ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ 11,367 ಕೋಟಿ ರೂ. ಹೂಡಿಕೆ ಮಾಡಲಿರುವ ಪಿಐಎಫ್

ಮುಂಬಯಿ, ಜೂನ್ 19, ದ ಪಬ್ಲಿಕ್ ಇನ್ವೆಸ್ಟ್‌ಮೆಂಟ್ ಫಂಡ್‌ನಿಂದ ("ಪಿಐಎಫ್") 11,367 ಕೋಟಿ ರೂ.ಗಳ ಹೂಡಿಕೆಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ("ರಿಲಯನ್ಸ್ ಇಂಡಸ್ಟ್ರೀಸ್") ಹಾಗೂ ಭಾರತದ ಮುಂಚೂಣಿ ಡಿಜಿಟಲ್ ಸೇವೆಗಳ ವೇದಿಕೆ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ ("ಜಿಯೋ ಪ್ಲಾಟ್‌ಫಾರ್ಮ್ಸ್") ಘೋಷಿಸಿವೆ. ಈ ಹೂಡಿಕೆಯು ಜಿಯೋ ಪ್ಲಾಟ್‌ಫಾರ್ಮ್ಸ್‌ನ ಈಕ್ವಿಟಿ ಮೌಲ್ಯವನ್ನು 4.91 ಲಕ್ಷ ಕೋಟಿ ರೂ.ಗಳಿಗೆ ಹಾಗೂ ಎಂಟರ್‌ಪ್ರೈಸ್ ಮೌಲ್ಯವನ್ನು 5.16 ಲಕ್ಷ ಕೋಟಿ ರೂ.ಗಳಿಗೆ ಕೊಂಡೊಯ್ಯಲಿದೆ. ಪಿಐಎಫ್‌ನ ಹೂಡಿಕೆಯು ಫುಲ್ಲಿ ಡೈಲ್ಯೂಟೆಡ್ ಬೇಸಿಸ್‌ನಲ್ಲಿ ಜಿಯೋ ಪ್ಲಾಟ್‌ಫಾರ್ಮ್ಸ್‌ನ ಶೇ. 2.32ರಷ್ಟು ಈಕ್ವಿಟಿ ಪಾಲುದಾರಿಕೆಗೆ ಸಮಾನವಾಗಿರಲಿದೆ. ಈ ಹೂಡಿಕೆಯೊಂದಿಗೆ, ಏಪ್ರಿಲ್ 2020ರಿಂದ ಇಲ್ಲಿಯವರೆಗೆ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಸೇರಿದಂತೆ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 115,693.95 ಕೋಟಿ ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ.ಪಿಐಎಫ್ ಹೂಡಿಕೆಯ ಸೇರ್ಪಡೆಯೊಂದಿಗೆ, ಭಾರತಕ್ಕಾಗಿ ಡಿಜಿಟಲ್ ಸಮಾಜ ನಿರ್ಮಿಸುವ ದೂರದೃಷ್ಟಿಗೆ ಕೊಡುಗೆ ನೀಡಲಿರುವ ಜಾಗತಿಕ ಹಣಕಾಸು ಹೂಡಿಕೆದಾರರ ಮುಂಚೂಣಿ ತಂಡದೊಡನೆ ಜಿಯೋ ಪ್ಲಾಟ್‌ಫಾರ್ಮ್ಸ್ ಸಹಭಾಗಿತ್ವಗಳನ್ನು ಸ್ಥಾಪಿಸಿದೆ.ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್, ಭಾರತದಾದ್ಯಂತ ಉನ್ನತ ಗುಣಮಟ್ಟದ ಹಾಗೂ ಕೈಗೆಟುಕುವ ದರದ ಡಿಜಿಟಲ್ ಸೇವೆಗಳನ್ನು ಒದಗಿಸುವತ್ತ ತನ್ನ ಗಮನವನ್ನು ಕೇಂದ್ರೀಕರಿಸಿರುವ ಮುಂದಿನ ತಲೆಮಾರಿನ ತಂತ್ರಜ್ಞಾನ ವೇದಿಕೆಯಾಗಿದ್ದು ಅದಕ್ಕೆ 388 ದಶಲಕ್ಷಕ್ಕೂ ಹೆಚ್ಚಿನ ಚಂದಾದಾರರಿದ್ದಾರೆ. ಬ್ರಾಡ್‌ಬ್ಯಾಂಡ್ ಸಂಪರ್ಕ, ಸ್ಮಾರ್ಟ್ ಸಾಧನಗಳು, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಬಿಗ್ ಡೇಟಾ ಅನಲಿಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‌ನೆಟ್ ಆಫ್ ಥಿಂಗ್ಸ್, ಆಗ್ಮೆಂಟೆಡ್ ಮತ್ತು ಮಿಕ್ಸೆಡ್ ರಿಯಾಲಿಟಿ ಹಾಗೂ ಬ್ಲಾಕ್‌ಚೈನ್‌ನಂತಹ ಮುಂಚೂಣಿ ತಂತ್ರಜ್ಞಾನಗಳಿಂದ ಚಾಲಿತವಾಗಿರುವ ತನ್ನ ಡಿಜಿಟಲ್ ಇಕೋಸಿಸ್ಟಂನಾದ್ಯಂತ ಜಿಯೋ ಪ್ಲಾಟ್‌ಫಾರ್ಮ್ಸ್ ಗಮನಾರ್ಹ ಹೂಡಿಕೆಗಳನ್ನು ಮಾಡಿದೆ. ಒಳಗೊಳ್ಳುವ ಬೆಳವಣಿಗೆಯ ಫಲಗಳನ್ನು ಎಲ್ಲರೂ ಆನಂದಿಸುವಂತೆ ಮಾಡಲು, ಸಣ್ಣ ವರ್ತಕರು, ಅತಿಸಣ್ಣ ಉದ್ಯಮಗಳು ಹಾಗೂ ರೈತರೂ ಸೇರಿದಂತೆ ಭಾರತದಾದ್ಯಂತ 1.3 ಶತಕೋಟಿ ಜನರು ಹಾಗೂ ಉದ್ಯಮಗಳಿಗೆ ಡಿಜಿಟಲ್ ಇಂಡಿಯಾವನ್ನು ಸಾಧ್ಯವಾಗಿಸುವುದು ಜಿಯೋ ಪ್ಲಾಟ್‌ಫಾರ್ಮ್ಸ್‌ನ ದೂರದೃಷ್ಟಿಯಾಗಿದೆ.

ಪಿಐಎಫ್ ಸೌದಿ ಅರೇಬಿಯಾದ ಸಾರ್ವಭೌಮ ಸಂಪತ್ತಿನ ನಿಧಿಯಾಗಿದ್ದು, ತನ್ನ ಆರ್ಥಿಕತೆಯನ್ನು ವೈವಿಧ್ಯಮಯಗೊಳಿಸುವ ಆಣತಿಯ ಭಾಗವಾಗಿ ಭಾರತೀಯ ಆರ್ಥಿಕತೆಯಲ್ಲಿ ಈವರೆಗಿನ ತನ್ನ ಅತಿದೊಡ್ಡ ಹೂಡಿಕೆಯನ್ನು ಮಾಡಿದೆ. ಈ ಹೂಡಿಕೆಯು ವಿಷನ್ 2030 ಉದ್ದೇಶಗಳ ಭಾಗವಾಗಿದ್ದು, ಸೌದಿ ಅರೇಬಿಯಾದ ಆರ್ಥಿಕ ಪರಿವರ್ತನೆಗೆ ಚಾಲನೆ ನೀಡಲು ದೀರ್ಘಾವಧಿಯ ವಾಣಿಜ್ಯ ಆದಾಯವನ್ನು ಗಳಿಸುವ ಕ್ಷೇತ್ರಗಳು ಹಾಗೂ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವ ಪಿಐಎಫ್‌ನ ಕಾರ್ಯತಂತ್ರ ಮತ್ತು ಆಣತಿಗೆ ಅನುಗುಣವಾಗಿದೆ. ಈ ಹೂಡಿಕೆಯು, ಸೌದಿ ಅರೇಬಿಯಾದ ಹೂಡಿಕೆಗಳ ವ್ಯಾಪ್ತಿ ಮತ್ತು ತೆರೆದುಕೊಳ್ಳುವಿಕೆಯನ್ನು ಮುನ್ನಡೆಸುವ ಸಲುವಾಗಿ ಸದೃಢವಾದ ಜಾಗತಿಕ ಹೂಡಿಕೆ ಸಹಭಾಗಿತ್ವಗಳನ್ನು ನಿರ್ಮಿಸುವ ಪಿಐಎಫ್‌ನ ಆಣತಿಯನ್ನು ಬೆಂಬಲಿಸುತ್ತದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, “ರಿಲಯನ್ಸ್‌ನಲ್ಲಿ ನಾವು ಸೌದಿ ಅರೇಬಿಯಾ ಸಾಮ್ರಾಜ್ಯದೊಂದಿಗೆ ಹಲವು ದಶಕಗಳ ದೀರ್ಘ ಮತ್ತು ಫಲಪ್ರದ ಸಂಬಂಧವನ್ನು ಹೊಂದಿದ್ದೇವೆ. ಜಿಯೋ ಪ್ಲಾಟ್‌ಫಾರ್ಮ್ಸ್‌ನಲ್ಲಿ ಪಿಐಎಫ್‌ ಹೂಡಿಕೆಯಿಂದ ಸ್ಪಷ್ಟವಾಗಿರುವಂತೆ, ಈ ಸಂಬಂಧವು ಈಗ ತೈಲ ಆರ್ಥಿಕತೆಯಿಂದ ಭಾರತದ ಹೊಸ ತೈಲ (ದತ್ತಾಂಶ-ಚಾಲಿತ) ಆರ್ಥಿಕತೆಯನ್ನು