14 ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಪ್ರಗತಿಯಲ್ಲಿ: ಬಿಗಿ ಪೊಲೀಸ್ ಬಂದೋಬಸ್ತ್

ಬೆಂಗಳೂರು, ನ.12 :      ರಾಜ್ಯದ ವಿವಿಧ ಜಿಲ್ಲೆಗಳ ಕೆಲವೆಡೆ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಆರಂಭಗೊಂಡಿದ್ದು, ಸಂಜೆ 6 ಗಂಟೆವರೆಗೆ ನಡೆಯಲಿದೆ. 2 ಮಹಾನಗರ ಪಾಲಿಕೆ, 6 ನಗರಸಭೆ, 3 ಪುರಸಭೆ, 3 ಪಟ್ಟಣ ಪಂಚಾಯಿತಿಗಳಿಗೆ ಇಂದು ಮತದಾನ ಪ್ರಗತಿಯಲ್ಲಿದೆ. ದಾವಣಗೆರೆ ಮಹಾನಗರ ಪಾಲಿಕೆ, ಮಂಗಳೂರು ಮಹಾನಗರ ಪಾಲಿಕೆ, ಚಿಕ್ಕಬಳ್ಳಾಪುರ, ಕನಕಪುರ, ಕೋಲಾರದ 3 ನಗರಸಭೆಗಳಿಗೆ ಮತದಾನ ನಡೆಯುತ್ತಿದೆ. ಮಾಗಡಿ ಪುರಸಭೆ, 3 ಪಟ್ಟಣ ಪಂಚಾಯಿತಿಗಳಿಗೂ ಮತದಾನ ನಡೆಯುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್ಗ್ಳಿಗೆ ಇಂದು ಬೆಳಗ್ಗೆ 7ಗಂಟೆಯಿಂದ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದೆ. ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ನಗರದ ಲೇಡಿಹಿಲ್ ಚರ್ಚೆ ಸಮೀಪದ ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ಇಂದು ಬೆಳಗ್ಗೆ ಮತ ಚಲಾಯಿಸಿದರು. ಶಾಸಕ ಡಿ.ವೇದವ್ಯಾಸ್ ಕಾಮತ್ ಬೆಳಗ್ಗೆ ನಗರದ ಮಣ್ಣಗುಡ್ಡೆ ಗಾಂಧಿನಗರ ಶಾಲೆಯಲ್ಲಿ ಮತ ಚಲಾಯಿಸಿದರೆ, ಶಾಸಕ ಡಾ.ವೈ.ಭರತ್ ಶೆಟ್ಟಿ ಕೆಪಿಟಿ ಬಳಿ ಇರುವ ಮತಗಟ್ಟೆಯಲ್ಲಿ ಹಕ್ಕು ಚಲಾವಣೆ ಮಾಡಿದರು. ಮಾಜಿ ಶಾಸಕ ಜೆ. ಆರ್.ಲೋಬೊ ಸೈಂಟ್ ಸಬೆಸ್ಟಿಯನ್ ಶಾಲೆಯಲ್ಲಿ ಮತ ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ 92 ವರ್ಷದ ಹಿರಿಯ ಮಹಿಳೆ ಯಜಿನಿ ಕುಲಾಸೊ ತಮ್ಮ ಹಕ್ಕನ್ನು ಚಲಾಯಿಸಿದರು. 448 ಮತಗಟ್ಟೆಗಳಲ್ಲೂ ಮತದಾನ ಆರಂಭಗೊಂಡಿದೆ. ಮಣ್ಣಗುಡ್ಡೆ ಗಾಂಧಿನಗರ ಶಾಲೆಯ ಮತಗಟ್ಟೆಯಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯುತ್ತಿರುವುದು ವರದಿಯಾಗಿದೆ. 27 ಮಂದಿ ಪಕ್ಷೇತರರ ಸಹಿತ 60 ವಾರ್ಡ್ಗ್ಳಲ್ಲಿ 180 ಸ್ಪರ್ಧೆಗಳು ಕಣದಲ್ಲಿದ್ದಾರೆ. ಕೋಲಾರ ನಗರಸಭೆ, ಮುಳಬಾಗಿಲು ನಗರಸಭೆ, ಕೆಜಿಎಫ್ ನಗರಸಭೆ,  ಚಿಕ್ಕಬಳ್ಳಾಪುರದ ಗೌರಿಬಿದನೂರು ನಗರಸಭೆ, ಚಿಂತಾಮಣಿ ನಗರಸಭೆ,  ರಾಮನಗರದ ಕನಕಪುರ ನಗರಸಭೆ, ಮಾಗಡಿ ಪುರಸಭೆ, ಶಿವಮೊಗ್ಗದ ಜೋಗ ಕಾರ್ಗಲ್ ಪಟ್ಟಣ ಪಂಚಾಯತ್,  ಚಿಕ್ಕಮಗಳೂರಿನ ಬೀರೂರು ಪುರಸಭೆ, ಧಾರವಾಡದ ಕುಂದಗೋಳ ಪಟ್ಟಣ ಪಂಚಾಯತ್, ಬಳ್ಳಾರಿಯ ಕಂಪ್ಲಿ ಪುರಸಭೆ, ಕೂಡ್ಲಗಿ ಪಟ್ಟಣ ಪಂಚಾಯತ್ಗಳಿಗೆ ಮತದಾನ ನಡೆಯುತ್ತಿದೆ. ಹೊಳೆನರಸೀಪುರ ಪುರಸಭೆ ವಾರ್ಡ್ ನಂ.4, ಕೊಳ್ಳೆಗಾಲ ನಗರಸಭೆ ವಾರ್ಡ್ ನಂ.19, ಚಡಚಣ ಪಟ್ಟಣ ಪಂಚಾಯತ್ ವಾರ್ಡ್ ನಂ.5 ಮಹಾಲಿಂಗಪುರ ಪುರಸಭೆ ವಾರ್ಡ್ ನಂ.17, ಚಿತ್ತಾಪುರ ಪುರಸಭೆ ವಾರ್ಡ್ ನಂ.10 ಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ 2 ನಗರಸಭೆಗೆ ಇಂದು ಮತದಾನ ನಡೆಯುತ್ತಿದೆ. ಗೌರಿಬಿದನೂರು ನಗರಸಭೆಯ 31 ವಾಡ್ರ್ಗಳು, ಚಿಂತಾಮಣಿ ನಗರಸಭೆಯ 31 ವಾಡ್ರ್ಗಳಿಗೆ ಮತದಾನ ನಡೆಯುತ್ತಿದೆ. ಚಿಂತಾಮಣಿಯಲ್ಲಿ 124 ಅಭ್ಯರ್ಥಿಗಳು, ಗೌರಿಬಿದನೂರಿನಲ್ಲಿ 115 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನ.14ರಂದು ಎರಡೂ ನಗರಸಭೆಗಳ ಮತಎಣಿಕೆ ನಡೆಯಲಿದೆ. ಮತಗಟ್ಟೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.