ಹಾಲವರ್ತಿಯಲ್ಲಿ ಗ್ರಾಮ ಪಂಚಾಯತಿ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಗ್ರಾಮ ಸಭೆ

ಹಾಲವರ್ತಿಯಲ್ಲಿ ಗ್ರಾಮ ಪಂಚಾಯತಿ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಗ್ರಾಮ ಸಭೆ Village meeting of the Gram Panchayat Annual Draft Development Plan in Halavarthi


ಕೊಪ್ಪಳ 01 : ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀಯವರು ಕಂಡ ಕನಸಿನ ಗ್ರಾಮ ಸ್ವರಾಜ್ಯ ಮಾಡಲು ಎಲ್ಲರೂ ಶ್ರಮಿಸಬೇಕಿದೆ ಎಂದು ಕರ್ನಾಟಕ ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್‌. ಪಾಟೀಲ ಹೇಳಿದರು.ಅವರು ಗುರುವಾರ ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮ ಪಂಚಾಯತಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಕೊಪ್ಪಳ ಹಾಗೂ ಗ್ರಾಮ ಪಂಚಾಯತ್ ಹಾಲವರ್ತಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2026-27ನೇ ಸಾಲಿನ ಗ್ರಾಮ ಪಂಚಾಯತಿ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಗ್ರಾಮ ಸಭೆಯಲ್ಲಿ ಮಾತನಾಡಿದರು. 

ಗ್ರಾಮ ಸಭೆಗಳನ್ನು ಆಯೋಜಿಸಿ 2026-27ನೇ ಸಾಲಿನ ಕ್ರಿಯಾಯೋಜನೆಗಳನ್ನು ಸಿದ್ದಪಡಿಸಬೇಕು. ಅಭಿವೃದ್ಧಿ ಯೋಜನೆಗಳನ್ನು ರೂಪಿಸುವಾಗ ಜನರ ಬೇಡಿಕೆಗಳಿಗೆ ಆದ್ಯತೆ ನೀಡಬೇಕು. ಕಾಲಕಾಲಕ್ಕೆ ಗ್ರಾಮ ಸಭೆಗಳನ್ನು ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ನೀಡಬೇಕು. ‘ನಮ್ಮ ಸಹಭಾಗಿತ್ವದಲ್ಲಿ' ಎಂಬ ನಂಬಿಕೆ ಜನರಲ್ಲಿ ಮೂಡಿಸಿದಾಗ ಅಧಿಕಾರ ಯೋಜನೆಗಳ ವಿಕೇಂದ್ರೀಕರಣವಾಗಲು ಸಾಧ್ಯವಾಗುತ್ತದೆ. ಪಂಚಾಯತ್ ರಾಜ್ ವ್ಯವಸ್ಥೆ ಸ್ವರೂಪ ಕಾಣಲು ಸಾಧ್ಯವಾಗುತ್ತದೆ. ಹಾಗಾಗಿ ಜನರ ಸಹಭಾಗಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಎಲ್ಲರನ್ನೂ ಸಮಾನವಾಗಿ ಕಂಡಾಗ ಮಾತ್ರ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಎಲ್ಲಾ ಗ್ರಾಮೀಣ ಕುಟುಂಬಕ್ಕೆ ಸಂಪನ್ಮೂಲ ಜೋಡಿಸುವ ಕೆಲಸ ಆಗಬೇಕು. ಇದಕ್ಕಾಗಿ ಗ್ರಾಮೀಣ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಅವುಗಳಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು. 

