ಪ.ಜಾತಿ, ಪ.ಪಂಗಡದ ಸಮುದಾಯಕ್ಕೆ ನ್ಯಾಯ ಒದಗಿಸುವುದು ಆಯೋಗದ ಉದ್ದೇಶ

ಪ.ಜಾತಿ, ಪ.ಪಂಗಡದ ಸಮುದಾಯಕ್ಕೆ ನ್ಯಾಯ ಒದಗಿಸುವುದು ಆಯೋಗದ ಉದ್ದೇಶ The purpose of the commission is to provide justice to the Scheduled Caste and Scheduled Tribe comm

ಹಾವೇರಿ 20:   ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ನ್ಯಾಯ ಒದಗಿಸುವುದು ಆಯೋಗದ ಉದ್ದೇಶವಾಗಿದೆ. ನೊಂದ ಜನರ ಪರವಾಗಿ ಆಯೋಗ ಕೆಲಸ ಮಾಡುತ್ತದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಎಲ್  ಅವರು ಹೇಳಿದರು. ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ದಲಿತ ಮುಖಂಡರ ಕುಂದುಕೊರತೆ ಸಂವಾದ ನಡೆಸಿ, ಸಮಚಿತ್ತದಿಂದ ಎಲ್ಲರ ದೂರು-ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು,   ಜಿಲ್ಲೆಯಲ್ಲಿ ಜಾತಿನಿಂದನೆ, ಸೌಲಭ್ಯ ವಂಚಿತ ಮಾಜಿ ದೇವದಾಸಿ,   ಹೊರಗುತ್ತಿಗೆ ನೇಮಕಾತಿಯಲ್ಲಿ ಮೀಸಲಾತಿ  ಅನುಸರಿಸುತ್ತಿಲ್ಲ, ಜಾತಿ ನಿಂದನೆ ಪ್ರಕರಣ, ಎಸ್‌.ಸಿಎಸ್‌ಪಿ/ಟಿ.ಎಸ್‌ಪಿ ಅನುದಾನ ದುರುಪಯೋಗ, ಪೌರಕಾರ್ಮಿಕರ ನೇಮಕಾತಿ, ಮುಂಬಡ್ತಿ ವಿಳಂಬ, ಜಾತಿ ನಿಂದನೆ, ಸಿಆರ್ ಸೆಲ್ ಸರಿಯಾಗಿ ಕಾರ್ಯನಿರ್ವಹಿಸಿದ ಬಗ್ಗೆ, ಭೂಸ್ವಾಧೀನ ಪರಿಹಾರ ವಿಳಂಬ, ಸ್ಮಶಾನ ಭೂಮಿ ಸಮಸ್ಯೆ, ಡಾ.ಬಿ.ಆರ್‌.ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ ಭವನ,  ನಕಲಿ ಜಾತಿ ಪ್ರಮಾಣಪತ್ರ ಹೀಗೆ ಹಲವಾರು  ದೂರುಗಳು ಬಂದಿದ್ದು,  ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು. 

ಮುಖ್ಯಮಂತ್ರಿಗಳಿಗೆ ವರದಿ: ನಾನು ಆಯೋಗದ ಅಧ್ಯಕ್ಷನಾದ ನಂತರ, ಈಗಾಗಲೇ ಆರು ಜಿಲ್ಲೆ ಪ್ರವಾಸ ಮುಗಿಸಿ ಏಳನೇ ಜಿಲ್ಲೆಯಾಗಿ ಹಾವೇರಿಗೆ ಆಗಮಿಸಿದ್ದೇನೆ.  ರಾಜ್ಯಾದ್ಯಂತ ಪ್ರವಾಸಕೈಗೊಂಡು ಫೆಬ್ರವರಿ ಅಂತ್ಯದೊಳಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಸಮಸ್ಯೆಗಳ ಕುರಿತು ವರದಿ ಸಲ್ಲಿಸುತ್ತೇನೆ ಹಾಗೂ ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪ ಮಾಡುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. 