ಬಲಪಡಿಸುವತ್ತ ಮುನ್ನಡೆದಿದೆ. ಸೌದಿ ಅರೇಬಿಯಾ ಸಾಮ್ರಾಜ್ಯದ ಆರ್ಥಿಕ ಪರಿವರ್ತನೆಗೆ ಚಾಲನೆ ನೀಡುವಲ್ಲಿ ಪಿಐಎಫ್ ವಹಿಸಿರುವ ನಿರ್ಣಾಯಕ ಪಾತ್ರದ ಬಗ್ಗೆ ನನಗೆ ಬಹಳ ಮೆಚ್ಚುಗೆಯಿದೆ. ಜಿಯೋ ಪ್ಲಾಟ್‌ಫಾರ್ಮ್ಸ್‌ನ ಮೌಲ್ಯಯುತ ಪಾಲುದಾರರಾಗಿ ಪಿಐಎಫ್ ಅನ್ನು ನಾನು ಸ್ವಾಗತಿಸುತ್ತೇನೆ ಮತ್ತು 1.3 ಶತಕೋಟಿ ಭಾರತೀಯರ ಜೀವನವನ್ನು ಸಮೃದ್ಧ ಮತ್ತು ಸಶಕ್ತವಾಗಿಸಲು ಭಾರತದ ಡಿಜಿಟಲ್ ರೂಪಾಂತರದ ವೇಗವರ್ಧನೆಗಾಗಿ ನಾವು ಮಹತ್ವಾಕಾಂಕ್ಷೆಯ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಾಗ ಅವರ ನಿರಂತರ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿದ್ದೇನೆ. ” ಎಂದು ಹೇಳಿದ್ದಾರೆ.

ಪಿಐಎಫ್‌ನ ಗವರ್ನರ್ ಯಾಸಿರ್ ಅಲ್-ರುಮಯ್ಯಾನ್ ಅವರು, “ಭಾರತದ ತಂತ್ರಜ್ಞಾನ ಕ್ಷೇತ್ರವನ್ನು ಪರಿವರ್ತಿಸುವಲ್ಲಿ ಮುಂಚೂಣಿಯಲ್ಲಿರುವ ಈ ನವೀನ ಉದ್ಯಮದಲ್ಲಿ ಹೂಡಿಕೆ ಮಾಡಲು ನಾವು ಸಂತೋಷಪಡುತ್ತೇವೆ. ಭಾರತೀಯ ಡಿಜಿಟಲ್ ಆರ್ಥಿಕತೆಯ ಸಾಮರ್ಥ್ಯವು ಬಹಳ ರೋಮಾಂಚನಕಾರಿಯಾಗಿದೆ ಮತ್ತು ಆ ಬೆಳವಣಿಗೆಗೆ ಪ್ರವೇಶವನ್ನು ಪಡೆಯಲು ಜಿಯೋ ಪ್ಲಾಟ್‌ಫಾರ್ಮ್ಸ್ ನಮಗೆ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ ಎಂದು ನಾವು ನಂಬುತ್ತೇವೆ. ಸಾಮ್ರಾಜ್ಯದ ರಾಷ್ಟ್ರೀಯ ಸಂಪತ್ತನ್ನು ಕಾಪಾಡುವ ಮತ್ತು ಬೆಳೆಸುವ ನಮ್ಮ ಆಣತಿಗೆ ಅನುಗುಣವಾಗಿ, ಈ ಹೂಡಿಕೆಯು ಸೌದಿ ಅರೇಬಿಯಾದ ಆರ್ಥಿಕತೆ ಮತ್ತು ನಮ್ಮ ದೇಶದ ನಾಗರಿಕರ ಅನುಕೂಲಕ್ಕಾಗಿ ಗಮನಾರ್ಹವಾದ ದೀರ್ಘಕಾಲೀನ ವಾಣಿಜ್ಯ ಆದಾಯವನ್ನು ಗಳಿಸುವುದಕ್ಕೂ ನೆರವಾಗುತ್ತದೆ.” ಎಂದು ಹೇಳಿದ್ದಾರೆ.ಈ ವಹಿವಾಟು, ಭಾರತೀಯ ನಿಯಂತ್ರಕರ ಹಾಗೂ ಮತ್ತಿತರ ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.  ರಿಲಯನ್ಸ್ ಇಂಡಸ್ಟ್ರೀಸ್‌ಗೆ ಹಣಕಾಸು ಸಲಹೆಗಾರರಾಗಿ ಮೋರ್ಗನ್ ಸ್ಟಾನ್ಲಿ ಹಾಗೂ ವಕೀಲರಾಗಿ ಎಜ಼ೆಡ್‌ಬಿ ಆಂಡ್ ಪಾರ್ಟ್‌ನರ್ಸ್ ಹಾಗೂ ಡೇವಿಸ್ ಪೋಲ್ಕ್ ಆಂಡ್ ವಾರ್ಡ್‌ವೆಲ್ ಕಾರ್ಯನಿರ್ವಹಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.