“ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ” 03 ತಾಸಿನ ನಾಟಕವು ಡಿ.24 ರಂದು ಸಂಜೆ 5.30ಕ್ಕೆ

“ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ” 03 ತಾಸಿನ ನಾಟಕವು ಡಿ.24 ರಂದು ಸಂಜೆ 5.30ಕ್ಕೆ “Salute to the Kandagallari Namaskar, meaning India without Kandagallari” is a 03-hour play that wi

           ಧಾರವಾಡ 08:  “ಕನ್ನಡದ ಷೇಕ್ಸಪೀಯರ” ಎಂದೇ ಪ್ರಸಿದ್ಧರಾದ ಕಂದಗಲ್ಲ ಶ್ರೀ ಹನುಮಂತರಾಯರು ಬರೆದ ಕಂಪನಿ ಶೈಲಿಯ 07 ನಾಟಕಗಳನ್ನು ಆಧುನಿಕ ಶೈಲಿಯಲ್ಲಿ ಸಿದ್ಧಪಡಿಸಿದ “ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ” 03 ತಾಸಿನ ನಾಟಕವು ಇದೇ ಡಿ.24 ರಂದು ಸಂಜೆ 5.30ಕ್ಕೆ ಧಾರವಾಡದ ಸೃಜನಾ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಅವರು ಹೇಳಿದರು. 

ಇಂದು ರಂಗಾಯಣದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮಹಾಭಾರತದ ಸನ್ನಿವೇಶಗಳ ನಾಟಕಗಳನ್ನು ಗ್ರಾಮೀಣ ಭಾಗದ ಜನರಿಗೂ ಮೆಚ್ಚುಗೆಯಾಗುವಂತೆ ರಚಿಸಿದವರು ಕಂದಗಲ್ಲ ಶ್ರೀ ಹನುಮಂತರಾಯರು “ಕನ್ನಡದ ಷೇಕ್ಸಪೀಯರ” ಎಂದು ಪ್ರಸಿದ್ಧರು. ಅವರು ಬರೆದ ಕಂಪನಿ ಶೈಲಿಯ 07 ನಾಟಕಗಳನ್ನು ಆಧುನಿಕ ಶೈಲಿಯಲ್ಲಿ ಜನರ ಮುಂದಿಡುವ ಕನಸು ಧಾರವಾಡ ರಂಗಾಯಣದ ನಿರ್ದೇಶಕರಾಗಿದ್ದ ದಿವಂಗತ ರಾಜು ತಾಳಿಕೋಟಿ ಅವರದ್ದಾಗಿತ್ತು. ನಾಟಕಕ್ಕೆ ಅವರು ಚಾಲನೆಯನ್ನು ನೀಡಿ ಅಕಾಲಿಕವಾಗಿ ನಮ್ಮನ್ನಗಲಿದರು. ಈಗ ಆ ಕನಸು “ಕಂದಗಲ್ಲರಿಗೆ ನಮಸ್ಕಾರ ಅರ್ಥಾತ್ ಕಂದಗಲ್ಲ ಭಾರತ” ಮಹಾನಾಟಕವಾಗಿ ಪ್ರಕಾಶ ಗರುಡ ಅವರ ನಿರ್ದೇಶನದಲ್ಲಿ ರಂಗದ ಮೇಲೆ ಬರುತ್ತಿದೆ. ನಾಟಕ ಜನರ ಮೆಚ್ಚುಗೆ ಪಡೆಯುತ್ತದೆ ಎಂಬ ಭರವಸೆಯನ್ನು ರಂಗಾಯಣ ಹೊಂದಿದೆ. 

ನಾಟಕಕಾರರಾದ ಶ್ರೀ ಕಂದಗಲ್ಲ ಹಣಮಂತರಾಯರು(1896-1966) ಇವರಿಗೆ  ಕಂಪನಿ ರಂಗ ಭೂಮಿಯವರು “ಕರ್ನಾಟಕ ಷೇಕ್ಸಪೀಯರ್‌” ಎಂದು ಕರೆಯುವ ರೂಢಿಯಿತ್ತು, ಕಂದಗಲ್ಲರು    ಮಹಾಭಾರತವನ್ನು ಕಥೆಯನ್ನು  ಆಧರಿಸಿ  ದ್ರೌಪದಿ ಸ್ವಯಂವರ, ಅಕ್ಷಯಾಂಬರ, ಬಾಣಸಿಗ ಭೀಮ, ನರವೀರ ಪಾರ್ಥ, ದೈವದುರಂತ ಕರ್ಣ, ಕುರುಕ್ಷೇತ್ರ, ರಕ್ತರಾತ್ರಿ, ಚಿತ್ರಾಂಗದ ಮತ್ತು ಜಗನ್ಮಾಯ ಒಂಭತ್ತು ನಾಟಕಗಳನ್ನು ರಚಿಸಿದ್ದಾರೆ. 

