ಕೇಂದ್ರ ಸಚಿವ ಅಮಿತ್ ಶಾರನ್ನು ಸಚಿವ ಪ್ರಿಯಾಂಕ್ ಖರ್ಗೆ ಕ್ಷಮೆಕೇಳಲು ಆಗ್ರಹ

ಕೇಂದ್ರ ಸಚಿವ ಅಮಿತ್ ಶಾರನ್ನು ಸಚಿವ ಪ್ರಿಯಾಂಕ್ ಖರ್ಗೆ ಕ್ಷಮೆಕೇಳಲು ಆಗ್ರಹ Union Minister Amit Shah urged to apologise to Minister Priyank Kharge

 ರಾಯಬಾಗ 24: ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ವಿಧಾನಪರಿಷತ್ತಿನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರ ಬಗ್ಗೆ ಅವಹೇಳಕಾರಿಯಾಗಿ ಮತ್ತು ಅಸಂಸದೀಯ ಪದಗಳನ್ನು ಬಳಸಿ ಮಾತನಾಡಿ ಸಚಿವ ಪ್ರಿಯಾಂಕ್ ಖರ್ಗೆ ಕೂಡಲೇ ಕ್ಷಮೆ ಕೇಳಬೇಕೆಂದು ಶಾಸಕ ಡಿ.ಎಮ್‌.ಐಹೊಳೆಯವರು ಆಗ್ರಹಿಸಿದರು. 

ಇತ್ತೀಚಿಗೆ ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೀತ್ ಶಾ ಅವರು ಸಮರ್ಥ ಅಥವಾ ಅಸಮರ್ಥ ನಾಯಕ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಆದರೆ ಮಲ್ಲಿಕಾರ್ಜುನ ಖರ್ಗೆ ಅವರ ಮಗ ಎನ್ನುವ ಕಾರಣಕ್ಕಾಗಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ಅವರು ಅಸಮರ್ಥ ಸಚಿವ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತಿದೆ. ಅವರ ತಂದೆಯವರಿಂದ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ. ಬಾಯ್ತಪ್ಪಿ ಮಾತನಾಡಿದ್ದರೆ ಕ್ಷಮೆ ಕೇಳಿ ಅದನ್ನು ಸರಿಪಡಿಸಿಕೊಳ್ಳುವುದನ್ನು ಕಲಿಬೇಕೆಂದರು.  

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ದ್ವೇಷ ಭಾಷಣ ನಿಯಂತ್ರಣ ಕಾನೂನನ್ನು ಎರಡೂ ಸದನಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆದಿದೆ. ಆ ಕಾನೂನಿನಡಿ ಪ್ರಿಯಾಂಕ್ ಖರ್ಗೆ ಅವರೇ ಮೊದಲನೇ ಅಪರಾಧಿಯಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಆಡಳಿತ ಮತ್ತು ವಿರೋಧ ಪಕ್ಷದ ನಡುವೆ ಟೀಕೆ ಟಿಪ್ಪಣಿ ನಡೆಯುವುದು ಸರ್ವೇ ಸಾಮಾನ್ಯ. ಟೀಕೆ ಟಿಪ್ಪಣಿಗಳು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು, ಜನರ ಕಲ್ಯಾಣಕ್ಕಾಗಿ ಇರಬೇಕು ಹೊರತು, ವೈಯಕ್ತಿಕ ದ್ವೇಷದಿಂದ ಹಿರಿಯರನ್ನು ಅಪಮಾನ ಮಾಡುವ ಶಬ್ದ ಬಳಸುವುದು ಯೋಗ್ಯವಲ್ಲ ಹೇಳಿದರು.