ಗೋಕರ್ಣದಲ್ಲಿ 12ನೇ ಕರ್ನಾಟಕ ರಾಜ್ಯ ಸಮ್ಮೇಳನ ಯಶಸ್ವಿ

ಗೋಕರ್ಣದಲ್ಲಿ 12ನೇ ಕರ್ನಾಟಕ ರಾಜ್ಯ  ಸಮ್ಮೇಳನ ಯಶಸ್ವಿ  12th Karnataka State Conference Successful in Gokarna

ಬೆಳಗಾವಿ  14: ಬೆಳಗಾವಿಯ ಕೆಎಲ್‌ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕ ಹಾಗೂ ಭಾರತೀಯ ಪ್ರಾಸ್ಥೋಡಾಂಟಿಕ್ ಸೊಸೈಟಿ   ಕರ್ನಾಟಕ ರಾಜ್ಯ ಶಾಖೆಯ ಅಧ್ಯಕ್ಷ ಡಾ. ಆನಂದಕುಮಾರ್ ಜಿ. ಪಾಟೀಲ್ ಅವರ ನೇತೃತ್ವದಲ್ಲಿ ಗೋಕರ್ಣದಲ್ಲಿ ನಡೆದ 12ನೇ ಕರ್ನಾಟಕ ರಾಜ್ಯ   ಸಮ್ಮೇಳನ ಯಶಸ್ವಿಯಾಗಿ ಸಮಾರೋಪಗೊಂಡಿತು. ಮೂರು ದಿನಗಳ ಕಾಲ ಗೋಕರ್ಣದ ಸಮುದ್ರತೀರದಲ್ಲಿ ನಡೆದ ಸಮ್ಮೇಳನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 220ಕ್ಕೂ ಹೆಚ್ಚು ದಂತ ವೈದ್ಯರು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದರು.

ಪ್ರಾಸ್ಥೋಡಾಂಟಿಕ್ಸ್‌ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳು, ಆಧುನಿಕ ಚಿಕಿತ್ಸಾ ವಿಧಾನಗಳು, ಸಂಶೋಧನೆ ಹಾಗೂ ಕ್ಲಿನಿಕಲ್ ಅನುಭವಗಳ ಕುರಿತು ತಜ್ಞರು ವಿಚಾರ ವಿನಿಮಯ ನಡೆಸಿದರು. ಸಮ್ಮೇಳನದ ಸಂಘಟನಾ ಅಧ್ಯಕ್ಷರಾಗಿದ್ದ ಡಾ. ಆನಂದಕುಮಾರ್ ಜಿ. ಪಾಟೀಲ್ ಅವರ ನೇತೃತ್ವದಲ್ಲಿ ಶೈಕ್ಷಣಿಕ, ವೈಜ್ಞಾನಿಕ ಹಾಗೂ ವೃತ್ತಿಪರ ಚಟುವಟಿಕೆಗಳಿಗೆ ಆದ್ಯತೆ ನೀಡಿ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು.  

ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಮುಖ್ಯ ಅತಿಥಿಯಾಗಿ ಹಾಗೂ ಕುಮಟಾ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿ ಗೌರವ ಅತಿಥಿಯಾಗಿ ಭಾಗವಹಿಸಿ, ದಂತ ವೈದ್ಯಕೀಯ ಕ್ಷೇತ್ರದ ಬೆಳವಣಿಗೆ ಹಾಗೂ ಜನಸಾಮಾನ್ಯರಿಗೆ ಗುಣಮಟ್ಟದ ದಂತ ಚಿಕಿತ್ಸೆಯ ಅಗತ್ಯದ ಕುರಿತು ಮಾತನಾಡಿದರು. ಸಮ್ಮೇಳನದ ವೈಜ್ಞಾನಿಕ ಅಧಿವೇಶನಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು 60ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಹಾಗೂ 50ಕ್ಕೂ ಹೆಚ್ಚು ಪೋಸ್ಟರ್ಗಳನ್ನು ಮಂಡಿಸಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ತಜ್ಞರಿಂದ ಒಂಬತ್ತು ವಿಶೇಷ ಉಪನ್ಯಾಸಗಳು ನಡೆದವು.

ಸ್ನಾತಕೋತ್ತರ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಐದು ‘ಗುರುಕುಲ’ ಅಧಿವೇಶನಗಳನ್ನು ಆಯೋಜಿಸಲಾಗಿತ್ತು. ಅನುಭವಿ ತಜ್ಞರೊಂದಿಗೆ ನೇರ ಸಂವಾದ, ಕ್ಲಿನಿಕಲ್ ಅನುಭವ ಹಂಚಿಕೆ ಹಾಗೂ ಮಾರ್ಗದರ್ಶನ ಪಡೆಯಲು ಈ ಅಧಿವೇಶನಗಳು ಉತ್ತಮ ವೇದಿಕೆಯಾದವು. ಗೋಕರ್ಣದ ನೈಸರ್ಗಿಕ ಹಾಗೂ ಸಾಂಸ್ಕೃತಿಕ ಸೊಬಗಿನ ನಡುವೆ ನಡೆದ ಸಮ್ಮೇಳನವು ಕಲಿಕೆ, ಸಂಶೋಧನೆ, ಮಾರ್ಗದರ್ಶನ ಮತ್ತು ಸ್ನೇಹದ ಸಮ್ಮಿಲನವಾಗಿ ಮೂಡಿಬಂದಿತು. ಕರ್ನಾಟಕದ ಪ್ರಾಸ್ಥೋಡಾಂಟಿಕ್ ವೈದ್ಯ ಸಮುದಾಯವನ್ನು ಒಂದೆಡೆ ಸೇರಿಸುವಲ್ಲಿ ಸಮ್ಮೇಳನ ಮಹತ್ವದ ಪಾತ್ರ ವಹಿಸಿತು.