ಇದರಲ್ಲಿ ಮೊದಲ ಏಳು ನಾಟಕಗಳನ್ನು ಕುಮಾರವ್ಯಾಸನ “ಕರ್ನಾಟಕ ಭಾರತ ಕಥಾಮಂಜರಿ” ಕಾವ್ಯವನ್ನು ಆಧರಿಸಿ ಬರೆದಿದ್ದಾರೆ.  ಇಲ್ಲಿ ಕಂಪನಿ ರಂಗಭೂಮಿಗೆ ಹೊಂದುವಂತೆ ತಮ್ಮದೇ ವಿಶಿಷ್ಟ ಭಾಷಾಶೈಲಿಯನ್ನು ಬಳಕೆ ಮಾಡಿದ್ದಾರೆ. ಆಗಿನ ಪ್ರೇಕ್ಷಕ ಮಾತ್ರ  ಅವರ ನಾಟಕದ ಮುಕ್ತ ಛಂದಸ್ಸಿನ ಸಂಭಾಷಣೆಗೆ, ನವೀನ ಶೈಲಿಗೆ ಆಕರ್ಷಿತನಾಗಿದ್ದ. ಹೀಗಾಗಿ ಅವರ ನಾಟಕಗಳು ಈಗಲೂ ಜನಮಾನಸದಲ್ಲಿವೆ. ಕಂದಗಲ್ಲರು ಮಹಾಭಾರತ ಕುರಿತು ರಚಿಸಿದ ತಮ್ಮ ನಾಟಕಗಳಿಗಾಗಿ ಕಥಾಸಂವಿಧಾನ, ಪಾತ್ರ ರಚನೆಯಲ್ಲಿ ಹಲವಾರು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಮಾತನಾಡಿದರು. 

ನಾಟಕ ಕಟ್ಟುವಲ್ಲಿ ಬಹುದೊಡ್ಡ ಶ್ರಮವಿದೆ. ಆದ್ದರಿಂದ ಮುಂದಿನ 03 ಸಾಲಿನ ಆಸನಗಳಿಗಾಗಿ ರೂ.200 ಹಾಗೂ ಉಳಿದ ಸಾಲಿನ ಆಸನಗಳಿಗೆ ರೂ.100/-ರೂ ಪ್ರವೇಶ ದರಗಳನ್ನು ನಿಗದಿಪಡಿಸಲಾಗಿದೆ. ಹಾಗೂ ದಿ:28-12-2025 ರಂದು ಭೂಮಿಗೀತ ರಂಗಮಂದಿರ, ರಂಗಾಯಣ ಮೈಸೂರು ಇಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕವನ್ನು ವಿವಿಧ ಜಿಲ್ಲೆಯ ರಂಗಮಂದಿರಗಳಲ್ಲಿ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗುವುದು. ನಾಟಕ ಪ್ರದರ್ಶನದ ಕುರಿತು ರಂಗಾಸಕ್ತರಿಗೆ ಅನುಕೂಲವಾಗುವಂತೆ ಹೆಚ್ಚಿನ ಪ್ರಚಾರ ನೀಡಿ ನಾಟಕವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು. 

ನಾಟಕ ನಿರ್ದೇಶಕರಾದ ಡಾ.ಪ್ರಕಾಶ ಗರುಡ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ರಂಗರೂಪದಲ್ಲಿ ಕಂದಗಲ್ಲರು “ಕರ್ನಾಟಕ ಭಾರತ ಕಥಾಮಂಜರಿ” ಆಧರಿಸಿ ಬರೆದ ಏಳು ನಾಟಗಳಲ್ಲಿಯ ಪ್ರಮುಖ ದೃಶ್ಯಗಳನ್ನು ಜೋಡಣೆಮಾಡಿ ಒಟ್ಟು ಮಹಾಭಾರತದ ಕಥಾನಕದ  ನಾಟ್ಯ ಚಿತ್ರಣ ನೀಡಲು ಪ್ರಯತ್ನಿಸಲಾಗಿದೆ. ಕುರುಕ್ಷೇತ್ರ ಯುದ್ಧದ ನಂತರ ಬರುವ ಪ್ರಸಂಗಗಳಾದ ಚಿತ್ರಾಂಗದ ಮತ್ತು ಜಗನ್ಮಾಯ(ಶ್ರೀ ಕೃಷ್ಣ ಗಾರುಡಿ)  ಈ ನಾಟಕಗಳನ್ನು ಈ ರಂಗರೂಪದಲ್ಲಿ ಸೇರಿಸಿಲ್ಲ.  ಈ ರಂಗರೂಪವು   ಕಂದಗಲ್ಲರು ಮಹಾಭಾರತ ಕಥಾನಕವನ್ನು ಕುರಿತು ರಚಿಸಿದ ಏಳು ಕಂಪನಿ ನಾಟಕಗಳ ಹೃಸ್ವರೂಪವಾಗಿದ್ದರೂ ಕಥಾ ಸಂವಿಧಾನಕ್ಕೆ ಒಂದು ತಾರ್ಕಿಕ ಜೋಡಣೆ ನೀಡಲು ಪ್ರಯತ್ನಿಸಲಾಗಿದೆ. ಜಾತಿ-ಕುಲ ತಾರತಮ್ಯ ಸಮಸ್ಯೆ,, ರಾಷ್ಟ್ರೀಯತೆ, ದೇಸೀಯತೆ, ಖಾದಿ, ಮನುಕುಲಕ್ಕೆ ಮಾರಕವಾದ ವಿನಾಶಕಾರಿ ಯುದ್ಧ, ದಾಯಾದಿ ಮತ್ಸರ, ದ್ವೇಷ ರಾಜಕಾರಣ ಇವು ಸಮಕಾಲೀನ  ವಿಷಯಗಳೂ ಆಗಿದ್ದು ಕಂದಗಲ್ಲರು  ಕಂಪನಿ ನಾಟಕದ ಚೌಕಟ್ಟಿನಲ್ಲಿ ಮಹಾಭಾರತದ ಕಥೆಯಲ್ಲಿ ಬರುವ ಪಾತ್ರಗಳ ಮೂಲಕ ಆ ವಿಷಯಗಳಿಗೆ ಮುಖಾಮುಖಿಯಾಗಿದ್ದಾರೆ ಎಂದು ಹೇಳಿದರು.