ಶಿಕ್ಷಕರು ನಿರಂತರವಾಗಿ ಜ್ಞಾನ, ಕೌಶಲ ನವೀಕರಿಸಿಕೊಳ್ಳಬೇಕು: ಡಾ. ಕನಕಪ್ಪ ಪೂಜಾರ

ಶಿಕ್ಷಕರು ನಿರಂತರವಾಗಿ ಜ್ಞಾನ, ಕೌಶಲ ನವೀಕರಿಸಿಕೊಳ್ಳಬೇಕು: ಡಾ. ಕನಕಪ್ಪ ಪೂಜಾರ  Teachers must continuously update their knowledge and skills: Dr. Kanakappa Pujara

ಲೋಕದರ್ಶನ ವರದಿ 

ಹಾರೂಗೇರಿ, ಸೆ.27: ವಾಹನಗಳಿಗೆ ಕಾಲಕಾಲಕ್ಕೆ ಸರ್ವಿಸಿಂಗ್ ಅಗತ್ಯವಿರುವಂತೆ ಶಿಕ್ಷಕರು ಕೂಡ ತಮ್ಮ ಜ್ಞಾನ, ಕೌಶಲ ಹಾಗೂ ಬೋಧನಾ ಸಾಮರ್ಥ್ಯವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕನಕಪ್ಪ ಪೂಜಾರ ಹೇಳಿದರು.  

ಸ್ಥಳೀಯ ಶಿಕ್ಷಣ ಪ್ರಸಾರಕ ಮಂಡಳಿಯ ರಾಯಬಾಗದ ಎಸ್ಪಿಎಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ, ಸತ್ಕಾರ ಹಾಗೂ ದೀಪದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.  

ಬದಲಾಗುತ್ತಿರುವ ಶಿಕ್ಷಣ ವ್ಯವಸ್ಥೆಗೆ ಅನುಗುಣವಾಗಿ ಶಿಕ್ಷಕರು ತಮ್ಮ ಬೋಧನಾ ವಿಧಾನ, ಕೌಶಲ ಹಾಗೂ ತಂತ್ರಜ್ಞಾನ ಬಳಕೆಯನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು. ಶಿಕ್ಷಕರು ನಿರಂತರ ಕಲಿಕಾಕಾರರಾಗುವ ಮೂಲಕ ಹೊಸ ಬೋಧನಾ ಕೌಶಲಗಳನ್ನು ಅಳವಡಿಸಿಕೊಂಡಾಗ ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಹಾಗೂ ಆಸಕ್ತಿದಾಯಕ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದರು.  

ಪ್ರಾಚಾರ್ಯ ಡಾ. ಎಲ್‌.ಎಸ್‌. ಧರ್ಮಟ್ಟಿ ಮಾತನಾಡಿ, ಆರ್ಸಿಯು ವಿವಿ ವ್ಯಾಪ್ತಿಯ ಎಸ್ಪಿಎಂ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರತಿವರ್ಷ ನಾಲ್ಕು ರ್ಯಾಂಕ್ಗಳು ಬರುತ್ತಿದ್ದು, ಇದು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ಭಾವಿ ಶಿಕ್ಷಕರು ಮುಂದಿನ ದಿನಗಳಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿ ಹಾಗೂ ಕರ್ತವ್ಯಗಳ ಕುರಿತು ತಿಳಿಸಿದರು.  

ಸಮಾರಂಭದಲ್ಲಿ ವಿವಿ ರ್ಯಾಂಕ್ ಪಡೆದ ಯಶ್ಮಿನ್ ಮುಲ್ಲಾ, ಮಣಿಕಂಠ ಪತ್ತಾರ, ಮಹಾದೇವಿ ಕುಲಿಗೋಡ ಹಾಗೂ ಸಹನಾ ಬನಹಟ್ಟಿ ಸೇರಿದಂತೆ ವಿವಿಧ ಸರ್ಕಾರಿ ಇಲಾಖೆಗಳ ನೇಮಕಾತಿಗೆ ಆಯ್ಕೆಯಾದ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು.  

ಪ್ರಶಿಕ್ಷಣಾರ್ಥಿಗಳಾದ ಕಿರಣ ಧುಮಾಳೆ ಅವರಿಗೆ ಆದರ್ಶ ವಿದ್ಯಾರ್ಥಿ ಹಾಗೂ ಶಿಲ್ಪಾ ನಾಗನೂರ ಅವರಿಗೆ ಆದರ್ಶ ವಿದ್ಯಾರ್ಥಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಪ್ರಾಚಾರ್ಯರಾದ ಎಂ.ವಿ. ಕೋಳೇಕರ್, ಎ.ಬಿ. ಹಳಿಂಗಳಿ, ಎಸ್‌.ಎಂ. ಯಲಿಗಾರ, ಡಾ. ಮಂಜುಣ್ಣ, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಎನ್‌.ಬಿ. ನಾಗನೂರ ಸೇರಿದಂತೆ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.  ಪ್ರಾಚಾರ್ಯ ಎಂ.ಬಿ. ಪಡೇದಾರ ಸ್ವಾಗತಿಸಿದರು. ರೇಣುಕಾ ಎತ್ತಿನಮನಿ ಹಾಗೂ ಸಹನಾ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಯು.ಎಂ. ಪಕಾಲೆ ವಂದಿಸಿದರು.