ಲೋಕದರ್ಶನ ವರದಿ
ಕುಮಟಾ : ತಾಲೂಕಿನ ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ಗಾಂಧೀನಗರದ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕ ಬಳಕೆಗೆ ಅನುಕೂಲ ಮಾಡಿಕೊಡುವಂತೆ ಅಲ್ಲಿಯ ಗ್ರಾಮಸ್ಥರು ಗುರುವಾರ ಹೆಗಡೆ ಗ್ರಾಮ ಪಂಚಾಯತಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಒಂದು ವರ್ಷದ ಹಿಂದೆ ಹೆಗಡೆಯ ಗಾಂಧಿನಗರದ ಸಾರ್ವಜನಿಕ ಬಾವಿಯ ಪಕ್ಕ ಕೆಆರ್ಐಡಿ ಯ ಯೋಜನೆ ಅಡಿಯಲ್ಲಿ ನಾಣ್ಯವನ್ನು ಹಾಕಿ ಶುದ್ಧ ಕುಡಿಯುವ ನೀರಿನ್ನು ಪಡೆಯುವ ಘಟಕ ಸ್ಥಾಪನೆಯಾಗಿ ಉದ್ಘಾಟನೆ ಕೂಡ ಕಂಡಿದೆ. ಆದರೆ ಜನರಿಗೆ ನೀರು ಮಾತ್ರ ಇನ್ನೂ ಸಿಕ್ಕಿಲ್ಲ. ಒಂದೆರಡು ಬಾರಿ ಮಾತ್ರ ಪಡೆದಿದ್ದೆವು ಎಂದು ಅಲ್ಲಿಯ ಜನ ಆರೋಪಿಸುತ್ತಾರೆ. ಈ ವರ್ಷದಲ್ಲಿ ನೀರಿನ ಅಭಾವ ತುಂಬಾ ಆಗಿದ್ದು ಜನರು ಹನಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿರುವಾಗ ಗಾಂಧಿನಗರ ಭಾಗದ ಜನ ಗ್ರಾಮ ಪಂಚಾಯತಗೆ ಮುತ್ತಿಗೆ ಹಾಕಿ ನಮಗೆ ಆ ಘಟಕ ಪ್ರಾರಂಭಿಸಿಕೊಡುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಜೋಷಿ ಅವರ ಹತ್ತಿರ ಪಟ್ಟು ಹಿಡಿದರು. ನಂತರ ಅವರಿಂದ ಸಮರ್ಪಕ ಉತ್ತರ ಲಭಿಸಿಲ್ಲ.
ನಮಗೆ ಪಂಚಾಯತ ಅಧ್ಯಕ್ಷರು ಕೂಡಲೇ ಇಲ್ಲಿಗೆ ಬರಬೇಕು ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಕೂಡಲೇ ಆಗಮಿಸಿದ ಹೆಗಡೆ ಪಂಚಾಯತ ಅಧ್ಯಕ್ಷ ಮಂಜುನಾಥ ಪಟಗಾರ ಜನರನ್ನು ಸಮಾಧಾನ ಪಡಿಸಿ ಈಗಾಗಲೇ ನಿಮಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರಿನ ಘಟಕ ಒಂದು ವರ್ಷದ ಹಿಂದೆಯೇ ಉದ್ಘಾಟನೆ ಆಗಿದ್ದರೂ ಕೂಡ ಅದರ ಹಣ ಬಂದಿರಲಿಲ್ಲ. ನಂತರದ ದಿನಗಳಲ್ಲಿ ಅದಕ್ಕೆ ಹಣ ಮೀಸಲಿಟ್ಟ ನಂತರ ಜನವರಿಯಲ್ಲಿ ಕ್ರಿಯಾ ಯೋಜನೆ ಮಾಡಿ ಕಳುಹಿಸಲಾಗಿದೆ. ಪೈಪ್ ಲೈನ್, ಪಂಪು ಅಳವಡಿಸುವುದು ಹಾಗೂ ಇತರ ಕೆಲಸಗಳಿಗೆ ಒಂದೂವರೆ ಲಕ್ಷ ಮೀಸಲಿಡಲಾಗಿದೆ. ಆದರೆ ಮಧ್ಯದಲ್ಲಿ ನೀತಿ ಸಂಹಿತೆ ಜಾರಿಯಾಗಿ ಎರಡು ತಿಂಗಳು ಹೋಗಿರುವುದರಿಂದ ಇನ್ನು ಕೆಲವೇ ದಿನಗಳಲ್ಲಿ ಅದು ಒಪ್ಪಿಗೆ ಪಡೆದು ಬರುತ್ತದೆ. ನಂತರ ಅದರ ಬಾಕಿ ಕೆಲಸ ಮುಗಿಸಿ ಎರಡು ಮೂರು ತಿಂಗಳಲ್ಲಿ ಅದರ ಉಪಯೋಗ ನಿಮಗೆ ಲಭಿಸುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾಕಾರರಾದ ರವಿ ಮುಕ್ರಿ, ಮಹೇಶ, ಚಂದನ ನಾಯ್ಕ ಹಾಗೂ ಇತರರು ಮಾತನಾಡಿ, ನಿಮ್ಮ ಮಾತಿಗೆ ಬೆಲೆ ಕೊಟ್ಟು ತೆರಳುತ್ತೇವೆ. ಆದರೆ ಮತ್ತೆ ಇದೇ ತರ ಸಮಸ್ಯೆ ಉದ್ಭವವಾದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯ. ಅಲ್ಲದೇ ನಮಗೆ ಪಂಚಾಯತ ವತಿಯಿಂದ ಬಿಡುವ ನೀರನ್ನು ಪಡೆಯಲು ಪ್ರತಿಯೊಂದು ಮನೆಗಳಿಗೂ ನಲ್ಲಿ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು. ಅದಕ್ಕೆ ಅಧ್ಯಕ್ಷ ಮಂಜುನಾಥ ಪಟಗಾರ ಅವರು ಪ್ರಯತ್ನಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗಾಂಧಿನಗರ ಪಂಚಾಯತ ಸದಸ್ಯೆ ನಾಗವೇಣಿ ಮುಕ್ರಿ, ಕವಿತಾ ಶೆಟ್ಟಿ, ದೇವಿ ಮುಕ್ರಿ ಸೇರಿದಂತೆ 50 ಕ್ಕೂ ಹೆಚ್ಚಿನ ಜನರು ಉಪಸ್ಥಿತರಿದ್ದರು.