ಆನ್‌ಲೈನ್‌ನಲ್ಲಿ ದೂರು: ಯಾರೂ ದೂರು ಹೇಳಿಕೊಳ್ಳಲು ಅವಕಾಶ ಸಿಗಲಿಲ್ಲ ಎಂದು ಬೇಜಾರಾಗುವುದು ಬೇಡ, ಮಾರ್ಚ್‌ ಅಥವಾ ಏಪ್ರಿಲ್ ಮಾಹೆಯಿಂದ ಆನ್‌ಲೈನ್ ದೂರು ಸ್ವೀಕಾರ ವ್ಯವಸ್ಥೆ ಮಾಡಲಾಗುವುದು. ಅನಕ್ಷರಸ್ಥರಿಗೆ ಆನ್‌ಲೈನ್‌ನಲ್ಲಿ ದೂರು ದಾಖಲಿಸಲು ಬರುವುದಿಲ್ಲ. ಅಂತವರು ಸಮಾಜ ಕಲ್ಯಾಣ ಇಲಾಖೆಗೆ ಹೋಗಿ ಅಲ್ಲಿನ ಗುಮಾಸ್ತನ  ಮೂಲಕ ಅರ್ಜಿ ಸಲ್ಲಿಸುವ ಸೌಲಭ್ಯ ಮಾಡಲಾಗುವುದು ಎಂದರು ಹಾಗೂ ಸ್ವತಃ ತಾವೇ ಜನರ ಬಳಿ ಹೋಗಿ ಅವರ ದೂರು-ಅಹವಾಲುಗಳನ್ನು ಸ್ವೀಕರಿಸಿ ಅವರಿಗೆ ಸಾಂತ್ವಾನ ಹೇಳಿದರು.   ಆಯೋಗದಲ್ಲಿ ಪ್ರತಿ ಗುರುವಾರ ಹಾಗೂ ಶುಕ್ರವಾರ ಕೋರ್ಟ ನಡೆಸಲಾಗುತ್ತದೆ. ಮೂರು ತಿಂಗಳು 11 ದಿನಗಳ ಅವಧಿಯಲ್ಲಿ  ಆಯೋಗದಲ್ಲಿ ದಾಖಲಾಗಿದ್ದ 3,628 ಪ್ರಕರಣಗಳ ಪೈಕಿ 212 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಆಯೋಗಕ್ಕೆ ಬರುವ ದೂರುಗಳ ಕುರಿತು ಆಯಾ ಇಲಾಖೆ ಸರ್ಕಾರದ ಕಾರ್ಯದರ್ಶಿಗಳು ಹಾಗೂ ಎಂ.ಡಿ.ಅವರನ್ನು  ಆಯೋಗಕ್ಕೆ ಕರೆಸಿ ಸಮಸ್ಯೆ ಬಗೆಹರಿಸುವ  ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇಂದು ಸ್ವೀಕಾರಿಸಲಾದ ಎಲ್ಲ  ದೂರುಗಳಿಗೆ  ಪರಿಹಾರ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ  ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು ಎಂದರು. 

