ಹೆಲ್ಸಿಂಕಿ 16: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸೋಮವಾರ ಫಿನ್ಲೆಂಡ್ ರಾಜಧಾನಿ ಹೆಲ್ಸಿಂಕಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಜಗತ್ತು ನಾವಿಬ್ಬರು ಒಟ್ಟಾಗಿರುವುದನ್ನು ನೋಡಲು ಬಯಸುತ್ತದೆ ಎಂದು ಘೋಷಿಸಿದ್ದಾರೆ.
ಉಭಯ ನಾಯಕರು 2016 ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮಧ್ಯಸ್ಥಿಕೆ ಬಗ್ಗೆ ಯಾವುದೇ ಮಾತನಾಡದ ಹೆಲ್ಸಿಂಕಿ ಶೃಂಗಸಭೆಗೆ ತೆರೆ ಎಳೆದಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಟ್ರಂಪ್, ಹಲವು ವರ್ಷಗಳಿಂದ ನಾವು ಉತ್ತಮ ಸಂಬಂಧ ಹೊಂದಲು ಸಾಧ್ಯವಾಗಿಲ್ಲ. ಈಗ ರಷ್ಯಾ ಜೊತೆಗೆ ಅಭೂತಪೂರ್ವ ಸಂಬಂಧ ಹೊಂದುವ ಭರವಸೆ ಇದೆ ಮತ್ತು ಜಗತ್ತು ಇದಕ್ಕಾಗಿ ಎದುರು ನೋಡುತ್ತಿದೆ ಎಂದರು.
ಈ ವೇಳೆ ಮಾತನಾಡಿದ ಪುಟಿನ್ ಅವರು, ನಾನು ಮತ್ತು ಟ್ರಂಪ್ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದೇವೆ. ಈಗ ಪರಸ್ಪರ ಭೇಟಿಯಾಗಿದ್ದು, ಈಗ ಹಲವು ಅಂತರಾಷ್ಟ್ರೀಯ ಸಮಸ್ಯೆಗಳನ್ನು ಮತ್ತು ಸೂಕ್ಷ್ಮ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಸಮಯ ಬಂದಿದೆ
ಎಂದರು.
ಟ್ರಂಪ್ ತಮ್ಮ ಮಾತು ಮುಗಿಸುತ್ತಿದ್ದಂತೆ ಅಮೆರಿಕದ ವರದಿಗಾರರು ಚುನಾವಣಾ ಮಧ್ಯಸ್ಥಿಕೆ ಬಗ್ಗೆ ಹಲವು ಪ್ರಶ್ನೆಗಳನ್ನು ಕೇಳಿದರು. ಆದರೆ ಟ್ರಂಪ್ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಪುಟಿನ್ ಸಹ ಹುಸಿನಗೆ ಬೀರಿದರು.