ಹಾರೂಗೇರಿಯಲ್ಲಿ ಶ್ರೀ ಚನ್ನವೃಷಭೇಂದ್ರರ 173ನೇ ಜಯಂತ್ಯೋತ್ಸವ ತೊಟ್ಟಿಲೋತ್ಸವ

ಹಾರೂಗೇರಿಯಲ್ಲಿ ಶ್ರೀ ಚನ್ನವೃಷಭೇಂದ್ರರ 173ನೇ ಜಯಂತ್ಯೋತ್ಸವ ತೊಟ್ಟಿಲೋತ್ಸವ 173rd birth anniversary of Sri Channavrishabhendra celebrated at Harugeri

ಹಾರೂಗೇರಿ  25: ಹಾರೂಗೇರಿ :   ಚನ್ನವೃಷಭೇಂದ್ರ ದೇವರಕೊಂಡಜ್ಜನವರು ಲೀಲಾಮೂರ್ತಿಗಳು. ಶತಮಾನಗಳ ಕಾಲ ಭೂಮಿಯ ಮೇಲಿನ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸಿ, ಧರ್ಮವನ್ನು ರಕ್ಷಿಸಿ, ಪವಾಡಗಳನ್ನು ಮಾಡಿ, ಭಕ್ತರ ಆರಾಧ್ಯ ದೈವರಾದ ಪವಾಡ ಪುರುಷರು ಎಂದು ಇಂಚಲದ   ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ   ಚನ್ನವೃಷಭೇಂದ್ರ ಲೀಲಾಮಠದಲ್ಲಿ ಶುಕ್ರವಾರ ನಡೆದ   ಚನ್ನವೃಷಭೇಂದ್ರ ದೇವರಕೊಂಡಜ್ಜನವರ 173ನೇ ಹುಟ್ಟುಹಬ್ಬದ ನಿಮಿತ್ತ ಹಮ್ಮಿಕೊಳ್ಳಲಾದ ತೊಟ್ಟಿಲೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. 

ಸಾಧು, ಸತ್ಪುರುಷರು, ಜ್ಞಾನಿಗಳು ನೆಲೆಸಿದ ಈ ಭೂಮಿಯೇ ಪುಣ್ಯಕ್ಷೇತ್ರ. ದಾನ, ಧರ್ಮಗಳಿಂದ ಸಿರಿ ಸಂಪತ್ತು ವೃದ್ಧಿಸುತ್ತದೆ. ಮನುಷ್ಯ ಶಾಶ್ವತ ಸುಖವನ್ನು ಪಡೆಯಲು ಪುಣ್ಯಕಾರ‌್ಯಗಳನ್ನು ಮಾಡುತ್ತಿರಬೇಕು. ಸತ್ಸಂಗಗಳಲ್ಲಿ ಪಾಲ್ಗೊಂಡು, ಆಧ್ಯಾತ್ಮಿಕ ಜ್ಞಾನವನ್ನು ಗಳಿಸುತ್ತ, ಸದ್ಗುರುವಿನ ಕೃಪಾಶೀರ್ವಾದದಿಂದ ಭಕ್ತರು ಇಷ್ಟಾರ್ಥಗಳನ್ನು ಪಡೆದುಕೊಳ್ಳಬೇಕು.  

ಹಡಗಿನಾಳದ   ಮಲ್ಲೇಶ್ವರ ಶರಣರು ಆಶೀರ್ವಚನ ನೀಡುತ್ತ   ಡಾ.ಶಿವಾನಂದ ಭಾರತಿ ಅಜ್ಜನವರು   ಚನ್ನವೃಷಭೇಂದ್ರರ ಪ್ರತಿರೂಪ. ಅವರ ದಿವ್ಯ ಶಕ್ತಿಯಿಂದ ಹಾರೂಗೇರಿಯಲ್ಲಿ ಸಮಾನತೆ, ಜಾತ್ಯಾತೀತ ಮಠ ನಿರ್ಮಾಣಗೊಂಡಿದೆ. ಭಕ್ತರ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿ ಶ್ರೀಮಠಕ್ಕಿದೆ ಎಂದರು. 

ಡಾ.ಶಿವಾನಂದ ಭಾರತಿ ಮಹಾಸ್ವಾಮಿಗಳವರು   ಚನ್ನವೃಷಭೇಂದ್ರ ಅಜ್ಜನವರ ಕತೃ ಗದ್ದುಗೆಗೆ ರುದ್ರಾಭಿಷೇಕ, ಪೂಜೆ ಹಾಗೂ ಸುವರ್ಣ ಕೀರೀಟ ಧಾರಣೆ ಮಾಡಿ, ದೇವರಕೊಂಡಜ್ಜನವರ ಬೆಳ್ಳಿ ಮೂರ್ತಿಯನ್ನು ತೊಟ್ಟಿಲಲ್ಲಿಟ್ಟು ತೂಗಿದರು. ನಂತರ ಭಕ್ತರು ಶ್ರೀ ದೇವರಕೊಂಡಜ್ಜವರ ಕುರಿತು ಜೋಗುಳ ಪದ, ಲಾಲಿಹಾಡು, ಪಾದಪೂಜೆ ನೇರವೇರಿಸಿ, ದೇವರಕೊಂಡಜ್ಜನವರ 173ನೇ ಹುಟ್ಟುಹಬ್ಬವನ್ನು ಭಕ್ತಿ ಭಾವದಿಂದ ಆಚರಿಸಿದರು. 

ಶ್ರೀಮಠದ ಸದ್ಭಕ್ತರಾದ ಶಿವಗೊಂಡ ಧರ್ಮಟ್ಟಿ, ವಿಠ್ಠಲರಾವ ಬಂತಿ, ಬಾಬು ಪರಮಗೌಡರ, ಶ್ರೀಶೈಲಗೌಡ ಉಮರಾಣಿ, ಎಸ್‌.ಎ.ದಟವಾಡ, ಲಕ್ಷ್ಮಣ ಸದಲಗಿ, ನೇಮಿನಾಥ ಕೊತ್ತಲಗಿ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ರಾಜು ಕರ್ಣವಾಡಿ, ತಮ್ಮಣ್ಣಿ ಕುರಿ, ವಿಜಯ ಬಂತಿ, ಸುರೇಶ ಅರಕೇರಿ, ಗೋಪಾಲ ಧರ್ಮಟ್ಟಿ, ರಾಘವೇಂದ್ರ ದೇಶಪಾಂಡೆ, ಲಾಲಸಾಬ ಜಮಾದಾರ, ಭಗವಂತ ಸೂರಣ್ಣವರ, ಸುರೇಶ ಧರ್ಮಟ್ಟಿ, ಚನ್ನಬಸು ಸದಲಗಿ, ಸಾಬು ಸನದಿ, ಮಹಾದೇವ ಲುಡುಬುಡೆ, ಜ್ಯೋತೆಪ್ಪ ಉಮರಾಣಿ, ಮನ್ವಿತ ಅರಕೇರಿ, ಮಲ್ಲಪ್ಪ ಗುರವ ಹಾಗೂ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು. 

ಶ್ರೀಮಠದ ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ಮಂಗಲ ಗೀತೆ ಹಾಡಿದರು.