ಜಾನಪದದಲ್ಲಿ ಶಿವಶರಣರ ಸದ್ವಿಚಾರಗಳು ಹಾಸು ಹೊಕ್ಕಾಗಿವೆ : ಡಾ. ಸೋಮಶೇಖರ ವಾಲಿ

ಜಾನಪದದಲ್ಲಿ ಶಿವಶರಣರ ಸದ್ವಿಚಾರಗಳು ಹಾಸು ಹೊಕ್ಕಾಗಿವೆ : ಡಾ. ಸೋಮಶೇಖರ ವಾಲಿ The good thoughts of Shiva Sharan are well-known in folklore: Dr. Somashekar Vali

ವಿಜಯಪುರ 09 : ಶರಣರ ನೆನೆದರೆ ಸರಗಿಯ ಇಟ್ಟಾಂಗ, ಅರಳ ಮಲ್ಲಿಗೆ ಹೂವು ಮುಡಿದಾಂಗ, ಕಲ್ಯಾಣದ ಶರಣರ ನೆನಯೋ ಎಲೆ ಮನವೆ ಎಂದು ನಮ್ಮ ನಾಡಿನ ಜನಪದರು ತಮ್ಮ ಸಹಜ ಸುಂದರ ಆಡು ಭಾಷೆಯಲ್ಲಿ ಬಸವಣ್ಣನವರ ಕಾಲದ ಶಿವಶರಣರನ್ನು ಸ್ಮರಿಸುತ್ತಾ ಬಂದಿದ್ದಾರೆ ಎಂದು ಡಾ. ಸೋಮಶೇಖರ ವಾಲಿ ನಿವೃತ್ತ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಪುರ ಅವರು ನುಡಿದರು. 

ಅವರು ದಿ 8-3-2026 ರಂದು ವಿಜಯಪುರದ ವೀರಶೈವ ಲಿಂಗಾಯತ ಭವನದಲ್ಲಿ ರೋಟರಿ ಪ್ರೋಬಸ್ ಕ್ಲಬ್ ವಿಜಯಪುರ ಉತ್ತರ ವತಿಯಿಂದ ಆಯೋಜಿಸಲಾದ ಮಾಸಿಕ ಸಭೆಯಲ್ಲಿ ಜನಪದರು ಕಂಡ ಶಿವಶರಣರು ವಿಷಯವಾಗಿ ಉಪನ್ಯಾಸ ನೀಡಿದರು. ಮುಂದುವರೆದು ಮಾತನಾಡಿ, ಕಲ್ಲಿಗೆ ಮುಕ್ಕಹಾಕಿ ಬಲ್ಲಿದನ ನೆನೆದೆನೆ ಬಲ್ಲಿದರೊಡೆಯ ಬಸವಣ್ಣ ಎಂದು ಹಾಡುತ್ತ ಬಸವಣ್ಣನ ಬಗ್ಗೆ ಗೌರವ ತೋರಿಸಿದ್ದಾರೆ. 

ನೂರಾರು ದೇವರಲ್ಲಿ ಯಾರಾ​‍್ಯರ ನೆನೆಯಲಿ, ಎಳ್ಳು ಜೀರಿಗೆ ಬೆಳೆಯೋಳ ಭೂ ತಾಯಿ ಎದ್ದೊಂದು ಗಳಿಗೆ ನೆನೆದೇನ ಎಂದು ಭೂತಾಯಿಗೆ ಜನಪದರು ನಮಿಸಿದ್ದಾರೆ. ಮಲ್ಲಿಗೆ ಇರುವಾಗ ಮುಳ್ಯಾಕ ಮುಡಿಯಲಿ, ಕಲ್ಯಾಣದಣ್ಣ ಬಸವಣ್ಣ ಇರುವಾಗ ಕಲ್ಲಿಗ್ಯಾಕ ಕೈ ಮುಗಿಯಲೆ ಎಂದು ಬಸವಣ್ಣನವರ ಶರಣರ ತತ್ವಗಳನ್ನು ಗೌರವಿಸಿದ್ದಾರೆ. ಬನವಾಸಿ ಕುಂತಳದಿ ಜನಿಸಿದ ಪ್ರಭುದೇವ ಎಲ್ಲರಿ ಊದಿದನು ಶಿವಮಂತ್ರವ ಎಂದು ಅಲ್ಲಮ ಪ್ರಭುದೇವರು ಜನರಿಗೆ ಅನುಭವ ಮಂಟಪದಲ್ಲಿ ಶಿವಮಂತ್ರವನು ತಿಳಿಸಿದನೆಂಬುದು ಜನಪದರು ಹಾಡಿ ಹೊಗಳಿದ್ದಾರೆ. ಶಿವನೇ ಶರಣರು ಶರಣರೇ ಶಿವನವ್ವ ಎಂದು ನುಡಿದು ಇದರಲ್ಲಿ ಬೇಧ ಭಾವವಿಲ್ಲ ಎಂದು ನುಡಿದಿದ್ದಾರೆ. ಹೀಗೆ ಜನಪದದಲ್ಲಿ ಕಲ್ಯಾಣದ ಶಿವಶರಣರಾದ ಬಸವಣ್ಣ, ಮಡಿವಾಳ ಮಾಚಿದೇವ, ಸೊನ್ನಲಿಗೆಯ ಸಿದ್ಧರಾಮ, ಹರಳಯ್ಯ, ಮಧುವರಸ ಹಡಪದ ಅಪ್ಪಣ್ಣ ಗುಡ್ಡಾಪುರ ದಾನಮ್ಮ ದೇವಿ ಮುಂತಾದವರು ಬದುಕಿನ ಅವರ ದೈವ ಭಕ್ತಿ, ಸಾಮಾಜಿಕ ಚಿಂತನೆಗಳು ಕಂಡು ಬರುತ್ತವೆ. 

