸರ್ಕಾರ ಅನುವು ಮಾಡಿಕೊಡಬಾರದು ಎಂದು ಅವರು ಒತ್ತಾಯಿಸಿದರು.ಸರ್ಕಾರ ಇಂತಹ ಅನಿಷ್ಠ ವರ್ಷಾಚರಣೆಗೆ 11 ಸಾವಿರ ಪೊಲೀಸರು, 270 ಹೋಯ್ಸಳ ವಾಹನಗಳನ್ನು ಹಾಗೂ 1200 ಚೀತಾ ಬೈಕ್ ಗಳನ್ನು‌ ನಿಯೋಜಿಸಿದ್ದು ಈ ಸಂದರ್ಭದಲ್ಲಿ ಅತ್ಯಾಚಾರ ಹಾಗೂ ಗಲಭೆಗಳು ಸಂಭವಿಸಿದರೆ ಅದಕ್ಕೆ ಸರ್ಕಾರವೇ ನೇರ ಹೊಣೆಯಾಗಲಿದ್ದು, ಸರ್ಕಾರದ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.ಸಾಹಿತಿ ಜರಗನಹಳ್ಳಿ ಶಿವಶಂಕರ್ ಮಾತನಾಡಿ, ಮದ್ಯಪಾನವನ್ನು ವಿರೋಧಿಸುತ್ತಿದ್ದ ಮಹಾತ್ಮ ಗಾಂಧಿ ಅವರ ಹೆಸರನ್ನು ಹೊಂದಿರುವ ಎಂ.ಜಿ‌ ರಸ್ತೆಯಲ್ಲಿ ಇಂತಹ ಕೆಟ್ಟ ರೀತಿಯ ವರ್ಷಾಚರಣೆಯ ಅನಾಚಾರಕ್ಕೆ ಅನುವು ಮಾಡಿಕೊಟ್ಟಿರುವ ಸರ್ಕಾರದ ನಿಲುವು ಸರಿಯಲ್ಲ. ಈ ಕೆಟ್ಟ ಆಚರಣೆಗಳಿಂದಾಗಿ ಶಾಲಾ ಕಾಲೇಜಿನ ಮಕ್ಕಳು  ಹಾಗೂ ಯುವ ಜನತೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.