ಸರ್ವಧರ್ಮ ಸಮಭಾವ ಬಾಳುವ ಯಡೂರ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವ ಸಂತೋಷ ಕುಮಾರ ಕಾಮತ

Yadoora Virbhadreshwar Vishali Jatra Mahotsava Santhosh Kumar Kamat

ಸರ್ವಧರ್ಮ ಸಮಭಾವ ಬಾಳುವ ಯಡೂರ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವ  ಸಂತೋಷ ಕುಮಾರ ಕಾಮತ  

ಮಾಂಜರಿ 28: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಶ್ರೀಕ್ಷೇತ್ರ ಯಡೂರು ಪ್ರಾಚೀನ ಕಾಲದಿಂದಲೂ ವೀರಭದ್ರೇಶ್ವರ ದೇವರು ಮತ್ತು ಕಾಡಸಿದ್ದೇಶ್ವರರು ನೆಲಸಿರುವ ಪವಿತ್ರ ತಾಣ. ಶಿವನ ಅರ್ಧಾಂಗಿನಿಯಾದ ಸತಿಯ ತಂದೆ ದಕ್ಷಬಕ್ಕನು ಶಿವನ ವಿರೋಧಕ್ಕಾಗಿ ಕೈಗೊಂಡ ಯಜ್ಞವು ಈ ಕ್ಷೇತ್ರದಲ್ಲಿಯೇ ನೆರೆವೇರಿದೆಯೆಂಬುದಾಗಿ ಮತ್ತು ಶಿವನಿಂದೆ ಕೇಳಲಾಗದೆ ಸತಿಯು ಇಲ್ಲಿಯ ಯಜ್ಞಕುಂಡದಲ್ಲಿ ಆಹುತಿಯಾದಾಗ ಶಿವನ ಜಡೆಯಿಂದ ಅವತರಿಸಿದ ವೀರಭದ್ರನು ದಕ್ಷಬ್ರಹ್ಮನನ್ನು ಸಂಹರಿಸಿ ಶಿವನ ಅಪ್ಪಣೆಯ ಮೇರೆಗೆ ಶಿವಭಕ್ತರನ್ನು ಅನುಗ್ರಹಿಸಲು ಹಾಗೂ ಶಿವ ವಿರೋಧಿ ಶಕ್ತಿಗಳನ್ನು ನಿಗ್ರಹಿಸಲು ಇಲ್ಲಿಯೇ ಲಿಂಗರೂಪದಿಂದ ನಿತ್ಯ ನಿವಾಸ ಮಾಡಿರುವನೆಂಬುದಾಗಿ ಪೌರಾಣಿಕ ಪ್ರತೀತಿಯುಂಟು.  

ಇದಕ್ಕೆ ಪುರಾವೆಗಳೆಂಬಂತೆ ಇಲ್ಲಿರುವ ದೇವಾಲಯವು ಯಜ್ಞಕುಂಡದ ಆಕೃತಿಯಲ್ಲಿದೆ ಮತ್ತು ವೀರಭದ್ರನು ಲಿಂಗರೂಪದಿಂದಲೇ ಇರುವನು. ಇಲ್ಲಿ ವೀರಭದ್ರನು ಲಿಂಗರೂಪದಿಂದ ನೆಲೆಸಿದ ಕಾರಣಕ್ಕಾಗಿಯೇ ಈ ದೇವಸ್ಥಾನಕ್ಕೆ ವೀರಭದ್ರ ದೇವಾಲಯವೆಂದು ಕರೆಯುವುದರ ಜೊತೆಗೆ ವಿರೂಪಾಕ್ಷಲಿಂಗ ದೇವಸ್ಥಾನವೆಂದು ಕೂಡಾ ಕರೆಯುವ ವಾಡಿಕೆ. ಈ ಕ್ಷೇತ್ರದ ಪಂಚಕೋತಿ ವ್ಯಾಪ್ತಿಯಲ್ಲಿ ಬರುವ ಖದ್ರಾಮರದಲ್ಲಿರುವ ಕೋಪೇಶ್ವರ, ಚಂದೂರದಲ್ಲಿರುವ ಚಂದ್ರೇಶ್ವರ, ಮಾಂಜರಿಯಲ್ಲಿರುವ ಮಹಾದೇವ ಮಂದಿರ( ಕಡೆ ಬಾಗಿಲ ವೀರಭದ್ರ), ಯಜ್ಞಮಂಟಪದ ದ್ವಾರ​‍್ರದೇಶ, ಹೊಸ ಯಡೂರದಿಂದ ಹಳೆ ಯಡೂರಿಗೆ ಹೋಗುವ ದಾರಿಯಲ್ಲಿರುವ ರುದ್ರಪಾದ ಬಸವೇಶ್ವರ(ನಂದಿ) ದೇವಾಲಯಗಳು ಇಲ್ಲಿಯ ಪೌರಾಣಿಕ ಪ್ರತೀತಿಯು ವಾಸ್ತವಿಕವೆಂಬುದಕ್ಕೆ ಸಾಕ್ಷಿಯಂತಿವೆ. 

