‘ರಾಜ್ಯ ಸರಕಾರ ಕನ್ನಡ ಶಾಲೆಗೆ ಪ್ರಾಧಾನ್ಯ ನೀಡಲಿ’

‘ರಾಜ್ಯ ಸರಕಾರ ಕನ್ನಡ ಶಾಲೆಗೆ ಪ್ರಾಧಾನ್ಯ ನೀಡಲಿ’ ‘The state government should give priority to Kannada schools’

ಸಂಬರಗಿ 09: ರಾಜ್ಯ ಸರಕಾರ ಕನ್ನಡ ಶಾಲೆಗೆ ಪ್ರಾಧಾನ್ಯ ನೀಡಬೇಕು. ಯಾವುದೇ ಸಮಸ್ಯೆ ಇದ್ದರೆ ಪರಾ​‍್ಯಯಗೊಳಿಸಬೇಕೆಂದು ಆದೇಶ ಮಾಡಿದ್ದಾರೆ. ಆದರೆ ಗಡಿ ಭಾಗದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಹಾಗೂ ಕೊಠಡಿ ಕೊರತೆ ಇದ್ದು, ಮಹಾರಾಷ್ಟ್ರದ ಜತ್ತ ತಾಲೂಕಿನ ಕನ್ನಡ ಶಾಲೆಗಿಂತ ಕರ್ನಾಟಕದ ಗಡಿ ಭಾಗದ ಶಾಲೆಗಳು ಭಾರಿ ಕೆಳಮಟ್ಟಕ್ಕಿದ್ದು, ಶಿಕ್ಷಕರ ಕೊರತೆಯಿಂದ ಮಕ್ಕಳ ಸಂಖ್ಯೆ ಕಡಿಮೆ ಆಗಿ ಶಾಲೆಗಳು ಸ್ಥಗಿತಗೊಳ್ಳುತ್ತಿವೆ.  

ಭವಿಷ್ಯದಲ್ಲಿ ರಾಜ್ಯ ಸರಕಾರ ಪ್ರತಿ ಅಧಿವೇಶನದಲ್ಲಿ ಕನ್ನಡಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡಬೇಕೆಂದು ಶಿಕ್ಷಣ ಸಚಿವರು ಹೇಳುತ್ತಾರೆ. ಆದರೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಿ ಶಾಲೆಗಳಿಗೆ ಲಭ್ಯಗೊಳಿಸುತ್ತಾರೆ. ಆದರೆ ಅಲ್ಲಿ ಮುಖ್ಯವಾಗಿ ಶಿಕ್ಷಕರ ಹಾಗೂ ಕೊಠಡಿಗಳ ಕೊರತೆ ಇದ್ದು, ಹಲವಾರು ವರ್ಷಗಳಿಂದ ಶಿಕ್ಷಕರ ನೇಮಕ ಮಾಡುತ್ತಿಲ್ಲ. ಅತಿಥಿ ಶಿಕ್ಷಕರ ಮೇಲೆ ಶಾಲೆಗಳೂ ನಡೆಯುತ್ತಿವೆ. ಗಡಿ ಭಾಗದ 40 ಗ್ರಾಮದಲ್ಲಿರುವ 15 ತೋಟದ ಶಾಲೆಗಳು ಸ್ಥಗಿತಗೊಂಡಿವೆ. ಪ್ರತಿ ವರ್ಷ ಅತಿಥಿ ಶಿಕ್ಷಕರ ಮೇಲೆ ಶಾಲೆಗಳು ನಡೆಯುತ್ತಿವೆ. ಸರಕಾರ ಈ ಕಡೆಗೆ ಗಮನ ಹರಿಸುತ್ತಿಲ್ಲ.

