ದುಶ್ಚಟಗಳಿಂದ ದೂರವಿದ್ದು, ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು: ನ್ಯಾ.ಮಹಾಂತೇಶ ದರಗದ

ದುಶ್ಚಟಗಳಿಂದ ದೂರವಿದ್ದು, ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕು: ನ್ಯಾ.ಮಹಾಂತೇಶ ದರಗದ Stay away from bad habits and adopt a good lifestyle: Justice Mahantesh Dargada


        ಕೊಪ್ಪಳ 28: ತಂಬಾಕು ಸೇವನೆಯಂತಹ ದುಶ್ಚಟಗಳಿಂದ ದೂರವಿದ್ದು, ಉತ್ತಮ ಹಾಗೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ, ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ಕೊಟ್ಪಾ-2003 ಕಾಯ್ದೆ ಅನುಷ್ಠಾನ ಕುರಿತು “ಜಿಲ್ಲಾ ಮತ್ತು ತಾಲೂಕ ಮಟ್ಟದ ಪ್ರಾಧಿಕೃತ ತನಿಖಾಧಿಕಾರಿಗಳಿಗೆ” ಹಮ್ಮಿಕೊಂಡಿದ್ದ ಒಂದು ದಿನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ದಕ್ಷಿಣ ಕರ್ನಾಟಕದಲ್ಲಿ ಸಿಗರೇಟ್ ಸೇವನೆ ಮಾಡುವವರ ಸಂಖ್ಯೆ ತುಂಬಾ ಹೆಚ್ಚಾಗಿದ್ದು, ಅದೇ ರೀತಿಯಾಗಿ ಉತ್ತರ ಕರ್ನಾಟಕದಲ್ಲಿ ಗುಟ್ಕಾ ಸೇವನೆ ಮಾಡುವವರ ಸಂಖ್ಯೆ ಹೆಚಾಗಿರುತ್ತದೆ. ಈ ತಂಬಾಕು ಸೇವನೆಯಿಂದ ಆರೋಗ್ಯದ ಮೇಲೆ ಅನೇಕ ಕೆಟ್ಟ ಪರಿಣಾಮಗಳು ಉಂಟಾಗುತ್ತಿವೆ. ಕಾರಣ ಇಂದಿನ ಯುವಕರು ಸೇರಿದಂತೆ ಎಲ್ಲರೂ ತಂಬಾಕು ಸೇವನೆಯ ದುಶ್ಚಟದಿಂದ ದೂರವಿರಬೇಕು ಹಾಗೂ ಪೌಷ್ಠಿಕ ಆಹಾರ ಸೇವನೆ, ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಬೇಕೆಂದು ತಿಳಿಸಿದರು. 

ಅಪರ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೋಡಲ್ ಅಧಿಕಾರಿಗಳಾದ ಸಿದ್ರಾಮೇಶ್ವರ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೊಟ್ಪಾ-2003ರ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆರೋಗ್ಯ ಇಲಾಖೆಯಿಂದ ಮಾತ್ರ ಸಾಧ್ಯವಾಗುವುದಿಲ್ಲ. ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಕಛೇರಿ, ಸಾರ್ವಜನಿಕ ಸ್ಥಳಗಳಲ್ಲಿ ಕಾಯ್ದೆಯನ್ನು ಅನುಷ್ಠಾನಗೊಳಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು ಕೊಟ್ಪಾ-2003ರ ಕಾಯ್ದೆಯ ಅನುಷ್ಠಾನಕ್ಕೆ ನನ್ನ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. 

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಲಿಂಗರಾಜು ಟಿ. ಅವರು ಮಾತನಾಡಿ, ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ತಿಳಿಸುತ್ತಾ, ಸಿಗರೇಟ್, ಬೀಡಿ, ಸಿಗಾರ್, ಹುಕ್ಕಾ ತಂಬಾಕು ವಿಧಗಳಾಗಿವೆ. ತಂಬಾಕು ಸೇವನೆಯಿಂದಾಗುವ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಕಾಯಿಲೆ, ಲಕ್ವಾ ಇತರೆ ಕಾಯಿಲೆಗಳು ಬರಬಹುದು. ಪ್ರತಿ ಸಿಗರೇಟ್‌/ಬೀಡಿ ಸೇವನೆಯಿಂದ 7 ನಿಮಿಷ ಆಯಸ್ಸು ಕಡಿಮೆ ಮಾಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತದೆ. ತಂಬಾಕಿನಲ್ಲಿ ನಿಕೋಟಿನ್ ಎಂಬ ವಿಷಕಾರಕ ಪದಾರ್ಥ ಇರುತ್ತದೆ.