ಲಿಂಗರೂಪದಿಂದ ನೆಲೆಸಿದ ಇಲ್ಲಿಯ ಆ ವೀರಭದ್ರ (ವಿರುಪಾಕ್ಷ) ಲಿಂಗವು ಕಾಲಾಂತರದಲ್ಲಿ ಭೂಗರ್ಭದಲ್ಲಿ ಮುಚ್ಚಿಹೋಗಿತ್ತು. ಕೃಷ್ಣಾ ನದಿಯ ತಟದಲ್ಲಿರುವ ಈ ಪರಿಸರದಲ್ಲಿ ಅನುಷ್ಠಾನಕ್ಕೆಂದು ಆಗಮಿಸಿದ ಕಾಡಸಿದ್ದೇಶ್ವರರು ತಮ್ಮ ದಿವ್ಯ ದೃಷ್ಟಿಯಿಂದ ಈ ಕ್ಷೇತ್ರದ ಮಹತ್ವವನ್ನು ಅರಿತು ಲಿಂಗದ ಮೇಲಿರುವ ಬೂದಿ-ಮಣ್ಣುಗಳನ್ನು ಸರಿಸಿ ಮುಚ್ಚಿ ಹೋದ ಆ ಲಿಂಗವನ್ನು ​‍್ರ​‍್ರಥಮ ಬಾರಿಗೆ ಪ್ರಕಟಗೊಳಿಸುತ್ತಾರೆ ಮತ್ತು ಇದರ ಪ್ರಚಾರ, ಪ್ರಸಾರ ಮಾಡುತ್ತಾರೆ. ಅದರ ಜೊತೆಗೆ ಈ ಕ್ಷೇತ್ರೋದ್ಧಾರದ ದೂರದೃಷ್ಟಿಯನ್ನಿರಿಸಿಕೊಂಡು ಇಲ್ಲಿಯೇ ಮಶವೊಂದನ್ನು ಸ್ಥಾಪಿಸಿದರು. ಅದುವೇ ಕಾಡದೇವರ ಮಠವೆಂದು ಪ್ರಖ್ಯಾತವಾಗಿದೆ. ಈ ಮಠದ ಮೂಲಪುರುಷರಾದ ಕಾಡಸಿದ್ದೇಶ್ವರರು ಮತ್ತು ಅವರ ತರುವಾಯ ಈ ಮಠಕ್ಕೆ ಪರಂಪರಾನುಗತವಾಗಿ ಮಠಾಧಿಪತಿಗಳಾಗಿ ಬಂದ ಶ್ರೀಗಳು ಕಾಲಕಾಲಕ್ಕೆ ವೀರಭದ್ರ ದೇವರ ದೇವಸ್ಥಾನದ ಜೀರ್ಣೋದ್ಧಾರ ಮಾಡುತ್ತಾ ಇಲ್ಲಿಯವರೆಗೆ ಪರಂಪರಾನುಗತವಾಗಿ ದೇವಸ್ಥಾನದ ಧರ್ಮಾಧಿಕಾರಿಗಳಾಗಿ ಆಡಳಿತ ನಡೆಸುತ್ತ ಬಂದಿದ್ದಾರೆ. ಹೀಗಾಗಿ ಇಲ್ಲಿಯ ದೇವಸ್ಥಾನಕ್ಕೂ ಹಾಗೂ ಶ್ರೀಮಶಕ್ಕೂ ಅನ್ನೋನ್ಯ ಸಂಬಂಧ. ಮಠದ ಹಿಂದಿನ ಮಠಾಧಿಪತಿಗಳಾಗಿದ್ದ ಲಿಂಗೈಕ್ಯ ಸಿದ್ಧಲಿಂಗೇಶ್ವರ ಶಿವಾಚಾರ್ಯರು ಈ ಸಂಬಂಧವನ್ನು ಘಟ್ಟಿಗೊಳಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. 