ಹೀಗೆ ಶಿವಶರಣರ ವಚನಗಳು ಹಾಗೂ ಜಾನಪದ ಗೀತೆಗಳು ಅಂದಿನ ಜೀವನದ ರೀತಿ ಹಾಗೂ ಧಾರ್ಮಿಕ ಸಾಮಾಜಿಕ ಚಿಂತನೆಗಳನ್ನು ಎತ್ತಿ ತೋರತ್ತವೆ ಎಂದು ನುಡಿದರು. ಜಾನಪದದಲ್ಲಿ ಜೋಗುಳ ಗೀತೆ, ಬೀಸುವ ಕಲ್ಲಿನ ಪದಗಳು, ಹಂತಿಯ ಹಾಡುಗಳು ವಿವಿಧ ಪ್ರಕಾರಗಳನ್ನು ಹಿರಿಯರು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ ಎಂದರು. ರೋಟರಿ ಪ್ರೊಬಸ್ ಕ್ಲಬ್ ಉತ್ತರದ ಅಯಕ್ಷರಾದ ಶ್ರೀ ಮಹಾದೇವ ಎಸ್‌. ಹಾಲಳ್ಳಿಯವರು ಅಧ್ಯಕ್ಷತೆ ವಹಿಸಿ ಜಾನಪದ ಗೀತೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಿ ಉಳಿಸಿಕೊಳ್ಳಲು ಮಾತೆಯರೂ ಶ್ರಮಿಸಬೇಕು. ಅಂತರಾಷ್ಟ್ರೀಯ ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಸದ್ವಿಚಾರಗಳನ್ನು ಮಕ್ಕಳಲ್ಲಿ ತಮ್ಮ ನಡೆ ನುಡಿಗಳಿಂದ ತೋರಿಸಬೇಕೆಂದರು. 

ಆರಂಭದಲ್ಲಿ ಎಸ್‌. ಆರ್‌. ಮಾನಕರ ಮತ್ತು ಶಂಕರ ತದ್ದೆವಾಡಿ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಸುಭಾಷ ಬೆಟಗೇರಿ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಜಗದೀಶ ಮೋಟಗಿ ವಂದಿಸಿದರು. ಡಾ. ಎಸ್‌. ಸಿ. ಹಿರೇಮಠ ಅವರು ಕಾರ್ಯಕ್ರಮ ನಿರೂಪಿಸಿದರು. ಹಿರಿಯರಾದ ವಿ.ಸಿ.ನಾಗಠಾಣ, ಸಹದೇವ ನಾಡಗೌಡ ಎಸ್‌.ಎನ್‌. ಶಿವಣಗಿ, ಮ.ಗು. ಯಾದವಾಡ, ಎಸ್‌.ಪಿ. ಮುಧೋಳ, ಬಸವರಾಜ ಹಂಗರಗಿ, ಈರಣ್ಣ ಚಿಮ್ಮಲಗಿ, ಡಾ. ವಿ.ಡಿ. ಐಹೊಳ್ಳಿ, ಆರ್‌. ಜಿ. ಬ್ಯಾಕೋಡ, ಈಶ್ವರಗೊಂಡ ಬಸವರಾಜ ಮೋದಿ ಮುಂತಾದವರು ಭಾಗವಹಿಸಿದ್ದರು. ಮಹಿಳಾ ದಿನಾಚರಣೆಯ ಅಂಗವಾಗಿ ಉಪಸ್ಥಿತರಿದ್ದ ಎಲ್ಲ ಮಹಿಳಾ ಸದಸ್ಯರಿಗೂ ಪುಷ್ಪ ನೀಡಿ, ಗೌರವಿಸಲಾಯಿತು ಈ ಕಾರ್ಯಕ್ರಮದಲ್ಲಿ 70 ಕ್ಕೂ ಹೆಚ್ಚು ಹಿರಿಯ ನಾಗರಿಕರು ಭಾಗವಹಿಸಿದ್ದರು.