ಗವಿಸಿದ್ದೇಶ್ವರ ಜಾತ್ರೆಯಲ್ಲಿ “ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಕುರಿತು ಅರಿವು

“Awareness about Child Marriage Prohibition Acts” at Gavisiddeshwar Jatre

ಗವಿಸಿದ್ದೇಶ್ವರ ಜಾತ್ರೆಯಲ್ಲಿ “ಬಾಲ್ಯವಿವಾಹ ನಿಷೇಧ ಕಾಯ್ದೆಗಳ ಕುರಿತು ಅರಿವು 

ಕೊಪ್ಪಳ  16: ಗವಿಸಿದ್ದೇಶ್ವರ ಜಾತ್ರಾ ನಿಮಿತ್ಯ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಧ್ವನಿ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ ಕಾಯ್ದೆ-2016ರ ಶ್ರೀ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಅರಿವು ಮೂಡಿಸಲಾಗುತ್ತಿದೆ.  

ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಅವರು ಮಾತನಾಡಿ, ಬಾಲ್ಯವಿವಾಹದಿಂದ, ಅಪ್ರಾಪ್ತ ವಯಸ್ಸಿನ ಮಕ್ಕಳು ಗರ್ಭಿಣಿಯರು ಮತ್ತು ಬಾಲ ತಾಯಂದಿರಾಗುವುದರಿಂದ ಇವರಿಗೆ ಜನಿಸುವ ಮಗುವಿನ ಬೌದ್ಧಿಕ, ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಹಾಗೂ ಭಾಷಾ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರೊಂದಿಗೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ ಹಾಗೂ ವಿಶೇಷ ಚೇತನ, ಅಪೌಷ್ಟಿಕ ಮಕ್ಕಳು ಜನಿಸುವ ಅಥವಾ ತಾಯಿ, ಮಗು ಅಥವಾ ಇಬ್ಬರು ಮರಣಹೊಂದುವ ಸಾಧ್ಯತೆ ಅಧಿಕವಾಗಿರುತ್ತದೆ. ಈ  ಎಲ್ಲಾ ದುಷ್ಪರಿಣಾಮಗಳನ್ನು ತಡೆಗಟ್ಟಲು ಸರಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಮತ್ತು ಕರ್ನಾಟಕ ತಿದ್ದುಪಡಿ-2016ನ್ನು ಜಾರಿಯಲ್ಲಿ ತಂದಿರುತ್ತದೆ ಎಂದರು. 

“ಕೊಪ್ಪಳ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು” ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, “ಬಾಲ್ಯವಿವಾಹಕ್ಕೆ ಸಿದ್ಧತೆ ಅಥವಾ ಪ್ರಯತ್ನಿಸಿದರೂ ಸಹ ಪ್ರಕರಣ ದಾಖಲಿಸುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಮದುವೆ ದಿನ ನಿಶ್ಚಯ ಮಾಡುವುದು, ಹುಡುಗನಿಗೆ -ಹುಡುಗಿಯನ್ನು ನಿಶ್ಚಯಿಸಿದ್ದಲ್ಲಿಯೂ ಸಹ ಪ್ರಕರಣವನ್ನು ದಾಖಲಿಸಲಾಗುವುದು ಎಂದರು.  

ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ-ನೀರೀಕ್ಷಕ ಆಂಜನೇಯ ಅವರು ಮಾತನಾಡಿ, ಅಪ್ರಾಪ್ತ ವಯಸ್ಸಿನ ಮಗುವನ್ನು ಮದುವೆಯಾದ ವಯಸ್ಕ ಪುರುಷನಿಗೆ, ಮದುವೆಯನ್ನು ಮಾಡಿದ ಪಾಲಕರಿಗೆ, ಅತಂಹ ಮದುವೆಯಲ್ಲಿ ಭಾಗವಹಿಸಿದವರಿಗೆ ಮತ್ತು ಪ್ರೊತ್ಸಾಹಿಸಿದವರಿಗೆ ಕನಿಷ್ಟ 1 ವರ್ಷದಿಂದ 2 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ “ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವೂ ಸಹ ಅತ್ಯಾಚಾರ”ವೆಂದು ಪರಿಗಣಿಸಲಾಗುತ್ತದೆ. “ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯಡಿಯಲ್ಲಿ” ಪ್ರಕರಣವನ್ನು ದಾಖಲಿಸಲಾಗುತ್ತಿದ್ದು, ಈ ಕಾಯ್ದೆಯಡಿಯಲ್ಲಿ ಇರುವಷ್ಟೇ ಪ್ರಮಾಣದ ಶಿಕ್ಷೆಯನ್ನು ವಿಧಿಸಬಹುದಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಯಾರೂ ಸಹ ಬಾಲ್ಯವಿವಾಹ ಮಾಡಿ ಶಿಕ್ಷೆಗೆ ಗುರಿಯಾಗಬಾರದು ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಕೊಪ್ಪಳ ಪೊಲೀಸ್ ಠಾಣೆಯ ಆರಕ್ಷಕ ಉಪ-ನೀರೀಕ್ಷಕ ಶರಣಪ್ಪ, ಮಹಿಳಾ ಧ್ವನಿ ಶಿಕ್ಷಣ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಪ್ರೀಯದರ್ಶಿನಿ ಮುಂಡರಗಿ ಮಠ, ಡಾ. ಬಿ.ಎನ್‌. ಹೊರಪೇಟಿ ಸೇರಿದಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ-1098, ಮಹಿಳಾ ಪೊಲೀಸ್ ಠಾಣೆಯ ಹಾಗೂ ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.