ಗ್ರಾಮ ಪಂಚಾಯತಿಗಳು ಗ್ರಾಮ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಮಹಾತ್ಮಾ ಗಾಂಧಿಜೀಯವರ ಕನಸಿನ ಗ್ರಾಮ ಸ್ವರಾಜ್ಯ ಮತ್ತು ಗ್ರಾಮ ಸರ್ಕಾರವನ್ನು ಮಾಡಲು ನಾವೆಲ್ಲರೂ ಬದ್ಧರಾಗೋಣ. ಮನುಷ್ಯ ಯಾರು ಸಹ ಪರಿಪೂರ್ಣನಾಗಿರುವುದಿಲ್ಲ. ಅವನಲ್ಲಿ ಒಂದಲ್ಲ ಒಂದು ದೋಷಗಳಿರುತ್ತವೆ. ಅವುಗಳನ್ನು ಪ್ರತಿವರ್ಷ ಕಡಿಮೆ ಮಾಡಬೇಕು ಮತ್ತು ಒಳ್ಳೆಯ ಗುಣಗಳನ್ನು ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರತಿ ತಿಂಗಳು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡು ಎಲ್ಲರೂ ಶ್ರಮದಾನ ಮಾಡಬೇಕು. ಮಧ್ಯ ನಿಷೇಧಕ್ಕೂ ಎಲ್ಲರೂ ಕೈಜೋಡಿಸಬೇಕು. ಕೃಷಿಯಲ್ಲಿ ರಾಸಾಯನಿಕ ಬಳಕೆ ಹೆಚ್ಚಾಗಿರುವ ಇಂದಿನ ಕಾಲದಲ್ಲಿ ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಹೆಚ್ಚಿನ ಆದ್ಯತೆ ನೀಡುವುದು ಅನಿವಾರ್ಯತೆಯಿದೆ ಎಂದು ಹೇಳಿದರು.   

ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಹಾಲವರ್ತಿ ಗ್ರಾಮ ಪಂಚಾಯತಿ ಒಳಪಡುವ ಎಲ್ಲಾ ಗ್ರಾಮಸ್ಥರು ಸಿದ್ರಾಮಯ್ಯ ಸಾಹೇಬರು ಮತ್ತು ಎಚ್‌.ಕೆ.ಪಾಟೀಲರನ್ನು ನೆನೆಸುತ್ತಾರೆ ಅವರೆ ಈ ಊರಿನ ಗ್ರಾಮ ಪಂಚಾಯತಿ ಮಾಡಿ ಕೊಟ್ಟವರು. ಗ್ರಾಮ ಪಂಚಾಯತಿ ಆದ ನಂತರ ಹೆಚ್ಚಿನ ಅನುದಾನ ಬರುವುದರ ಜೊತೆಗೆ ಇಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಗಾಂಧೀಜಿಯವರ ದೂರದೃಷ್ಟಿ ಅವರ ವಿಚಾರಗಳನ್ನು ನಾವು ಇತಿಹಾಸದಲ್ಲಿ ಕೇಳಿದ್ದವೆ. ಅವರ ಗ್ರಾಮ ಸ್ವರಾಜ್ಯದ ಕಲ್ಪನೆ ಗ್ರಾಮಗಳ ಉದ್ದಾರವಾಗಿದೆ ಎಂದರು.ಇಂದು ಹಾಲವರ್ತಿಯಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅಡಿಗಲ್ಲು ಹಾಕಿದ್ದೇವೆ. ನಮ್ಮ ಭಾಗದಲ್ಲಿ ಹಿಟ್ನಾಳ, ಕಿಡದಾಳ ಹಾಲವರ್ತಿ ಸೇರಿದಂತೆ 4 ಕಡೆ ಮೋರಾರ್ಜಿ ದೇಸಾಯಿ ವಸತಿ ಶಾಲೆ ಮಾಡಿಸಿದ್ದೆವೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರನ್ನೆ ಆಸ್ತಿವಂತರನ್ನಾಗಿ ಮಾಡಬೇಕು.

