ವುಹಾನ್, ಫೆ 10, ಚೀನಾದ ಹುಬೈ ಪ್ರಾಂತ್ಯದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಾಣು ಸೋಂಕು 2618 ಹೊಸ ಪ್ರಕರಣಗಳಲ್ಲಿ ದೃಢಪಟ್ಟಿದ್ದು ಮತ್ತೆ 91 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ವುಹಾನ್ ನಲ್ಲಿ 1,921 ಹೊಸ ಸೋಂಕು ಪ್ರಕರಣಗಳು ಮತ್ತು ಇನ್ನೂ 73 ಸಾವು ಸಂಭವಿಸಿದೆ ಎಂದು ಹುಬೈ ಪ್ರಾಂತೀಯ ಆರೋಗ್ಯ ಆಯೋಗ ತಿಳಿಸಿದೆ.356 ರೋಗಿಗಳು ಚಿಕಿತ್ಸೆಯಿಂದ ಗುಣಮುಖರಾಗಿದ್ದು ಅವರನ್ನು ಭಾನುವಾರ ಆಸ್ಪತ್ರೆಯಿಂದ ವಾಪಸ್ ಕಳುಹಿಸಲಾಗಿದೆ. ಒಟ್ಟು 1795 ಜನರು ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ.ಭಾನುವಾರದ ವೇಳೆಗೆ ಹುಬೈ ನಲ್ಲಿ 29631 ಕೊರೊನಾ ಸೋಂಕು ದೃಢಪಟ್ಟ ಪ್ರಕರಣಗಳು ದಾಖಲಾಗಿದ್ದು 871 ಜನರು ಈ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇನ್ನೂ 5505 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.