2ಡಾ. ಮೌಲಾನಾ ಅಬುಲ್ ಕಲಾಂ ಅವರ ಜನ್ಮದಿನ ಆಚರಣೆ

2ಡಾ. ಮೌಲಾನಾ ಅಬುಲ್ ಕಲಾಂ ಅವರ ಜನ್ಮದಿನ ಆಚರಣೆ 2Dr. Maulana Abul Kalam's birthday celebration

ಬೆಳಗಾವಿ 12: ದೇಶದಲ್ಲಿ ಜ್ಯಾತ್ಯಾತೀತ ಶಿಕ್ಷಣ ವ್ಯವಸ್ಥೆ ತರುವಲ್ಲಿ ಡಾ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಸ್ವತಂತ್ರ ಭಾರತದ ಪ್ರಥಮ ಶಿಕ್ಷಣ ಮಂತ್ರಿಯಾಗಿದ್ದ ಅವರು, ಯುವ ಪೀಳಿಗೆಗಳನ್ನು ಶಿಕ್ಷಣದ ತಳಹದಿಯಲ್ಲಿ ಗಟ್ಟಿಯಾಗಿ ನಿರ್ಮಿಸಿದರು ಎಂದು ಹೈದರಾಬಾದಿನ ಮೌಲಾನಾ ಆಜಾದ್ ರಾಷ್ಟ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮುಷ್ತಾಕ್ ಅಹಮದ್ ಪಟೇಲ್ ಹೇಳಿದರು.  

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಮಂಗಳವಾರದಂದು ಡಾ. ಮೌಲಾನಾ ಅಬುಲ್ ಕಲಾಂ ಅವರ ಜನ್ಮದಿನ ಪ್ರಯುಕ್ತ ಆಯೋಜಿಸಿದ ರಾಷ್ಟ್ರೀಯ ಶಿಕ್ಷಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

ಮೌಲಾನಾ ಅವರು ಮೂಲಭೂತ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರು. ದೇಶದ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮುನ್ನಲೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ವಯಂ ಕೇಂದ್ರಿತ ವ್ಯಕ್ತಿಯಾದ ಮೌಲಾನಾ ಅವರು ಒಬ್ಬ ಕವಿ, ಲೇಖಕ, ಸ್ವಾತಂತ್ಯ ಹೋರಾಟಗಾರ, ಪತ್ರಕರ್ತ, ಶಿಕ್ಷಣ ತಜ್ಞ, ರಾಜಕಾರಣಿ ಮತ್ತು ಪ್ರವಾಸಿಗರಾಗಿ ಎಲ್ಲ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು.  

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ, ರಫೀಕ್ ಭಂಡಾರಿ ಮಾತನಾಡಿ ಮೌಲಾನಾ ಅವರ ತತ್ವಗಳನ್ನ, ನೀಡಿದ ಬೋಧನೆಗಳನ್ನ ವಿಶ್ವವಿದ್ಯಾಲಯ ಅತ್ಯಂತ ಕಾಳಜಿ ವಹಿಸಿ ಕೆಲಸ ಮಾಡುತ್ತಿದೆ. ಅವರ ಇಂಡಿಯಾ ವಿನ್ಸ್‌ ಫ್ರೀಡಂ ಕೃತಿಯನ್ನ ವಿಧ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರು ಓದಬೇಕು ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕುಲಪತಿ ಪ್ರೊ. ಸಿ. ಎಂ ತ್ಯಾಗರಾಜ್ ಮಾತನಾಡಿ, ಶಿಕ್ಷಣದಿಂದ ಜೀವನ ವಿಸ್ತಾರವಾಗುತ್ತದೆ. ವಿಧ್ಯಾರ್ಥಿಗಳು ವಿಚಾರಗಳನ್ನ ವಿವೇಕದಿಂದ ಗ್ರಹಿಸಬೇಕು. ಕೇವಲ ಪುಸ್ತಕ ಓದಿ ಪರೀಕ್ಷೆ ಬರೆಯುವುದು ಶಿಕ್ಷಣದ ಮೂಲ ಉದ್ದೇಶ ಅಲ್ಲ, ಬದಲಿಗೆ ಮೌಲಾನಾ ಅಬುಲ್ ಕಲಾಂ ಅವರಂತೆ ಶಿಕ್ಷಣದ ಮೇಲೆ ಪ್ರೀತಿ ಮತ್ತು ಕಾಳಜಿವಹಿಸಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.  

ಕುಲಸಚಿವ ಸಂತೋಷ್ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ. ಡಿ. ಎನ್‌. ಪಾಟೀಲ್, ಹಣಕಾಸು ಅಧಿಕಾರಿ ಎಂ.ಎ.ಸಪ್ನಾ , ಪ್ರೊ.ಕೆ.ಕಾಂತರಾಜು, ಆರ್‌.ಎಚ್‌. ಬಾಲಗಾವಿ, ಡಾ. ರಶ್ಮಿ ಪೈ  ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.