ಶರಗೇರಿ ಕ್ರೀಡೆಯಲ್ಲಿ ಯುವ ಜನತೆ ತೊಡಗಿಕೊಂಡು ಅದನ್ನು ಉಳಿಸಿ ಬೆಳಸಬೇಕು: ಮಾಜಿ ಸಚಿವ ಎಸ್‌.ಆರ್‌.ಪಾಟೀಲ

ಶರಗೇರಿ ಕ್ರೀಡೆಯಲ್ಲಿ ಯುವ ಜನತೆ ತೊಡಗಿಕೊಂಡು ಅದನ್ನು ಉಳಿಸಿ ಬೆಳಸಬೇಕು:  ಮಾಜಿ ಸಚಿವ ಎಸ್‌.ಆರ್‌.ಪಾಟೀಲ Young people should get involved in the sport of Sharageri and preserve and develop it: Former Mini

ಬೀಳಗಿ 29: ನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಪ್ಪಟ ಗ್ರಾಮೀಣ ಕ್ರೀಡೆಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿದ್ದು ಗ್ರಾಮೀಣ ಮಟ್ಟದ ಅಪ್ಪಟ ಶರಗೇರಿ ಕ್ರೀಡೆಯಲ್ಲಿ ಯುವ ಜನತೆ ತೊಡಗಿಕೊಂಡು ಅದನ್ನು ಉಳಿಸಿ ಬೆಳಸಬೇಕು ಎಂದು ಮಾಜಿ ಸಚಿವ ಎಸ್‌.ಆರ್‌.ಪಾಟೀಲ ಹೇಳಿದರು. ಪಟ್ಟಣದ ತಹಸೀಲ್ದಾರ ಕಛೇರಿಯ ಆವರಣದಲ್ಲಿ ಬೀಳಗಿ ಗೆಳೆಯರ ಬಳಗ ಹೊಸ ವರ್ಷದ ನಿಮಿತ್ಯ ಆಯೋಜಿಸಿದ ಶರಗೇರಿ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಎಲ್ಲರ ಮನಸ್ಸಿನಿಂದ ಮರೆತು ಹೋದ ಶರಗೇರಿ ಕ್ರೀಡೆಗೆ ಹಿರಿಯರು ಉತ್ತೇಜನಗೊಳಿಸಿ ಯುವ ಜನತೆಯಲ್ಲಿ ಆಸಕ್ತಿ ಮೂಡಿಸುವ ಕೆಲಸ ಶಾಸಕ ಜೆ.ಟಿ.ಪಾಟೀಲರ ಗೆಳೆಯರ ಬಳಗದವರು ಮಾಡುತ್ತಿರುವ ಕಾರ್ಯ ಶ್ಲಾಘೀನೀಯ ಎಂದರು. 

   ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಶಾಸಕ ಜೆ.ಟಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡಾ ಪಟುಗಳಿಗೆ ಎಷ್ಟು ಮಹತ್ವ ಇದೆಯೋ ಅಷ್ಟೆ ಕ್ರೀಡೆಗೆ ಮಹತ್ವ ಇದೆ. ಗ್ರಾಮೀಣ ಸೊಗಡು ಇತ್ತಿಚ್ಚಿಗೆ ಮರೆಯುತ್ತಿದ್ದೇವೆ. ಗ್ರಾಮೀಣ ಭಾಗದ ಶರಗೇರಿ ಕ್ರೀಡೆ ಸಂಪೂರ್ಣ ನಶಿಸಿ ಹೋಗಿದೆ.  ಜೊತೆಗೆ ಹಿಂದಿನ ಆಹಾರ ಪದ್ದತಿಯಲ್ಲಿ ಜವಾರಿ ಕಾಳು, ಕಾಯಿಪಲ್ಲೆ, ಹಣ್ಣು ಹಂಪಲಗಳ ಸೇವನೆ ಕಡಿಮೆಯಾಗಿದೆ. ನಾವು ಹಿಂದಿನ ಹಿರಿಯರು ನಡೆಸಿಕೊಂಡ ಬಂದ ಮಾರ್ಗದಲ್ಲಿ ನಡೆಯಬೇಕಾದರೆ ಗ್ರಾಮೀಣ ಕ್ರೀಡೆ ಹಾಗೂ ಉತ್ತಮವಾದ ಆಹಾರ ಪದಾರ್ಥಗಳು ಬೆಳೆಯುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಗೆಳೆಯರ ಬಳಗದ ನೇತ್ರತ್ವದಲ್ಲಿ ನಡೆದ ಶರಗೇರಿ 2ನೇ ವರ್ಷದ ಕ್ರೀಡಾಕೂಟವಾಗಿದ್ದು ಇದನ್ನು ಇನ್ನೂ ಹೆಚ್ಚು ಪ್ರಚಾರ ಮಾಡಿ ಕ್ರೀಡೆಗೆ ಉತ್ತೇಜನ ನೀಡುವ ಕೆಲಸವಾಗಬೇಕು. ಆಯೋಜಕರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಕೆಪಿಸಿಸಿ ಮಾಜಿ ಕಾರ್ಯದರ್ಶಿ ಬಸವಪ್ರಭು ಸರನಾಡಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಕ್ರೀಡೆ ಜನರ ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸ ನೀಡುತ್ತಿದೆ. ಕ್ರೀಡೆಯಲ್ಲಿ ಹೆಚ್ಚು ತೋಡಗುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳ್ಳಲು ಸಹಕಾರಿಯಾಗಲಿವೆ ಎಂದರು.   ಗಿರಿಸಾಗರ ರುದ್ರಮುನಿ ಶಿವಾಚಾರ್ಯ ಶ್ರೀ, ಕಲ್ಮಠದ ಗುರುಪಾದ ಶಿವಾಚಾರ್ಯ ಶ್ರೀ, ಹುಚ್ಚಪ್ಪಯ್ಯ ಮಠದ ಫಕೀರಯ್ಯ ಶ್ರೀ, ಟಿಎಪಿಸಿಎಂಎಸ್ ಅಧ್ಯಕ್ಷ ಮಲ್ಲಯ್ಯ ಕಂಬಿ, ಸದಸ್ಯ ಮಲ್ಲಪ್ಪ ಕಾಳಗಿ, ರಾಮನಗೌಡ ಜಕ್ಕನಗೌಡ, ಗ್ಯಾರೆಂಟಿ ಯೋಜನೆ ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಟಿಮಠ,  ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಭೀಮಶಿ ಮೋಖಾಶಿ, ಸಿದ್ದು ಗಿರಗಾಂವಿ, ಹಣಮಂತ ಕಾಖಂಡಕಿ, ಶ್ರೀಶೈಲ ಸೂಳಿಕೇರಿ, ಯಮನಪ್ಪ ರೊಳ್ಳಿ, ಬಸವರಾಜ ಹಳ್ಳದಮನಿ, ಸಿದ್ದು ಸಾರಾವರಿ,  ಜಿ.ಆರ್‌.ಪಾಟೀಲ, ಸೋಮನಗೌಡ ಪಾಟೀಲ ಇತರರು ಇದ್ದರು.