ಯಡೂರಿನ ಶ್ರೀ ವೀರಭದ್ರ ದೇವಸ್ಥಾನ ಮತ್ತು ಕಾಡದೇವರ ಮತವು ಗಡಿಭಾಗದಲ್ಲಿರುವ ಕನ್ನಡ ನಾಡಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರಗಳಾಗಿದೆ. ಇಸ್ಲಾಂ ಧರ್ಮದ ಸದ್ಭಕ್ತರು ಕೂಡ ದರ್ಶನ ಪಡೆಯುವುದು ಇಲ್ಲಿನ ವಿಶೇಷ ಇಲ್ಲಿ ಜಾತಿ, ಮತ ಬೇದ ಭಾವವಿಲ್ಲ, ವೀರ, ಬೀರ, ಪೀಠ ಎಂಬ ಹೆಸರಿನಿಂದ ಇಲ್ಲಿ ವಿಭಿನ್ನ ದೈವ ಶಕ್ತಿಗಳನ್ನು ಗುರುತಿಸಲಾಗುತ್ತದೆ. ಇವು ವೀರಶೈವ, ಹಾಲುಮತ ಹಾಗೂ ಇಸ್ಲಾಂ ಜನಾಂಗದವರ ಆರಾಧ್ಯ ದೈವಗಳಾಗಿವೆ. ಇವು ಒಂದೇ ಸ್ಥಳದಲ್ಲಿ ನೋಡಲು ಸಿಗುವುದು ಇಲ್ಲಿನ ವಿಶೇಷ ಮೂಲ ವೀರಭದ್ರ ಲಿಂಗವನ್ನೇ ಈರನೆಂದು ಕರೆಯುವರು. ಹೀಗಾಗಿ ಯಡೂರು ಸರ್ವಧರ್ಮಗಳ, ಸರ್ವಜನಾಂಗಗಳ ಶ್ರದ್ಧಾಕೇಂದ್ರವಾಗಿದೆ.ಸಮನ್ವಯ ಶ್ರದ್ಧಾ ಕೇಂದ್ರವಾದ ಯಡೂರ ಕ್ಷೇತ್ರದ ಪರಿಸರವನ್ನು ಪ್ರಸ್ತುತ ಶ್ರೀಶೈಲ ಜಗದ್ಗುರು ಡಾಽ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪೂರ್ವಾಶ್ರಮದಲ್ಲಿ ಯಡೂಂನ ಶ್ರೀವೀರಭದ್ರ ದೇವ-ಕಾಡದೇವರ ಮಠದ ಧರ್ಮಾಧಿಕಾರವನ್ನು ವಹಿಸಿಕೊಂಡು ಭಕ್ತರ ಸಹಕಾರದೊಂದಿಗೆ ಕಳೆದ 20 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ವಿಶೇಷವಾಗಿ ದೂರದ ಗ್ರಾಮಗಳಿಂದ ಆಗಮಿಸುವ ಭಕ್ತರಿಗೆ ಉಳಿದುಕೊಳ್ಳಲು ಸುಸಜ್ಜಿತವಾದ ಯಾತ್ರಿನಿವಾಸ ನಿರ್ಮಿಸಿದ್ದಾರೆ. ಇದರಿಂದ ಪ್ರತಿ ನಿತ್ಯ ನೂರಾರು ಸದ್ದಕ್ಷರು ವಸತಿಮಾಡಿ ತಮ್ಮ ಧಾರ್ಮಿಕ ಕಾರ್ಯಗಳನ್ನು ಪೂರೈಸಿಕೊಂಡು ಹೋಗಲು ಅನುಕೂಲ ಮಾಡಿಕೊಟ್ಟಿದ್ದಾರೆ.