‘ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡದ ಶಕ್ತಿ ಕೇಂದ್ರ’

‘ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡದ ಶಕ್ತಿ ಕೇಂದ್ರ’ ‘Karnataka Vidyavardhaka Sangha is a powerhouse of Kannada’

              ಧಾರವಾಡ 18: ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡದ ಶಕ್ತಿ ಕೇಂದ್ರ. ಕನ್ನಡಿಗರ ಹೃದಯವಿದ್ದಂತೆ. 136 ವರ್ಷಗಳಿಂದ ಅದು ಅತ್ಯಂತ ಕ್ರಿಯಾಶೀಲತೆಯಿಂದ ಜೀವಂತವಾಗಿರುವುದೇ ಅದರ ಕಾರ್ಯವೈಖರಿಯ ವೈಶಿಷ್ಟ್ಯ ಎಂದು ಮೃತ್ಯುಂಜಯ ಬ್ಯಾಂಕಿನ ನಿರ್ದೇಶಕ ನಾಗರಾಜ ಗುರಿಕಾರ ಅಭಿಪ್ರಾಯಪಟ್ಟರು. 

ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ತಿಂಗಳ ಪೂರ್ಣ ಕಾರ್ಯಕ್ರಮದಲ್ಲಿ ದಿ. 17ರಂದು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.  

ಕರ್ನಾಟಕ ವಿದ್ಯಾವರ್ಧಕ ಸಂಘವು ಎಲ್ಲಾ ಪ್ರಕಾರದ ಕಲೆಗೂ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೆ ಯುವಕರು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಯುವಶಕ್ತಿ ನಾಡು ಕಟ್ಟುವ ಕಾರ್ಯದಲ್ಲಿ ಹೆಚ್ಚು ತೊಡಗಬೇಕು. ಅನ್ಯಾಯದ ವಿರುದ್ಧ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಕನ್ನಡ ಉಳಿಸಿ ಬೆಳೆಸುವುದು ತುಂಬಾ ಕಷ್ಟ. 

ಕವಿವ ಸಂಘದ ಕಾರ್ಯಕ್ರಮಗಳು ಇಂದು ಹಿಂದಿಗಿಂತಲೂ ಹೆಚ್ಚು ವಿಸ್ತೃತವಾಗಿದ್ದು, ಸಂಘಕ್ಕೆ ಸ್ಥಳದ ಅಭಾವವಿದೆ. ಸರಕಾರ ಸಂಘಕ್ಕೆ ಹತ್ತು ಎಕರೆ ನಿವೇಶನ ನೀಡಿದರೆ, ಅದರಲ್ಲಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಗೆ ಸಂಬಂಧಿಸಿದಂತೆ ಅನೇಕ ಹೊಸ ಪ್ರಯೋಗಗಳನ್ನು ಮಾಡಬಹುದು. ಕನ್ನಡದ ದೀಕ್ಷೆಯೊಂದಿಗೆ ಜನ್ಮ ತಾಳಿ ಕನ್ನಡ ಉದ್ದೇಶಕ್ಕೆ ಧಕ್ಕೆ ಬಾರದಂತೆ ಮುಂದುವರಿಸಿಕೊಂಡು ಬಂದ ಕವಿವ ಸಂಘ ಎಲ್ಲಾ ಪ್ರಕಾರದ ಹೋರಾಟಗಳಿಗೆ ನಾವಿಂದು ಕೈಜೋಡಿಸಬೇಕಿದೆ ಎಂದು ಹೇಳಿದರು. 

ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮನುಷ್ಯನಿಗಾಗಲಿ, ಸಂಘ ಸಂಸ್ಥೆಗಳಿಗಾಗಲಿ ಮೊದಲು ಒಂದು ಕನಸು ಕಾಣುವುದು ಮುಖ್ಯ. ನಮಗೂ ಹಲವು ಕನಸುಗಳಿವೆ. ಕವಿವ ಸಂಘಕ್ಕೆ ಸರಕಾರ 10 ಎಕರೆ ನಿವೇಶನ ನೀಡಿದರೆ, ಅಲ್ಲಿ ಇಡೀ ಕರ್ನಾಟಕ ದರ್ಶನವೇ ಅನಾವರಣಗೊಳಿಸುವ ಮತ್ತು ಕವಿವ ಸಂಘದ 9 ಸಾವಿರ ಸದಸ್ಯರ ಉದ್ಯೋಗಕ್ಕೆ ಅನುಸಾರವಾಗಿ ವಿಭಜಿಸಿ ಅವರ ಕಾರ್ಯಕ್ರಮ ರೂಪಿಸುವ, ಆಜೀವ ಸದಸ್ಯರ ಸಮ್ಮೇಳನ ಒಂದನ್ನು ಆಯೋಜಿಸುವ ಯೋಜನೆಯ ಕನಸು ಇದೆ. ಅದು ಸಾಕಾರವಾಗಬೇಕಷ್ಟೇ ಎಂದರು. 

ಪ್ರಾರಂಭದಲ್ಲಿ ಸುಮಿತ್ರಾ ಕಾಡದೇವರಮಠ ಅವರಿಂದ ಸಂಗೀತ ಕಾರ್ಯಕ್ರಮ ಜರಗಿತು. ಡಾ. ಅನೀಲ ಮೇತ್ರಿ ತಬಲಾ ಹಾಗೂ ಡಾ. ಪರಶುರಾಮ ಕಟ್ಟಿಸಂಗಾವಿ ಹಾರ್ಮೋನಿಯಂ ಸಾಥ್ ನೀಡಿದರು. ಕೊನೆಯಲ್ಲಿ ಬೀಳಗಿಯ ಸನಾದಿ ಅಪ್ಪಣ್ಣ ವಂಶಜರಾದ ಪುಟ್ಟರಾಜ ಭಜಂತ್ರಿ ಅವರಿಂದ ಶಯನಾಯಿ ವಾದನ ಕಾರ್ಯಕ್ರಮ ಜರಗಿತು. ಬಸವರಾಜ ಭಜಂತ್ರಿ, ವಿಜಯಕುಮಾರ ಸುತಾರ ಸಾಥ್ ನೀಡಿದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಡಾ. ಮಹೇಶ ಧ. ಹೊರಕೇರಿ ವಂದಿಸಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಬಸವರಾಜ ಕಪಲಿ, ಈಶ್ವರಗೌಡ ಪಾಟೀಲ, ಎಂಎಂ ಚಿಕ್ಕಮಠ, ಶಂಕರ ಕುಂಬಿ, ಧನವಂತ ಹಾಜವಗೋಳ, ಶಂಕರ ಘಟ್ನಟ್ಟಿ ಮುಂತಾದವರಿದ್ದರು.