ಸಮ ಸಮಾಜದ ನಿರ್ಮಾಣಕ್ಕಾಗಿ ನಮ್ಮ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ದೇಶದ ಇತರೆ ಯಾವುದೇ ರಾಜ್ಯಗಳಲ್ಲಿ ಕಾಣಲು ಸಾಧ್ಯವಿಲ್ಲ. ಈ ಯೋಜನೆಗಾಗಿ ನಮ್ಮ  ಸರಕಾರ ಕಳೆದ ಎರಡುವರೆ ವರ್ಷದಲ್ಲಿ ಒಂದು ಲಕ್ಷ ಸಾವಿರ ಕೋಟಿ ರೂ. ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಿದೆ. ನಾವು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಿದೆ. ಗ್ರಾಮಗಳ ಸ್ವಚ್ಚತೆ ಕಡೆಗೆ ನಾವೆಲ್ಲರೂ ಗಮನ ಕೊಡಬೇಕು. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಹೇಳಿದರು.ಕರ್ನಾಟಕ ಗಾಂಧಿ ಸ್ಮಾರಕ ಭವನದ ಅಧ್ಯಕ್ಷರಾದ ನಾಡೋಜ ಉಡೇ ಪಿ. ಕೃಷ್ಣ  ಮಾತನಾಡಿ ಹಾಲವರ್ತಿ ಗ್ರಾಮಸಭೆ  ಇಂದು ಎಲ್ಲರೂ ಸಮಾನವಾಗಿ ಕೂಡಿ ಸಭೆ ಮಾಡುತ್ತಿದ್ದು ಗಾಂಧೀಜಿಯವರ ಕಂಡ ಕನಸು ಸಹ ಇದೇ ಆಗಿತ್ತು. ನಾವೆಲ್ಲರೂ ಸಮಾನರು. ಅಧ್ಯಕ್ಷರು ಎಲ್ಲಾ ಸಮಾನರ ಪೈಕಿ ಮೊದಲಿಗರು. ಹಿಂದೆ ಎಲ್ಲಾ ತೀರ್ಮಾನಗಳು ಗ್ರಾಮಸಭೆಯಲ್ಲಿ ಆಗುತ್ತಿದ್ದವು ಅದಕ್ಕೆ ಎಲ್ಲರೂ ಬದ್ಧರಾಗಿರುತ್ತಿದ್ದರು. ಗಾಂಧೀಜಿಯವರು  ಸ್ವಾತಂತ್ರ್ಯ ಸಮಾಜದ ಕಟ್ಟ ಕಡೆಯ ವ್ಯಕ್ತಿಗು ಸಿಗಬೇಕು ಎಂಬುದಾಗಿತ್ತು ಎಂದು ಹೇಳಿದರು. 

ದೇಶದ ಇತರೆ ರಾಜ್ಯ ನೋಡಿದಾಗ ಕರ್ನಾಟಕ ಉತ್ತಮವಾಗಿದೆ. ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನೂರಕ್ಕೆ ನೂರರಷ್ಟು ಜಾರಿಯಾಗಬೇಕಿದೆ. ನಮಗೆ ಇನ್ನೂ ಸಾಮಾಜಿಕ. ಆರ್ಥಿಕ. ನೈತಿಕ ಸ್ವಾತಂತ್ರ್ಯ ಬಂದಿಲ್ಲ ಇದನ್ನು ಲಭಿಸಲು ಎಲ್ಲರೂ ನಿರಂತರವಾಗಿ ಕೆಲಸ ಮಾಡಬೇಕಿದೆ. ಜನ ಮನಸ್ಸು ಮಾಡಿದರೆ ಏನಾದರೂ ಮಾಡುತ್ತಾರೆ. ಇಲ್ಲಿಂದ ದಿಲ್ಲಿಯವರೆಗೆ ನಮ್ಮ ನಿರ್ಣಯ ಆದರೆ ಗ್ರಾಮ ಸಭೆ  ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು. 

ಈ ಸಭೆಯಲ್ಲಿ ಮಾಜಿ ಶಾಸಕರಾದ ಬಸವರಾಜ ಹಿಟ್ನಾಳ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ಗೂಳೆಪ್ಪ ಹಲಗೇರಿ, ಜಿ.ಪಂ ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಗಾಂಧಿ ಸ್ಮಾರಕ ನಿಧಿ ಕಾರ್ಯದರ್ಶಿ ಶಿವರಾಜ, ಹಾಲವರ್ತಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಯಪ್ರದಾ ಗೊರವರ, ಉಪಾಧ್ಯಕ್ಷರಾದ ಮಹೇಂದ್ರ, ಸದಸ್ಯರಾದ ನಾಗರಾಜ, ಜ್ಞಾನಪ್ಪ ತಳಕಲ್, ಕೆ.ಸತೀಶ್, ಮಹಾಂತೇಶ ಹಾನಗಲ್ ಹಾಗೂ ಹನುಮಂತಪ್ಪ ಕಿಡದಾಳ, ಇಬ್ರಾಹಿಂ, ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.