ಭಾವಚಿತ್ರಕ್ಕೂ ಭಾವನೆಗಳ ಬಂಧವಿದೆ: ಡಾ. ಯಲ್ಲಪ್ಪ ಹಿಮ್ಮಡಿ
There is an emotional bond with a portrait too: Dr. Yallappa Himmadi
ರಾಮದುರ್ಗ, 05 : ಪ್ರತಿಯೊಬ್ಬ ಸಾಧಕರ ಭಾವಚಿತ್ರವೂ ಒಂದು ಪಠ್ಯವಿದ್ದಂತೆ. ಒಂದು ಭಾವಚಿತ್ರ ನೋಡಿದಾಕ್ಷಣವೇ ಆ ವ್ಯಕ್ತಿಯ ಎಲ್ಲ ಭಾವನೆಗಳೂ ನಮ್ಮ ಕಣ್ಣು ಮುಂದೆ ವ್ಯಕ್ತಿ ರೂಪದಲ್ಲಿ ಮೂಡಿ ನಿಲ್ಲುತ್ತವೆ. ಡಾ. ಅಂಬೇಡ್ಕರ್ ಅವರ ಭಾವಚಿತ್ರ ನೋಡಿದಾಕ್ಷಣ ಶಿಕ್ಷಣ ಮತ್ತು ಸಂವಿಧಾನದ ರೂಪಕಗಳು ಕಣ್ಣೆದುರು ನಿಂತಂತೆ, ಬಸವರಾಜ ಕಟ್ಟೀಮನಿಯವರ ಭಾವಚಿತ್ರ ನೋಡಿದಾಕ್ಷಣ ಓದಿದ ಅವರ ಕಾದಂಬರಿಗಳು ಮತ್ತು ನಿಷ್ಟುರ ವ್ಯಕ್ತಿತ್ವ ಮೂಡಿ ನಿಲ್ಲುತ್ತವೆ. ಹಾಗಾಗಿ ಪ್ರತಿ ಭಾವಚಿತ್ರಕ್ಕೂ ತನ್ನದೇ ಆದ ಭಾವನೆಗಳ ಬಂಧವಿದೆ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು.ಅವರು ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಬಸವರಾಜ ಕಟ್ಟೀಮನಿ ಭಾವಚಿತ್ರ ಅನಾವರಣ ಹಾಗೂ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ಅಸಮಾನತೆಗೆ ಕಾರಣವಾಗಿರುವ ವ್ಯವಸ್ಥೆಯನ್ನು ಅರ್ಥೈಸುವ ಸಾಹಿತ್ಯವನ್ನು ಯುವಕರಿಗೆ ತಲುಪಿಸಿ ಅವರ ವಿಚಾರ ಪ್ರಜ್ಞೆಯನ್ನು ಜಾಗೃತಿಗೊಳಿಸಿದರೆ, ಅವರೇ ಮುಂದಾಗಿ ಸಮಾಜದ ಪ್ರಗತಿಗೆ ಎದೆಯೊಡ್ಡಿ ನಿಲ್ಲುತ್ತಾರೆಂದು ಬಸವರಾಜ ಕಟ್ಟೀಮನಿ ಆಶಿಸಿದ್ದರು. ಸಾಹಿತ್ಯ ಸ್ವಪ್ರತಿಷ್ಠೆಯ ವಸ್ತುವಲ್ಲ, ಬದಲಿಗೆ ಪ್ರಗತಿಗೆ ಅಡ್ಡಿಯಾಗಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧದ ಅಸ್ತ್ರವೆಂದು ಕಟ್ಟೀಮನಿ ಭಾವಿಸಿದ್ದರು ಎಂದರು.
ಬಸವರಾಜ ಕಟ್ಟೀಮನಿ ಅವರ ಸಾಹಿತ್ಯ ಕುರಿತು ಉಪನ್ಯಾಸ ನೀಡಿದ ಕವಿ, ಅನುವಾದಕ ವಿಠ್ಠಲ್ ದಳವಾಯಿ ಮಾತನಾಡಿ ಕಟ್ಟೀಮನಿಯವರ ಬರಹ ಸಮಾಜದಲ್ಲಿನ ಮೌಢ್ಯಗಳನ್ನು ಕತ್ತರಿಸುವ ಕತ್ತಿಯ ಮೊನೆಯಂತಿದೆ. ದುಡಿಯುವ ಜನಗಳ ಪರವಾಗಿ ಸಾಹಿತ್ಯ ರಚಿಸಿದ ಕಟ್ಟೀಮನಿಯವರು ಕುವೆಂಪು ನಂತರದ ಬಹು ಮುಖ್ಯ ಲೇಖಕರಲ್ಲಿ ಒಬ್ಬರಾಗಿದ್ದರು. ಬರೆದಂತೆ ಬದುಕಿದ್ದ ಅವರು ಬರೆಯುತ್ತಲೇ ಚಳುವಳಿಯಲ್ಲಿ ಸಕ್ರಿಯರಾಗಿದ್ದರು ಎಂದರು. ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ಪ್ರೊ. ಎಸ್. ಜಿ. ಚಿಕ್ಕನರಗುಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ಅಧ್ಯಾಪಕ ಡಾ. ಶಿವಾಜಿ ಕೊಡತೆ ವೇದಿಕೆಯಲ್ಲಿದ್ದರು. ಪ್ರಾಂಶುಪಾಲ ಡಾ. ಡಿ. ಡಿ. ಮುಜಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಪದವಿ ಕಾಲೇಜಿನ ಅಧ್ಯಾಪಕರುಗಳಾದ ಡಾ. ರಾಜು ಕಂಬಾರ, ಡಾ. ಯಮನಪ್ಪ ಹೊಸಮನಿ, ಡಾ. ಎಂ. ಎನ್. ಭಜಂತ್ರಿ, ಸಮಾಜ ಕಲ್ಯಾಣ ಇಲಾಖೆಯ ಶ್ರೀಶೈಲ ತುಳಸಿಗೇರಿ, ವಿದ್ಯುತ್ ಇಲಾಖೆಯ ಶಶಿಕಾಂತ ಕಂಬಣ್ಣವರ, ಶಶಿಕಾಂತ ನೆಲ್ಲೂರ, ಹನುಮಂತ ಯರಗಟ್ಟಿ, ಪ್ರೊ. ಬಿ. ಬಿ. ಹರನಟ್ಟಿ, ಅಕ್ಕಮಹಾದೇವಿ ಯತ್ನಟ್ಟಿ, ಮೇಘಾ ಅಥಣಿ, ಭಾರತಿ ಪಮ್ಮಾರ್, ಪ್ರೊ. ಎಸ್. ಬಿ. ಕೋತಿನ್ ಮುಂತಾದವರು ಹಾಜರಿದ್ದರು. ಆರಂಭದಲ್ಲಿ ಎಸ್. ಎ. ಡಂಗಿ ಸ್ವಾಗತಿಸಿದರು. ಸಿಂಧೂ ಸುರೇಬಾನ ವಂದಿಸಿದರು. ರಮೇಶ್ ಮಾಗನೂರ ಮತ್ತು ಎಸ್.ಜಿ. ಹಡಪದ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 