ಜಿಲ್ಲೆಯಲ್ಲಿ  ಪೋಕ್ಸೋ ಪ್ರಕರಣ ಅಧಿಕ ದಾಖಲಾಗಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ. ಯಾವುದೇ ಜಾತಿಯವರಾಗಿರಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಬರುವ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸೌಲಭ್ಯ ವಂಚಿತ ಮಾಜಿ ದೇವದಾಸಿ ಮಹಿಳೆಗೆ ಕೂಡಲೇ ಪಿಂಚಣಿ ಹಾಗೂ ವಿವಿಧ ಸೌಲಭ್ಯ ನೀಡುವಂತೆ, ಭೂಸ್ವಾಧೀನ ಪರಿಹಾರ ನೀಡುವಂತೆ, ಎಸ್‌.ಸಿಎಸ್‌ಪಿ/ಟಿ.ಎಸ್‌ಪಿ ಅನುದಾನ ದುರುಪಯೋಗದ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಮಾಹಿತಿ ನೀಡಬೇಕು. ಬರುವ ದಿನಗಳಲ್ಲಿ ಯಾವ ಇಲಾಖೆಯಿಂದ ಯಾವ ಅನುದಾನದಲ್ಲಿ ಕಾಮಗಾರಿ ಮಾಡಲಾಗಿದೆ ಎಂದು ನಾಮಫಲಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  ಸ್ಮಶಾನ ಭೂಮಿ: ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವ ಬಗ್ಗೆ ದೂರು ಬಂದಿದ್ದು, ಸರ್ಕಾರದ ಮಾರ್ಗಸೂಚಿಯನ್ವಯ ಜಾಗ ನೋಡಿ ಸ್ಮಶಾನ ಸೌಲಭ್ಯ ದೊರಕಿಸಿಕೊಡಬೇಕು. ಜತೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಡಾ.ಬಿ.ಆರ್‌.ಅಂಬೇಡ್ಕರ, ಬಾಬು ಜಗಜೀವನರಾಂ, ವಾಲ್ಮೀಕಿ ಭವನಗಳ ನಿರ್ವಹಣೆ ಸಮಾಜ ಕಲ್ಯಾಣ  ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜವಾಬ್ದಾರಿಯಾಗಿದೆ. ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸಮಾಡಬೇಕು.  ಇಂತಹ  ದೂರುಗಳು ಬರದಂತೆ ಅತ್ಯಂತ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು ಎಂದು   ಅಧಿಕಾರಿಗಳಿಗೆ ಸೂಚನೆ ನೀಡಿದರು.  ಗೈರಾದ ಅಧಿಕಾರಿಗಳ ಮಾಹಿತಿ ಸಲ್ಲಿಸಿ:  ತುಂಗಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನ  ಪರಿಹಾರ ವಿಷಯದ ಕುರಿತು ಹಾಗೂ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ  ಎಸ್‌.ಸಿಎಸ್‌ಪಿ/ಟಿ.ಎಸ್‌ಪಿ ಅನುದಾನ ವೆಚ್ಚದ ಮಾಹಿತಿ ಕೇಳಿದ ಸಂದರ್ಭದಲ್ಲಿ  ವೈದ್ಯಕೀಯ ಕಾಲೇಜ್ ಡೀನ್  ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಸಭೆಗೆ ಗೈರಾದ ಹಿನ್ನಲೆಯಲ್ಲಿ, ಸಿಡಿಮಿಡಿಗೊಂಡ ಅಧ್ಯಕ್ಷರು, ಇಂತಹ ಮುಖ್ಯವಾದ ಸಭೆಗೆ ಬಾರದಿದ್ದರೆ ಹೇಗೆ ಕೆಲಸಮಾಡುತ್ತಾರೆ,  ಈ ಸಭೆಗೆ ಗೈರು ಹಾಜರಾದ ಅಧಿಕಾರಿಗಳ ಪಟ್ಟಿಯನ್ನು ಆಯೋಗಕ್ಕೆ ನೀಡುವಂತೆ ಅಪರ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.     

ದೂರುಗಳ ಮಹಾಪೂರ: ಸತತ ಎರಡು ಗಂಟೆ ನಡೆದ ಸಮುದಾಯ ಮುಂಡರ ಸಂವಾದ ಸಭೆಯಲ್ಲಿ ಎಸ್‌.ಸಿಎಸ್‌ಪಿ/ಟಿ.ಎಸ್‌ಪಿ ಅನುದಾನ ದುರುಪಯೋಗ,  ಜಾತಿ ನಿಂದನೆ,  ಭೂಸ್ವಾಧೀನ ಪರಿಹಾರ ವಿಳಂಬ, ಸ್ಮಶಾನ ಭೂಮಿ ಸಮಸ್ಯೆ, ಡಾ.ಬಿ.ಆರ್‌.ಅಂಬೇಡ್ಕರ್ ಭವನ, ಬಾಬು ಜಗಜೀವನರಾಂ ಭವನ,  ನಕಲಿ ಜಾತಿ ಪ್ರಮಾಣಪತ್ರ ಹೀಗೆ ಹಲವಾರು  ದೂರುಗಳು  ಕೇಳಿಬಂದವು. 

