ಜೀವ ರಕ್ಷಕಗಳಾಗಿವೆ ಇಂದಿನ ವೈದ್ಯ ವಿಜ್ಞಾನದ ತಂತ್ರಜ್ಞಾನಗಳು: ಡಾ. ಪ್ರಭಾಕರ ಕೋರೆ
ಬೆಳಗಾವಿ 12: ಇಂದಿನ ವೈದ್ಯ ವಿಜ್ಞಾನದ ತಂತ್ರಜ್ಞಾನಗಳು ಜೀವ ರಕ್ಷಕಗಳಾಗಿವೆ. ಇವುಗಳ ಜ್ಞಾನ ಜಗದೆಲ್ಲೆಡೆ ಪಸರಿಸುವಂತೆ ಮಾಡಲು ಇನ್ನಷ್ಟು ಇಂತಹ ವೇದಿಕೆಗಳ ಅಗತ್ಯವಿದೆ ಎಂದು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರು ಹೇಳಿದರು.
ಅವರು ರವಿವಾರ ದಿನಾಂಕ 6ನೇ ಏಪ್ರಿಲ 2025 ರಂದು ಬೆಳಿಗ್ಗೆ 11 ಕ್ಕೆ ಕೆ ಎಲ್ ಇ ಸೆಂಟಿನರಿ ಕನ್ವೆಷನ್ ಹಾಲ್ ನ ಡಾ. ಬಿ ಎಸ್ ಕೊಡಕನಿ ಸಭಾಭವನದಲ್ಲಿ “ಇಂಡಿಯನ್ ಅಥ್ರೋಸ್ಕೊಪಿ ಸೊಸೈಟಿ” ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ಜಗತ್ತೇ ತಿರುಗಿ ನೋಡುವಂತಹ ವೈದ್ಯ ವಿಜ್ಞಾನವಿದ್ದು ಅವನ್ನು ಒರೆಗೆ ಹಚ್ಚುವ ಇಂತಹ ವೇದಿಕೆಗಳು ಮೇಲಿಂದಮೇಲೆ ಹಮ್ಮಿಕೊಳ್ಳುವ ಮೂಲಕ ಹೊಸತನವನ್ನು ಕಂಡುಕೊಳ್ಳಬಹುದಾಗಿದೆ. ಕಳೆದ ವರ್ಷ ಚೈನಾದಲ್ಲಿ ನಡೆದ ವೈದ್ಯಕೀಯ ಸಮ್ಮೇಳನದಲ್ಲಿ ವೈದ್ಯಕೀಯ ಪರಿಕರಗಳ ಪ್ರದರ್ಶನವನ್ನು ಹಮ್ಮಿಕೋಳ್ಳಲಾಗಿತ್ತು. ಅಲ್ಲಿಗೆ ಭೇಟಿ ನೀಡಿದಾಗ ನಮ್ಮಲ್ಲಿ ಅದೇ ಮಾದರಿಯ ಸೇವೆಗಳನ್ನು ಜನರಿಗೆ ನೀಡುವ ಉದ್ದೇಶದಿಂದ ಅವರು ಅಲ್ಲಿ ಅಳವಢಿಸಿರುವ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ನಮ್ಮಲ್ಲಿಯೂ ಅಳವಡಿಸುವ ಇಂಗಿತವಿದೆ ಎಂದು ತಿಳಿಸಿದರು. ಅದೇರೀತಿಯಾಗಿ ನಮ್ಮ ಕೆ ಎಲ್ ಇ ಆಸ್ಪತ್ರೆಯ ಯುವ ವೈದ್ಯರನ್ನು ಶ್ಲಾಘಿಸುತ್ತ ಇಂತಹ ವೇದಿಕೆಯನ್ನು ಸೃಷ್ಟಿಮಾಡಿ ದೇಶದ ನಾನಾ ಭಾಗಗಳ ವೈದ್ಯರಿಗೆ ತಮ್ಮ ಜ್ಞಾನವನ್ನು ಅಧಿಕಗೊಳಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಿರುವ “ಇಂಡಿಯನ್ ಅಥ್ರೋಸ್ಕೊಪಿ ಸೊಸೈಟಿ” ಗೆ ವಂದನೆಗಳು ಎಂದು ಅಭಿಮತ ವ್ಯಕ್ತ ಪಡಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ “ಇಂಡಿಯನ್ ಅಥ್ರೋಸ್ಕೊಪಿ ಸೊಸೈಟಿ”ಯ ಮಾಜೀ ಕಾರ್ಯದರ್ಶಿಗಲಾದ ಡಾ.