ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ Talent awards and cultural program inaugurated for children on the occasion of Swami Vivekananda Ja

    ಬೀಳಗಿ 12: ಶಾಲೆಯಲ್ಲಿ ಮಕ್ಕಳಿಗೆ ನೀಡುವ ಸರ್ಟಿಪೀಕೆಟ್ ಅವರನ್ನು ಬದಲಿಸುವುದಕ್ಕಿಂತ ಹೆಚ್ಚು, ತಾಯಿ-ತಂದೆ ನೀಡುವಂತ ಸಂಸ್ಕಾರ ಅವರನ್ನು ಉನ್ನತ ಸ್ಥಾನಕ್ಕೆ ಏರಿಸಲು ಸಹಕಾರವಾಗುತ್ತದೆ. ಶಾಲೆಯ ಶಿಕ್ಷಣದ ಜೊತೆಗೆ ಹೊರಗಿನ ಜ್ಞಾನವೂ ಅವಶ್ಯವಾಗಿದೆ ಎಂದು ಉಡುಪಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಜನಾಬ್ ಅಕ್ಬರ್ ಅಲಿ ಹೇಳಿದರು. 

  ಪಟ್ಟಣದ ವಿವೇಕಾನಂದ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ, ಸ್ವಾಮಿ ವಿವೇಕಾನಂದ ಸೌಹಾರ್ದ ಪತ್ತಿನ ಸಹಕಾರಿ ಸಂಘ ಹಾಗೂ ಅನ್ನದಾತ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಆಚರಣೆ ಪ್ರಯುಕ್ತ ವಿವೇಕ ಉತ್ಸವ-10, ವಿವೇಕ ರತ್ನ ಪ್ರಶಸ್ತಿ ಪ್ರಧಾನ ಮತ್ತು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

  ಶಿಕ್ಷಣ ಕಲಿಕೆಯಲ್ಲಿ ನೀವು ಪೇಲಾಗಬಹುದು ಆದರೆ ಜೀವನದಲ್ಲಿ ನಿಮಗೆ ಪಾಸಾಗುವ ಹೆಚ್ಚು ಅವಕಾಶಗಳಿವೆ. ಪಾಸಾದರೆ ನಾವು ಯಾರು ಎಂದು ಸಮಾಜಕ್ಕೆ ಗೊತ್ತಾಗುತ್ತದೆ, ಪೇಲಾದರೆ ನಿಮ್ಮವರು ಯಾರು ಎಂದು ನಿಮಗೆ ತಿಳಿಯುತ್ತದೆ. ಜೀವನದಲ್ಲಿ ಶಿಕ್ಷಣಕ್ಕೆ  ಕೊನೆಯಿಲ್ಲ. ಶಿಕ್ಷಣವನ್ನು ತಾಯಿಯ ಮಡಿಲಿನಿಂದ ಗೋರಿಯ ಮಡಿಲಿನ ತನಕ ಪಡೆಯಬಹುದು. ಶಿಕ್ಷಣಕ್ಕೆ ಅಂತ್ಯವಿಲ್ಲ, ಪ್ರಾಯವಿಲ್ಲ ಅದನ್ನು ವೃದ್ಧರಾಗಿಯು ಪಡೆಯಬಹುದು. ನಮ್ಮಲ್ಲಿ ಆತ್ಮಶಕ್ತಿ ಇರದಿದ್ದರೆ ಶಿಕ್ಷಣದಿಂದ ನಮಗೆ ಯಾವುದೇ ಸಾಧನೆ ಮಾಡಲಾಗುವುದಿಲ್ಲ. ಎಂದರು. 

   ಬ.ಬಾಗೇವಾಡಿ ತಹಶೀಲ್ದಾರ ವೈ.ಎಸ್‌.ಸೋಮನಕಟ್ಟಿ ವಿವೇಕ ರತ್ನ ಪ್ರಶಸ್ತಿ ಸ್ವೀಕರಿಸಿ, ವಿದ್ಯಾರ್ಥಿಗಳು ಬದುಕಿನಲ್ಲಿ ಯಶಸ್ವಿ ಕಾಣಬೇಕಾದರೆ ಆತನಲ್ಲಿ ಗುರಿ ಇರಬೇಕು. ಗುರಿ ಮುಟ್ಟಬೇಕಾದರೆ ಅವನ ಹಿಂದೆ ಗುರು ಇರಬೇಕು. ಗುರುವನ್ನು ಗೌರವಿಸಿದಾಗ ವಿದ್ಯೆ ನಮಗೆ ಒಲಿಯುತ್ತದೆ. ಪ್ರತಿಯೊಬ್ಬ ಸಾಧಕನ ಹಿಂದೆ ಗುರು ಇರುತ್ತಾನೆ. ನಮ್ಮ ಅಭಿರುಚಿಗೆ ತಕ್ಕಂತೆ ಗುರಿ ತಲುಪಬೇಕು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಯತ್ನ ದೊಡ್ಡದು. ಮರಳಿ ಮರಳಿ ಪ್ರಯತ್ನ ಮಾಡಿದಾಗ ಯಶಸ್ಸು ಸಿಗುತ್ತದೆ ಎಂದರು.