ಮಲಾಬಾದ ಗ್ರಾಮದ ಮಾಳಿ ನಗರ ತೋಟ ಶಾಲೆ 1ರಿಂದ 7ನೇ ತರಗತಿವರೆಗೆ ಶಾಲೆ ಇದ್ದು, ಎರಡು ಕೋಣೆ ಇವೆ. ಅದರಲ್ಲಿ ಏಳೂ ತರಗತಿಗಳು ಇವೆ. ಇನ್ನುಳಿದ ಕೊಠಡಿಗಳು ಕುಸಿದಿವೆ. ಹಲವಾರು ಬಾರಿ ಶಾಲೆಯ ಪ್ರಧಾನ ಗುರುಗಳು ಇಲಾಖೆಯ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ 150 ಇದ್ದ ಮಕ್ಕಳ ಸಂಖ್ಯೆ 40ಕ್ಕೆ ಬಂದು ನಿಂತಿದೆ. ಕಾರಣ ಹಲವಾರು ಸಮಸ್ಯೆಕ್ಕೆ ರಾಜಕೀಯ ಮುಖಂಡರು ಸಹ ಗಮನ ಹರಿಸುತ್ತಿಲ್ಲ. ಹೀಗಾಗಿ ಕನ್ನಡ ಶಾಲೆಗಳಿಗೆ ಬೀಗ ಬೀಳುತ್ತಿವೆ. ಆದರೆ ಮರಾಠಿ ಶಾಲೆಗಳಲ್ಲಿ ವಿದ್ಯಾರ್ಥಿ ಕೊರತೆ ಇದ್ದು, ಶಿಕ್ಷಕರು ಕುಳಿತು ವೇತನ ಪಡೆಯುತ್ತಿದ್ದಾರೆ.  

ಸ್ಥಗಿತಗೊಂಡಿರುವ ಶಾಲೆಗಳು ಜಂಬಗಿ ಗ್ರಾಮದ ದತ್ತ ನಗರ ತೋಟ ಶಾಲೆ, ಆಜೂರ ಗ್ರಾಮದ ಮಹಾಂಕಾಳ ತೋಟ ಶಾಲೆ, ಅರಳಿಹಟ್ಟಿ ಗ್ರಾಮ, ಪಾಂಡೇಗಾಂವ ಗ್ರಾಮ, ಖಿಳೇಗಾಂವ ಗ್ರಾಮದ ಅಳ್ಳಿಕಟ್ಟಿ ತೋಟ ಶಾಲೆ, ಬೊಮ್ಮನಾಳ ಗ್ರಾಮದ ತೋಟ ಶಾಲೆ ಸೇರಿದಂತೆ ಈ ಭಾಗದಲ್ಲಿ ಇರುವ ತೋಟದ ಶಾಲೆಗಳಿಗೆ ಬೀಗ ಬೀಳುತ್ತಿವೆ. ಜಿಲ್ಲೆಯ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬರದೆ ಇದ್ದ ಕಾರಣ ಅಧಿಕಾರಿಗಳು ಭೇಟಿ ನೀಡಿಲ್ಲ. ಆ ಕಾರಣ ಶಾಲೆಗಳು ಮುಚ್ಚುತ್ತಿವೆ. ಅಥಣಿ ಕ್ಷೇತ್ರ ಶಿಕ್ಷಣಧಿಕಾರಿಗಳ ವಲಯದಲ್ಲಿ 350 ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರ ಮೇಲೆ ಶಾಲೆ ನಡೆಯುತ್ತಿವೆ. ಆ ಕಾರಣ ಗಡಿ ಭಾಗದ ಶಾಲೆಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಕನ್ನಡಿಗರು ಅಗ್ರಹಿಸಿದ್ದಾರೆ.  

ಅಥಣಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್‌.ಮುಂಜೆ ಇವರನ್ನು ಸಂಪರ್ಕಿಸಿದಾಗ ಗಡಿ ಭಾಗದ ಗ್ರಾಮಗಳಲ್ಲಿ ಎಲ್ಲಾ ಶಾಲೆಗಳ ಸರ್ವೇ ಮಾಡಿಸಿ ಯಾವ ಶಾಲೆಗಳು ಸ್ಥಗಿತಗೊಂಡಿವೆ ಮರಳಿ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು. ಕನ್ನಡ ಹೋರಾಟಗಾರರು ನ್ಯಾಯವಾದಿ ಎಸ್‌.ಎಸ್‌.ಪಾಟೀಲ ಇವರನ್ನು ಸಂಪರ್ಕಿಸಿದಾಗ ಸರ್ಕಾರ ಗಡಿ ಭಾಗದ ಕನ್ನಡ ಶಾಲೆಗಳ ಮೇಲೆ ನಿರ್ಲಕ್ಷ್ಯ ತೋರಿದೆ. ಸರ್ಕಾರ ಗಮನ ಹರಿಸಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ಅವರು ಒತ್ತಾಯಿಸಿದರು.