ಉಡಚಪ್ಪ ಮಾಳಗಿ ಅವರು ಎಸ್‌.ಸಿ.ಎಸ್‌.ಪಿ/ಟಿ.ಎಸ್‌.ಪಿ ಅನುದಾನ ದುರುಪಯೋಗ,  ಸಫಾಯಿ ಕರ್ಮಚಾರಿಗಳ ನ್ಯಾಯಸಿಗಬೇಕು,  ನೇಮಕಾತಿಯಲ್ಲಿ ಪೌರಕಾರ್ಮಿಕರಿಗೆ ಅನ್ಯಾಯವಾದ ಕುರಿತು,  ಸಂಜಯಗಾಂಧಿ ಸಂಜೀವಣ್ಣನವರ ಕೆ.ಎಂ.ಎಫ್,  ಎಥನಾಲ್ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಮರಿಚಿಕೆ,  ಭೂಸ್ವಾಧೀನ ಪರಿಹಾರ ಬರದ ಬಗ್ಗೆ,  ಆಸ್ಪತ್ರೆಯಲ್ಲಿ ಕೆಲಸಮಾಡುತ್ತಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಎಸ್‌.ಎಸ್‌.ಎಲ್‌.ಸಿ. ಹಾಗೂ ಪಿಯುಸಿ ಪಾಸಾದವರು ಕಸಗೂಡಿಸುತ್ತಾರೆ ಅವರಿಗೆ ಮೇಲಿನ ಹುದ್ದೆಗೆ ಬಡ್ತಿ ಕುರಿತು, ರಮೇಶ ಆನವಟ್ಟಿ ಅವರು  ಮಾತನಾಡಿ, ಈ ಮೊದಲು ದೌರ್ಜನ್ಯ ಪ್ರಕರಣಗಳಲ್ಲಿ  ಆಯಾ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿತ್ತು, ಈಗ ಸಿ.ಆರ್‌.ಸೇಲ್ ವ್ಯವಸ್ಥೆ ಮಾಡಿದ್ದು, ಅಲ್ಲಿ ಸಿಬ್ಬಂದಿ ಕೊರತೆ ಇದೆ ಹಾಗೂ 5-30ಕ್ಕೆ ಕಚೇರಿಗೆ ಬೀಗ್ ಹಾಕಲಾಗುತ್ತದೆ ಇದರಿಂದ ದೌರ್ಜನ್ಯ ಪ್ರಕರಣಗಳಲ್ಲಿ ವಿಳಂಬವಾಗುತ್ತಿದೆ,  ಸಿ.ಆರ್‌.ಎಲ್‌. ಅವಶ್ಯ ಇಲ್ಲ.  ನಕಲಿ ಜಾತಿ ಪ್ರಮಾಣಪತ್ರ ಹಾವಳಿ ತಡೆಯಬೇಕು,  ಯುಟಿಪಿ ಕಾಮಗಾರಿಗೆ ಹೆಚ್ಚುವರಿ ಜಮೀನು ಭೂಸ್ವಾಧೀನ ಮಾಡಿಕೊಂಡಿದ್ದು, ಡಿ ನೋಟಿಫಿಕೇಷನ್ ಮಾಡಿ ಹೆಚ್ಚುವರಿ ಜಮೀನು ಮರಳಿಗೆ ಆಯಾ ಸಮುದಾಯಕ್ಕೆ ನೀಡುವ ಕುರಿತು,  ಮಂಜುಳಾ ಕರಬಸಮ್ಮನವರ  ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಹಣ ಬರದ ಬಗ್ಗೆ,   ಮುತ್ತುರಾಜ ಮಾದರ ಜಾತಿ ನಿಂದನೆ ಕುರಿತು, ರಾಣೇಬೆನ್ನೂರು, ಸವಣೂರು ಹಾಗೂ ಹಾನಗಲ್ ತಾಲೂಕು ಸೇರಿದಂತೆ ವಿವಿಧ ತಾಲೂಕುಗಳ ಮುಖಂಡರು, ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಜಾತಿ ನಿಂದನೆ,  ಕೌಂಟರ್ ಪ್ರಕರಣ, ಜಮೀನು ಸಮಸ್ಯೆ, ಶಾಲೆಗಳ ಶೌಚಾಲಯ, ಸ್ವಚ್ಛತೆ, ಸ್ಮಶಾನ ಭೂಮಿ, ಡಾ.ಬಿ.ಆರ್‌.ಅಂಬೇಡ್ಕರ ಭವನ ನಿರ್ವಹಣೆ ಅವ್ಯವಸ್ಥೆ   ಸರಿಪಡಿಸುವ ಕುರಿತು ಆಯೋಗದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು. 

ಆಯೋಗದ ಕಾರ್ಯದರ್ಶಿ ಎಚ್‌.ಆರ್‌.ಶಿವರಾಂ,  ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ರುಚಿ ಬಿಂದಲ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಯಶೋಧಾ ವಂಟಗೋಡಿ, ಅಪರ  ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್,  ಉಪ ವಿಭಾಗಾಧಿಕಾರಿಗಳಾದ ಶುಭಂ ಶುಕ್ಲಾ, ಕಲ್ಯಾಣಿ ಕಾಂಬ್ಳೆ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಪ್ರಶಾಂತ ವರಗಪ್ಪನವರ,   ಆಯೋಗದ ಸಹಾಯಕ ನಿರ್ದೇಶಕ ಶ್ರೀನಿವಾಸ ಉಪಸ್ಥಿತರಿದ್ದರು.