ಶಾಲೆ ಮುಚ್ಚುವುದರ ವಿರುದ್ಧ ಬಾಳಗಮಟ್ಟಿ, ಕುಟ್ಟಲವಾಡಿ ಗ್ರಾಮಸ್ಥರ ಪ್ರತಿಭಟನೆ

ಶಾಲೆ ಮುಚ್ಚುವುದರ ವಿರುದ್ಧ ಬಾಳಗಮಟ್ಟಿ, ಕುಟ್ಟಲವಾಡಿ ಗ್ರಾಮಸ್ಥರ ಪ್ರತಿಭಟನೆ Villagers of Balagamatti, Kuttalawadi protest against school closure


ಬೆಳಗಾವಿ, 27 : ಇಂದು ಬೆಳಗಾವಿಯ ಬಾಳಗಮಟ್ಟಿ ಹಾಗೂ ಕುಟ್ಟಲವಾಡಿ ಗ್ರಾಮಸ್ಥರು ಊರಿನ ಸರ್ಕಾರಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ಭಾಗವಾಗಿ ಬಾಳಗಮಟ್ಟಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ, ಕುಟ್ಟಲವಾಡಿಯ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ, ಬಾಮ್ಮಣವಾಡಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಮಚ್ಚೆಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಮುಚ್ಚಿ ಇಲ್ಲಿನ ವಿದ್ಯಾರ್ಥಿಗಳನ್ನು ಮಚ್ಚೆಯ ಕೆಎಸ್‌ಆರ​‍್ಿ ಕ್ಯಾಂಪಿನಲ್ಲಿರುವ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಗೆ ಕಳುಹಿಸಲಾಗುತ್ತದೆ.  

ಬಡ ರೈತ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕರ್ನಾಟಕ ರಾಜ್ಯ ಸರ್ಕಾರದ ಜನವಿರೋಧಿ ನೀತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಶಾಲೆಗಳ ಮುಂದೆ ಸೇರಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದರು. ಶಾಲೆಗಳು ಪ್ರತಿ ಊರಿನ ಜ್ಞಾನ ದೇಗುಲಗಳಾಗಿವೆ. ರೈತರು ಭೂಮಿಯನ್ನು ಹದ ಮಾಡಿ ಬೀಜ ಬಿತ್ತುವಂತೆ ಶಿಕ್ಷಕರು ಶಾಲೆಗಳಲ್ಲಿ ಮಕ್ಕಳ ಮನಸ್ಸನ್ನು ಹದ ಮಾಡಿ ವಿಚಾರಗಳನ್ನು ಬಿತ್ತುತ್ತಾರೆ. ಇಂತಹ ವಿಚಾರಗಳು ಮತ್ತು ವಿಚಾರಶೀಲ ಮನಸ್ಸುಗಳನ್ನು ಸೃಷ್ಟಿಸುವ ಶಾಲೆಗಳನ್ನು ಮುಚ್ಚಿ ಸರ್ಕಾರವು ಶಾಶ್ವತವಾಗಿ ಬಡ ಮಕ್ಕಳಿಂದ ಮತ್ತು ಈ ಮೂಲಕ ಒಟ್ಟಾರೆ ಗ್ರಾಮಗಳ ವಿಚಾರ ಮಾಡುವ ಶಕ್ತಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿದೆ ಎಂದು ಸರ್ಕಾರದ ನಡೆಯನ್ನು ಖಂಡಿಸಿದರು.  

