ಮಳೆ , ಪ್ರವಾಹದಿಂದ ಆಹಾರ ಉತ್ಪಾದನೆಯಲ್ಲಿ ಶೇಕಡ 25-30 ರಷ್ಟು ಕುಸಿತ

ಬೆಂಗಳೂರು ನ, 12 :     ಕಳೆದ ವರ್ಷದ ಬರಗಾಲ ರಾಜ್ಯದ  ರೈತರಿಗೆ  ಸಾಕಷ್ಟು ನಷ್ಟ ಉಂಟು ಮಾಡಿದ್ದರೆ ಈ ವರ್ಷ , ಭಾರಿ ಮಳೆ , ಪ್ರವಾಹದಿಂದ ಆಹಾರ ಉತ್ಪಾದನೆಯಲ್ಲಿ ಶೇಕಡಾ 25-30ರಷ್ಟು ಕುಸಿತ  ಉಂಟಾಗಲಿದೆ.  ರಾಜ್ಯದ ಅನೇಕ ಭಾಗಗಳಲ್ಲಿ ವ್ಯಾಪಕ ಪ್ರವಾಹದಿಂದಾಗಿ ಹಿಂಗಾರು ಹಂಗಾಮಿನಲ್ಲಿ  ಭಾರಿ ನಷ್ಟವಾಗಿರುವುದರಿಂದ  ಆಹಾರ ಉತ್ಪಾದನೆಯಲ್ಲಿ ಕುಸಿತ ವಾಗಲಿದೆ ಎಂದು  ಕೃಷಿ ಅಧಿಕಾರಿಗಳು ಆತಂಕ ತೋಡಿಕೊಂಡಿದ್ದಾರೆ.    ಆಹಾರ ಧಾನ್ಯಗಳ ಜೊತೆಗೆ  ಬೇಳೆಕಾಳುಗಳ ಉತ್ಪಾದನೆಯಲ್ಲೂ  ಶೇಕಡಾ 25-30ರಷ್ಟು ಕುಸಿತ  ಕಾಣಲಿದೆ. ಕೃಷಿ ಇಲಾಖೆ ಮೂಲಗಳ  ಪ್ರಕಾರ, ರಾಜ್ಯವು 2019 ಕ್ಕೆ 110 ಲಕ್ಷ ಟನ್ ಆಹಾರ  ಉತ್ಪಾದನೆ ಗುರಿ ನಿಗದಿಪಡಿಸಿದ್ದರೂ , ಪ್ರತಿಕೂಲ ಪರಿಸ್ಥಿತಿಯ  ಕಾರಣ ಈಗ   ಕೇವಲ 80-85 ಲಕ್ಷ ಟನ್ ಮಾತ್ರ ಉತ್ಪಾದನೆ ಆಗಬಹುದು ಎಂದೂ  ಹೇಳಲಾಗಿದೆ. ಇದರ ಜೊತೆಗೆ   75 ಲಕ್ಷ ಹೆಕ್ಟೇರ್ ತೋಟದ ಬೆಳೆಯ ಪೈಕಿ  ಮಳೆಯ ಕಾರಣ    7.5 ಲಕ್ಷ ಹೆಕ್ಟೇರ್ ಬೆಳೆ ಮಳೆ,  ಪ್ರವಾಹದಿಂದ ಹಾಳಾಗಿದೆ.   ಕೃಷಿ ಇಲಾಖೆಯ  ವರದಿಗಳ ಪ್ರಕಾರ,ಇಲ್ಲಿಯವರೆಗೆ  33 ಲಕ್ಷ ಹೆಕ್ಟೇರ್  ಹಿಂಗಾರು ಬೆಳೆ ಬಿತ್ತನೆಯಾಗಬೇಕಿತ್ತು ತು ಆದರೆ ಈಗ ಕೇವಲ 12 ಲಕ್ಷ ಹೆಕ್ಟೇರ್ ಮಾತ್ರ  ಬಿತ್ತನೆಯಾಗಿದೆ ಎಂದು  ಅಧಿಕಾರಿಯೊಬ್ಬರು ಹೇಳಿದ್ದಾರೆ.