ಛಾಯಾಗ್ರಹಕರ ಬೇಡಿಕೆಗೆ ಸ್ಪಂದಿಸಿ ನಿವೇಶನ ಕೊಡುವುದಾಗಿ ಪ್ರಾಧಿಕಾರದ ಭರವಸೆ

ಛಾಯಾಗ್ರಹಕರ ಬೇಡಿಕೆಗೆ ಸ್ಪಂದಿಸಿ ನಿವೇಶನ ಕೊಡುವುದಾಗಿ ಪ್ರಾಧಿಕಾರದ ಭರವಸೆ The authority promises to provide a site in response to the demand of photographers.

ಛಾಯಾಗ್ರಹಕರ ಬೇಡಿಕೆಗೆ ಸ್ಪಂದಿಸಿ ನಿವೇಶನ ಕೊಡುವುದಾಗಿ ಪ್ರಾಧಿಕಾರದ ಭರವಸೆ 

ಹಾವೇರಿ 14 :ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಛಾಯಾಗ್ರಹಕರ ಸಂಘದ ನಿವೇಶನ ಬೇಡಿಕೆ ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ವಾರದೊಳಗೆ ನಿಗದಿತ ಶುಲ್ಕ ಪಾವತಿಸಿದರೆ ಪ್ರಾಧಿಕಾರದಿಂದ ಆದೇಶ ಪ್ರತಿ ಕೊಡುವುದಾಗಿ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ ಭರವಸೆ ನೀಡಿದರು. 

       ತಾಲೂಕ ವೃತ್ತಿನಿರತ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರರ ಸಂಘದ ವತಿಯಿಂದ ಶನಿವಾರ ನಗರದ ದಾನೇಶ್ವರಿನಗರದಲ್ಲಿರುವ ಬಂಟರ ಭವನದಲ್ಲಿ ಹಮ್ಮಿಕೊಂಡಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, ಸಂಘದ 23ನೇ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 

       ಯಾರು ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಪೋಟೋಗಳನ್ನು ತೆಗೆಯಿಸಿಕೊಳ್ಳುವಾಗ ಛಾಯಾಗ್ರಹಕರ ಮಾತುಗಳನ್ನು ಕೇಳಬೇಕಾಗುತ್ತದೆ. ಯಾವುದೋ ಒಂದು ಚಿತ್ರದ ಸನ್ನಿವೇಶವನ್ನು ಬಹಳ ವರ್ಷಗಳ ಕಾಲ ನೆನಪು ಇಟ್ಟುಕೊಳ್ಳುವಂತಹ ಕೆಲಸವನ್ನು ವೃತ್ತಿನಿರತ ಛಾಯಾಗ್ರಾಹಕರು ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ಊಟೋಪಚಾರ ಮಾಡಲು ಅವಕಾಶ ಸಿಗದೆ, ಜೀವದ ಹಂಗು ತೊರೆದು ಪೋಟೋಗ್ರಾಫರ್‌ಗಳು ಕೆಲಸ ಮಾಡುತ್ತಾರೆ. ಇದೊಂದು ಜವಾಬ್ದಾರಿಯುತ ಕೆಲಸವಾಗಿದೆ. ಕೆಲಸದಲ್ಲಿ ಶಿಸ್ತು ಇದೆ. ನಿನ್ನ ಬಾಳಿನ ಶಿಲ್ಪಿ ನೀನೇ ಎಂಬುದನ್ನು ಅರಿತುಕೊಂಡು ಕೆಲಸ ಮಾಡುತ್ತಾರೆ. ಮೊಬೈಲ್ ಬಂದ ಬಳಿಕ ಫೋಟೋಗ್ರಫಿ ವೃತ್ತಿ ಕಡಿಮೆಯಾಗಿದೆ. ತಂತ್ರಜ್ಞಾನ ಬಂದ ಬಳಿಕ ಜಗತ್ತು ಬದಲಾವಣೆಯಾಗುತ್ತಿದೆ. ಪೋಟೋಗ್ರಾಫರ್‌ಗಳು ಸಹಿತ ನವನವೀನ ತಂತ್ರಜ್ಞಾನಕ್ಕೆ ಹೊಂದಿಕೊಂಡು ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು. 

ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ರಿತ್ತಿ ಮಾತನಾಡಿ, ವ್ಯಕ್ತಿಯ ಭಾವನೆ, ಕಾಲವನ್ನು, ಇತಿಹಾಸವನ್ನು ಅತ್ಯಂತ ಯಶಸ್ವಿಯಾಗಿ ದಾಖಲೀಕರಣ ಮಾಡುವುದು ಛಾಯಾಗ್ರಾಹಕ ವೃತ್ತಿಯಿಂದ ಮಾತ್ರ ಸಾಧ್ಯ. ಒಳಗಣ್ಣಿನಲ್ಲಿರುವ ಸೂಕ್ಷ್ಮತೆ ಅರಿತುಕೊಂಡು ಚಿತ್ರ ಸೆರೆ ಹಿಡಿಯುವ ಕಲೆ ಬೆಳೆಸಿಕೊಂಡರೆ ವೃತ್ತಿಯಲ್ಲಿ ಸಾಧನೆ ಮಾಡಬಹುದು. ಬರುವ ದಿನಗಳಲ್ಲಿ ವೃತ್ತಿನಿರತ ಛಾಯಾಗ್ರಾಹಕರಿಗೆ ಬಹಳಷ್ಟು ಸವಾಲುಗಳು ಬರುತ್ತವೆ. ಯಾವುದೇ ಸಂದರ್ಭದಲ್ಲಿಯೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಬದ್ಧತೆಯಿಂದ ವೃತ್ತಿಯಲ್ಲಿ ತೊಡಗಿಕೊಳ್ಳೋಣ. ಹೆಚ್ಚಿನ ನೈಪುಣ್ಯತೆ ಹಾಗೂ ಕ್ರಿಯಾತ್ಮಕ ಮಾದರಿಯಲ್ಲಿ ಚಿತ್ರ ಸೆರೆ ಹಿಡಿದುಕೊಳ್ಳೋಣ ಎಂದರು. 

ಕಾರ್ಯಕ್ರಮದಲ್ಲಿ ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ತಾಲೂಕ ಗೌರವಾಧ್ಯಕ್ಷ ಸಿದ್ಧಲಿಂಗಪ್ಪ ಹಳ್ಳಿಕೇರಿ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರಿ, ಉಪಾಧ್ಯಕ್ಷ ಬಸವರಾಜ ಚಾವಡಿ, ರಟ್ಟಿಹಳ್ಳಿ ತಾಲೂಕಾಧ್ಯಕ್ಷ ಬಿ.ಎಂ ಪವಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಮಾಲತೇಶ ಇಚ್ಚಂಗಿ ಸ್ವಾಗತಿಸಿದರು. ನಾಗೇಶ ಬಾರ್ಕಿ ನಿರೂಪಿಸಿದರು. ಶಿವಬಸವ ಬಣಕಾರ ಪ್ರಾರ್ಥಿಸಿದರು. ಅಶೋಕ ಬ್ಯಾಡಗಿ ಕೊನೆಯಲ್ಲಿ ವಂದಿಸಿದರು.