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಎಐಡಿಎಸ್‌ಓ ಜಿಲ್ಲಾ ಸಂಚಾಲಕರಾದ ಮಹಾಂತೇಶ್ ಬಿಳೂರ್, ಶಾಲೆಗಳು ಕೇವಲ ಮಕ್ಕಳ ಪಾಠಕ್ಕೆ ಸೀಮಿತವಾಗಿರದೆ ಊರಿನ ಸಾಂಸ್ಕೃತಿಕ ಸಾಮಾಜಿಕ ಕೇಂದ್ರಗಳಾಗಿವೆ. ಸ್ವಾತಂತ್ರ್ಯ ದಿನಾಚರಣೆ, ಮಹಾತ್ಮರ ದಿನಾಚರಣೆಗಳು ಸೇರಿದಂತೆ ಅನೇಕ ಚಟುವಟಿಕೆಗಳಿಗೆ ಶಾಲೆಗಳೇ ಕೇಂದ್ರಗಳಾಗಿವೆ. ಇಂತಹ ಶಾಲೆಗಳನ್ನು ಮುಚ್ಚಿ ಶಾಶ್ವತವಾಗಿ ಗ್ರಾಮಗಳನ್ನು ವಿನಾಶಗೊಳಿಸುವ ಹುನ್ನಾರವಿದು ಎಂದು ಸರ್ಕಾರವನ್ನು ಟೀಕಿಸಿದರು.  

ಬೆಳಗಾವಿ ಜಿಲ್ಲೆಯೊಂದರಲ್ಲೇ 2,283 ಶಾಲೆಗಳನ್ನು ಮುಚ್ಚಲಾಗುತ್ತಿದೆ. ರಾಜ್ಯದ್ಯಂತ ಕೇವಲ ಗ್ರಾಮ ಪಂಚಾಯಿತಿಗೆ ಒಂದರಂತೆ 6000 ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿಪಡಿಸಿ ಉಳಿದ 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಲು ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ. ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಶಿಕ್ಷಣ ಮಂತ್ರಿಗಳೇ ಒಪ್ಪಿಕೊಂಡಿರುವಂತೆ ಕಳೆದ 15 ವರ್ಷದಲ್ಲಿ ರಾಜ್ಯದ 17 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಗಳನ್ನು ತೊರೆದಿದ್ದಾರೆ. ಊರುಗಳಲ್ಲಿ ಶಾಲೆ ಇದ್ದು ಈ ಪ್ರಮಾಣದಲ್ಲಿ ಮಕ್ಕಳು ಶಾಲೆಗಳನ್ನು ತೊರೆದಿರುವಾಗ ಸಾವಿರಾರು ಶಾಲೆಗಳು ಮುಚ್ಚಿದರೆ ಭೀಕರ ಪ್ರಮಾಣದ ಮಕ್ಕಳು ಶಿಕ್ಷಣದ ಅವಕಾಶದಿಂದ ವಂಚಿತರಾಗುತ್ತಾರೆ ಎಂದು ಹೇಳಿದರು.  

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ರದ್ದಾಗುವವರೆಗೂ ಹಂತ ಹಂತವಾಗಿ ಹೋರಾಟವನ್ನು ಮುಂದುವರಿಸಬೇಕೆಂದು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಪ್ರತಿಭಟನೆಯ ನಂತರ ಪಾಲಕರು ಹಾಗೂ ಊರಿನ ಹಿರಿಯರನ್ನು ಸೇರಿಸಿ ಹೋರಾಟವನ್ನು ಮುನ್ನಡೆಸಲು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳನ್ನು ರಚಿಸಲಾಯಿತು. ಮುಖಂಡರಾದ ಕಲ್ಲಪ್ಪ ಪಾಟೀಲ್, ರವೀಂದ್ರ ಕದಮ್, ಅಜಯ್ ಬಸ್ತವಾಡಕರ್, ಸಂಭಾಜಿ ಕದಮ್, ಆನಂದ ದೇಸಾಯಿ, ನೀಲಕಂಠ ಕಣಭರಕರ್, ಸಂತೋಷ್ ದೇಸಾಯಿ, ರೂಪಾ ದೇಸಾಯಿ, ಭಾಗ್ಯಶ್ರೀ ಕಣಭರಕರ್, ಸುಷ್ಮಾ ದೇಸಾಯಿ ಸೇರಿದಂತೆ ಉಭಯ ಗ್ರಾಮಗಳ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.