125 ದಿನ ಕೆಲಸ, ಮುಂಗಡ ಅನುದಾನ, ಸಕಾಲದಲ್ಲಿ ವೇತನ: ಇಒ ದಾಸನಕೊಪ್ಪ

125 ದಿನ ಕೆಲಸ, ಮುಂಗಡ ಅನುದಾನ, ಸಕಾಲದಲ್ಲಿ ವೇತನ: ಇಒ ದಾಸನಕೊಪ್ಪ  125 days of work, advance funds, timely wages: EO Dasanakoppa

ಲೋಕದರ್ಶನ ವರದಿ 

ಕಾರವಾರ 29 : ಗ್ರಾಮೀಣ ಭಾಗದ ಅಕುಶಲ ಕೂಲಿಕಾರರಿಗೆ ವಿಬಿ-ಜಿ ರಾಮ್‌-ಜಿ ಯೋಜನೆಯಡಿ 100 ದಿನಗಳ ಬದಲಾಗಿ ವಾರ್ಷಿಕ 125 ದಿನಗಳಿಗೆ ವಿಸ್ತರಿಸಲಾಗಿದ್ದು ಅದಕ್ಕೆ ತಕ್ಕನಾಗಿ ಗ್ರಾಮ ಪಂಚಾಯತಿಗಳಿಗೆ ಮುಂಗಡ ಅನುದಾನವು ಜಮೆಯಾಗುತ್ತಿದ್ದು, ಇದರಿಂದ ಕೂಲಿಕಾರರಿಗೆ ಸಕಾಲದಲ್ಲಿ ವೇತನ ಪಾವತಿಸಲು ಸಾಧ್ಯವಾಗಲಿದೆ ಎಂದು ಮುಂಡಗೋಡು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್‌. ದಾಸನಕೊಪ್ಪ ಹೇಳಿದರು.   

ಅವರು ಶನಿವಾರ ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾನಳ್ಳಿ ಅರಣ್ಯ ಪ್ರದೇಶದಲ್ಲಿ ವಿಬಿ-ಜಿ ರಾಮ್‌-ಜಿ ಯೋಜನೆಯಡಿ ಆಯೋಜಿಸಿದ್ದ ಕೂಲಿಕಾರರೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಹಿಂದೆ ಕೂಲಿ ಹಣ ತಡವಾಗಿ ಜಮೆಯಾಗುತ್ತಿವೆ ಎಂಬ ಜನರ ಆರೋಪಗಳಿದ್ದವು, ಅನುದಾನ ಬಿಡುಗಡೆಯಲ್ಲಿ ವಿಳಂಬವಾಗುತ್ತಿತ್ತು.

ಆದರೆ ಈಗ ಅನುದಾನ ಮುಂಗಡವಾಗಿ ಜಮೆಯಾಗುತ್ತಿದ್ದು ಸಕಾಲದಲ್ಲಿ ವೇತನ ಪಾವತಿಗೆ ಕ್ರಮವಹಿಸಬಹುದಾಗಿದೆ. ಜನರು ನಿರಾತಂಕವಾಗಿ ಕೆಲಸ ಮಾಡಬಹುದು ಎಂದರು. ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾದ ಸೋಮಲಿಂಗಪ್ಪ ಛಬ್ಬಿ ಮಾತನಾಡಿ, ಯೋಜನೆಯ ಅನುಷ್ಠಾನಕ್ಕೆ ಅರಣ್ಯ ಇಲಾಖೆಯಿಂದ ಉತ್ತಮ ಸಹಕಾರ ಸಿಗುತ್ತಿದ್ದು, ಮಳೆಗಾಲದಲ್ಲೂ ನೂರಾರು ಕೂಲಿಕಾರರಿಗೆ ಕೈತುಂಬ ಕೆಲಸ ಸಿಗುತ್ತಿವೆ.

ಮುಂದಿನ ದಿನಗಳಲ್ಲು ಎಲ್ಲರು ಒಟ್ಟಾಗಿ ಯೋಜನೆಯ ಯಶಸ್ಸುಗೆ ಶ್ರಮಿಸೋಣ ಎಂದರು. ಈ ಸಂದರ್ಭದಲ್ಲಿ ತಾಲೂಕು ಪಶು ವೈದ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಆಡಳಿತ ಅಧಿಕಾರಿ ಕೃಷ್ಣಮೂರ್ತಿ ಹೆಗಡೆ, ಡಿಆರ್‌ಎಫ್ ರಾಕೇಶ್ ಮತ್ತು ಮಂಜುನಾಥ್ ನಡುವಿನಮನಿ, ಪಿಡಿಒ ಗಣಪತಿ ಪಿಲ್ಲೊಜಿ, ವಿಬಿ-ಜಿ ರಾಮ್‌-ಜಿ ತಾಂತ್ರಿಕ ಸಿಬ್ಬಂದಿ, ಗ್ರಾಮ ಪಂಚಾಯತಿ ಸಿಬ್ಬಂದಿ, ಕಾಯಕ ಬಂಧುಗಳು ಹಾಗೂ ಕೂಲಿಕಾರರು ಉಪಸ್ಥಿತರಿದ್ದರು.