ಲಂಡನ್, ಡಿ 4-ಲಂಡನ್ ನಲ್ಲಿ ನಡೆಯುತ್ತಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಯುನೈಟೆಡ್ ಕಿಂಗ್ಡಮ್ ರಾಜಧಾನಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನ್ಯಾಟೋ ವಿರುದ್ಧ ಪ್ರತಿಭಟನೆ ನಡೆದಿದೆ.
ಎರಡು ದಿನಗಳ ನ್ಯಾಟೋ ಶೃಂಗಸಭೆ ಮಂಗಳವಾರ ಆರಂಭವಾಗಿದ್ದು, ಅಮೆರಿಕದ ರಾಜಕೀಯ ಮತ್ತು ನ್ಯಾಟೋ ವಿರೋಧಿಸಿ ಟ್ರಫಲ್ಗರ್ ಸ್ಕ್ವೇರ್ ಬಳಿ ನೂರಾರು ಜನರು ಜಮಾಯಿಸಿದ್ದರು. ಮಧ್ಯಪ್ರಾಚ್ಯ ಮತ್ತು ಲ್ಯಾಟಿನ್ ಅಮೆರಿಕದಲ್ಲಿನ ಮೈತ್ರಿ ಆಕ್ರಮಣ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಟ್ರಂಪ್ ಅವರ ವರ್ಣಭೇದ ನೀತಿ ವಿರೋಧಿಸುತ್ತಿರುವುದಾಗಿ ಪ್ರತಿಭಟನಾಕಾರರೊಬ್ಬರು ಹೇಳಿದ್ದು, ಟ್ರಂಪ್ ಅಧ್ಯಕ್ಷರಾಗುತ್ತಿದ್ದಂತೆಯೇ ಏಳು ರಾಷ್ಟ್ರಗಳ ಜನರು ಅಮೆರಿಕಕ್ಕೆ ಭೇಟಿ ನೀಡುವುದಕ್ಕೆ ನಿರ್ಬಂಧ ವಿಧಿಸಿದ್ದಾರೆ ಎಂದು ಆರೋಪಿಸಿದರು.
ಕೆಲವು ಪ್ರತಿಭಟನಾಕಾರರು ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ವಿರುದ್ಧವೂ ಘೋಷಣೆ ಕೂಗಿ, ಅವರು ಅಮೆರಿಕದ ಹಿತ ಕಾಪಾಡುತ್ತಿದ್ದು ಸ್ಥಳೀಯರ ಹಿತ ಮರೆತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರು ತಮ್ಮ ಭಾಷಣದ ನಂತರ ಬಕಿಂಗ್ ಹ್ಯಾಮ್ ಪ್ಯಾಲೇಸ್ ಗೆ ತೆರಳಿದರು. ಯುಕೆ ಪೊಲೀಸರು ಪ್ರತಿಭಟನಾ ಸ್ಥಳದಲ್ಲಿ ಗಸ್ತು ಹೊಡೆಯುತ್ತಿದ್ದಾರೆ.
2018 ರ ಜುಲೈ ನಲ್ಲಿ ಯುಕೆ ಗೆ ಟ್ರಂಪ್ ಮೊದಲ ಬಾರಿ ಭೇಟಿ ನೀಡಿದಾದ ಸಹ ಲಂಡನ್ ನಲ್ಲಿ ಟ್ರಂಪ್ ವಿರೋಧಿ ಪ್ರತಿಭಟನೆಗಳು ನಡೆದಿದ್ದವು.