ಸಂದೀಪ ಆರ್. ಬಿರಾರಿಸ್ ಮಾತನಾಡುತ್ತ ತಂತ್ರಜ್ಞಾನದಲ್ಲಿ ಅತ್ಯತ್ಭುತ ಪ್ರಗತಿ ಸಾಧಿಸಿರುವ ವೈದ್ಯ ವಿಜ್ಞಾನವು ಇಂದಿನ ಯುವ ವೈದ್ಯರಿಗೆ ಅರಿತುಕೊಳ್ಳಲು ಸುಲಭಸಾಧ್ಯ. ಆದರೆ ಅದನ್ನು ತಿಳಿಸಲು ಇಂತಹ ವೈದ್ಯಕೀಯಶಿಕ್ಷಣ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಜ್ಞಾನದ ಕನಜಗಳಾಗಿವೆ. ಇವುಗಳ ಸದುಪಯೋಗ ಪಡೆದುಕೊಳ್ಳುವದು ಯುವ ವೈದ್ಯರ ಜವಾಬ್ದಾರಿಯಾಗಿವೆ ಎಂದು ತಿಳುವಳಿಕೆ ನೀಡಿದರು.
ಕಾಹೆರನ್ ಉಪ ಕುಲಪತಿಗಳಾದ ಡಾ.ನಿತಿನ ಗಂಗಾಣೆ, ಯು.ಎಸ್.ಎಂ ಕೆ.ಎಲ್.ಇ ನಿರ್ದೇಶಕರಾದ ಡಾ. ಎಚ್.ಬಿ ರಾಜಾಶೇಖರ, ಜವಾಹರಲಾಲ ನೆಹರು ವೈದ್ಯಕೀಯ ಕಾಲೇಜಿನ ಪಾಂಶುಪಾಲರಾದ ಡಾ. ಶ್ರೀಮತಿ. ಎನ್.ಎಸ್.ಮಾಹಾಂತಶೆಟ್ಟಿ ಹಾಗೂ ಉಪ ಪ್ರಾಂಶುಪಾಲರಾದ ಡಾ.ರಾಜೇಶ ಪವಾರ, ಕೆ.ಎಲ್.ಇ ಶತಮಾನೋತ್ಸವ ಚಾರೀಟಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಎಸ್.ಸಿ.ಧಾರವಾಡ, ಡಾ. ವಿ ಜಿ ಮುರಕಿಭಾವಿ, ಡಾ. ಪ್ರಕಾಶ ವಾಲಿ, ಡಾ.ಆರ್.ಎಸ್ ಜತ್ತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ವೈದ್ಯರು ದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ್ದರು. 2 ರೋಗಿಗಳ ಮೊಣಕಾಲಿನ ಅಥ್ರೋರ್ಸ್ಕೋಪಿಕ ಶಸ್ತ್ರಚಿಕಿತ್ಸೆಯನ್ನು ವಿಡಿಯೋ ಮೂಲಕ ನೇರ ಪ್ರಸಾರ ಮಾಡಲಾಯಿತು. ಕಾರ್ಯಕ್ರಮವನ್ನು ಯುವ ಎಲುಬು ಕೀಲು ತಜ್ಞರಾದ ಡಾ. ಅಜೀತ ಹುಂಡೇಕರ, ಡಾ. ಮುರುಗೇಶ ಕುರಣಿ, ಡಾ. ಉತ್ಕರ್ಷ ಬುರ್ಲಿ ಮತ್ತು ಡಾ. ಗಂಗಾಧರ ಭೂತಿ ಅವರು ನಿರೂಪಿಸಿದರು. ಡಾ. ಅನೀಲ ಪಾಟೀಲ ಸ್ವಾಗತಿಸಿದರು, ಡಾ. ಎಮ್ ಎನ ಪಾಟೀಲ ವಂದಿಸಿದರು.