ಶಿಕ್ಷಕರಿಗೆ ಪಠ್ಯ ಪುಸ್ತಕವೇ ಸರ್ವಸ್ವವಲ್ಲಾ: ಶಿವಶಂಕರ ಹಿರೇಮಠ

ಶಿಕ್ಷಕರಿಗೆ ಪಠ್ಯ ಪುಸ್ತಕವೇ ಸರ್ವಸ್ವವಲ್ಲಾ: ಶಿವಶಂಕರ ಹಿರೇಮಠ Textbooks are not everything for teachers: Shivshankar Hiremath

ಶಿಕ್ಷಕರಿಗೆ ಪಠ್ಯ ಪುಸ್ತಕವೇ ಸರ್ವಸ್ವವಲ್ಲಾ: ಶಿವಶಂಕರ ಹಿರೇಮಠ 

ಧಾರವಾಡ 15: ಶಿಕ್ಷಕರಿಗೆ ಪಠ್ಯ ಪುಸ್ತಕವೇ ಸರ್ವಸ್ವವಲ್ಲಾ. ಪಠ್ಯಪುಸ್ತಕ ಮೀರಿದ ಜ್ಞಾನವನ್ನು ವಿಷಯ ಬೋಧನೆ ಮೂಲಕ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಶಿಕ್ಷಣ ತಜ್ಞ ಅಭಿಪ್ರಾಯಪಟ್ಟರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು, ನಿಂಗಣ್ಣ ಕುಂಟಿ(ಇಟಗಿ) ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ನಿವೃತ್ತರಾಗಿಯೂ ಕ್ರೀಯಾಶೀಲರಾಗಿರುವ ಶಿಕ್ಷಕರಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು. ಒಂದು ಅರ್ಥದಲ್ಲಿ ಪ್ರಾಥಮಿಕ ಶಿಕ್ಷಣವೇ ಶಿಕ್ಷಣದ ಬುನಾದಿ. ಶಿಕ್ಷಣದ ಬುನಾದಿ ಗಟ್ಟಿಯಾಗಬೇಕಾದರೆ ವಿದ್ಯಾರ್ಥಿಗಳು ಸಮಾಜದಲ್ಲಿ ಬದುಕುವ ಸಾಮರ್ಥ್ಯ, ಸ್ವಾವಲಂಬನೆ, ಉತ್ಪಾದನಾ ಸಾಮರ್ಥ್ಯ, ನವವಿಚಾರ ಹಾಗೂ ನಾಯಕತ್ವದ ಗುಣಗಳನ್ನು ಬೆಳಸುವುದು ಅಗತ್ಯವಾಗಿದೆ. 

ಭಾರತ ಸರ್ಕಾರ ಈ ದೆಸೆಯಲ್ಲಿ 1953ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಖ್ಯಾತ ಶಿಕ್ಷಣ ತಜ್ಞ ಡಾ. ಲಕ್ಷ್ಮಣಸ್ವಾಮಿ ಮುದಲಿಯಾರ ಆಯೋಗ ರಚಿಸಿತ್ತು. ಮುದಲಿಯಾರ ಸಮಿತಿಯ ಶಿಫಾರಸ್ಸುಗಳ ಜೊತೆಗೆ ಗಾಂಧೀಜಿಯವರ ಮೂಲ ಶಿಕ್ಷಣವೂ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಬೆಳೆಸುವದಾಗಿತ್ತು. ಈ ಎಲ್ಲಾ ಯೋಜನೆಗಳು ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದವುಗಳೆಂದು ಹೇಳಬಹುದು. ನಿಂಗಣ್ಣ ಕುಂಟಿ ಓರ್ವ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಈ ಎಲ್ಲಾ ಮೇಲಿನ ಅಂಶಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದು ಹೇಳಿದರು. ಉಪಸ್ಥಿತ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ(ಇಟಗಿ) ಮಾತನಾಡಿ, ನನ್ನ ಸೇವಾ ಅವಧಿಯಲ್ಲಿ ನಾನು ಮಕ್ಕಳ ಸಾಹಿತಿಯಾಗಿ ರೂಪಗೊಳ್ಳಲು ಡಾ. ದ. ರಾ. ಬೇಂದ್ರೆ ಅವರೆ ಪ್ರೇರಕ ಶಕ್ತಿ. ಕ್ರೀಯಾಶೀಲ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಬೇಕೆಂಬುದು ನನ್ನ ಬಹು ದಿನದ ಆಸೆಯಾಗಿತ್ತು ಎಂದು ಹೇಳಿ ಹರ್ಷ ವ್ಯಕ್ತ ಪಡಿಸಿದರು. ವಿಶ್ರಾಂತ ಪ್ರಾಧ್ಯಾಪಕರಾದ ಬಿ. ಎಸ್‌. ಶಿರೋಳ ಶಿಕ್ಷಕ ವೃತ್ತಿಯ ಗೌರವ ಕುರಿತು ಮಾತನಾಡಿದರು.  

ನಿವೃತ್ತ ಕ್ರೀಯಾಶೀಲ ಶಿಕ್ಷಕರಾದ ಇಂದುಮತಿ ನಾಗಪ್ಪ ಬ್ಯಾಲಹುಣಸಿ, ಮಹಾದೇವ ಉ. ಕರ್ಜಗಿ, ರಂಗಪ್ಪ ನೀ. ನಾಯ್ಕರ ಅವರನ್ನು ದತ್ತಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಕ.ವಿ.ವ ಸಂಘದ ಪರವಾಗಿ ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಅವರ ಜನ್ಮದಿನದ ಪ್ರಯುಕ್ತ ಸನ್ಮಾನಿಸಲಾಯಿತು. ಕ.ವಿ.ವ. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ತಂತ್ರಜ್ಞಾನದ ಫಲವಾಗಿ ಶಿಕ್ಷಕರಿಗೆ ಹಿಂದಿನಂತೆ ಲವಲವಿಕೆ ಮತ್ತು ಕ್ರೀಯಾಶೀಲತೆ ಇಂದು ಇಲ್ಲದಾಗಿದೆ. ಇದಕ್ಕೆ ಇಂದಿನ ಒತ್ತಡದ ಜೀವನವು ಮುಖ್ಯ ಕಾರಣವಿರಬಹುದು. ಇಂದಿನ ಶಿಕ್ಷಕರು ಹೊಸ ಚಿಂತನಶೀಲ ಸಮಾಜ ಸೃಷ್ಟಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು. ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು. ಡಾ. ಜಿನದತ್ತ ಅ. ಹಡಗಲಿ ವಂದಿಸಿದರು. ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಶಂಕರ ಹಲಗತ್ತಿ, ಡಾ. ಮಹೇಶ ಹೊರಕೇರಿ ಡಾ. ನಿಂಗೂ ಸೊಲಗಿ, ಎಂ. ಎಂ. ಚಿಕ್ಕಮಠ, ಡಾ. ಲಿಂಗರಾಜ ಅಂಗಡಿ, ವಿ. ಎನ್‌. ಕೀರ್ತಿವತಿ, ಪುಷ್ಪಾ ಸಾಂಬ್ರಾಣಿ, ಗೋಣಿಬಸವ ಕುಂಟಿ ಸೇರಿದಂತೆ ಮುಂತಾದವರಿದ್ದರು.