        ಇದರಲ್ಲಿ 3000 ದಿಂದ 7000 ಅಪಾಯಕಾರಿ ರಾಸಾಯನಿಕ ವಿಷಾನಿಲಗಳು ಇರುತ್ತವೆ. ಮಹಿಳೆಯರಲ್ಲೂ ತಂಬಾಕು ಸೇವನೆಯಿಂದ ಗರ್ಭಪಾತ, ಗರ್ಭಕಂಠದ ಕ್ಯಾನ್ಸರ್, ಕಡಿಮೆ ತೂಕವಿರುವ ಮಗುವಿನ ಜನನ ಹಾಗೂ ಶಿಶುಮರಣ ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ಪ್ರತಿ ವರ್ಷ ವಿಶ್ವದಾದ್ಯಂತ 60 ಲಕ್ಷಕ್ಕಿಂತ ಹೆಚ್ಚು ಜನರು ತಂಬಾಕು ಸೇವನೆಯಿಂದ ಉಂಟಾಗುವ ಕಾಯಿಲೆಗಳಿಂದ ಸಾವನ್ನಪ್ಪುತ್ತಿದ್ದಾರೆ. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ತಂಬಾಕು ಉತ್ಪನ್ನಗಳಿಂದ ದೂರವಿರಬೇಕು ಹಾಗೂ ಇಂದಿನ ಯುವ ಪೀಳಿಗೆ ತಂಬಾಕು ಸೇವನೆಯಿಂದ ದೂರವಿರುವಂತೆ, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಪ್ರೆರೇಪಿಸಬೇಕೆಂದು ತಿಳಿಸಿದರು. 

ಬೆಂಗಳೂರಿನ ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕರಾದ ಮಹಾಂತೇಶ್ ಬಿ. ಉಳ್ಳಾಗಡ್ಡಿ  ಇವರು ಮಾತನಾಡಿ, ಭಾರತ ಸರ್ಕಾರವು ರಾಷ್ಟ್ರೀಯ ತಂಬಾಕು ನಿಯಂತ್ರಣ ಬಗ್ಗೆ 2003ರಲ್ಲಿ ಕೋಟ್ಪಾ ಕಾಯ್ದೆಯನ್ನು ಜಾರಿಗೊಳಿಸಿದೆ. ಸೆಕ್ಷನ್‌-4 ಪ್ರಕಾರ ಸಾರ್ವಜನಿಕ ಸ್ಥಗಳಲ್ಲಿ ಧೂಮಪಾನ ಮಾಡುವುದು ನಿಷೇಧ, ಸೆಕ್ಷನ್‌-5ರ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು, ಉತ್ತೇಜನ ಪ್ರಯೋಜಕತೆ ನಿಷೇಧ, ಸೆಕ್ಷನ್‌-6(ಎ) ತಂಬಾಕು ಉತ್ಪನ್ನಗಳು ಅಪ್ರಾಪ್ತ ವಯಸ್ಕರಿಗೆ (21 ವರ್ಷದೊಳಗಿನ ಮಕ್ಕಳು) ಸಿಗದಂತೆ ನಿಯಂತ್ರಣ ಮಾಡುವುದು, ಸೆಕ್ಷನ್‌-6ಬಿ ಪ್ರಕಾರ ಶಿಕ್ಷಣ ಸಂಸ್ಥೆಗಳ 100 ಅಂತರ ಗಜಗಳ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಸೆಕ್ಷನ್‌-7 ರ ಪ್ರಕಾರ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ನಿರ್ದಿಷ್ಠ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರುವುದನ್ನು ನಿಷೇಧಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಕೊಟ್ಟಾ ಕಾಯ್ದೆ-2003 ಕಲಂ 20ರ ಅಡಿಯಲ್ಲಿ ದಂಡ ಮತ್ತು ಜೈಲು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು. 

ರಾಜ್ಯ ತಂಬಾಕು ನಿಯಂತ್ರಣ ಕೋಶದ ಸಲಹೆಗಾರರಾದ ತೀರ್ಥೇಶ ಎನ್‌.  ಅವರು ಮಾತನಾಡಿ, ತಂಬಾಕು ಉತ್ಪನ್ನಗಳ ವ್ಯಾಪಾರ ಪರವಾನಿಗೆ ನೀತಿ ಕಾಯ್ದೆ 2022ರ ಬಗ್ಗೆ ವಿವರಿಸುತ್ತಾ, ತಂಬಾಕು ಉತ್ಪನ್ನಗಳ ವ್ಯಾಪಾರ ಪರವಾನಿಗೆ ಪಡೆಯಲು ಬೇಕಾಗುವ ಅರ್ಹತೆಯ ಬಗ್ಗೆ ಹಾಗೂ ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ ವ್ಯಾಪಾರ ಪರವಾನಿಗೆಯನ್ನು ಎಲ್ಲಾ ಕಿರಾಣಿ ಅಂಗಡಿಗಳು, 30 ಆಸನಗಳಿರುವ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಮಾಲೀಕರು/ಉದ್ಯಮಿಗಳು ಕಡ್ಡಾಯವಾಗಿ ಪಡೆದುಕೊಂಡು ಕೊಟ್ಪಾ-2003ರ ಹಾಗೂ ರಾಜ್ಯ ತಿದ್ದುಪಡಿ ಕಾಯ್ದೆ-2024ರ ಪ್ರಕಾರ ಕಾನೂನು ಉಲ್ಲಂಘನೆ ಮಾಡದಂತೆ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಹುದೆಂದು ತಿಳಿಸಿದರು. 

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಸಂಗಪ್ಪ ಮಮಟಗೇರಿ ಅವರು ಮಾತನಾಡಿ, ಜಿಲ್ಲಾ ತಂಬಾಕು ವ್ಯಸನ ಮುಕ್ತ ಕೇಂದ್ರದಲ್ಲಿ ದೊರೆಯುವ ಉಚಿತ ಸೇವಾ ಸೌಲಭ್ಯಗಳ ಕುರಿತು ತಿಳಿಸಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅನುಷ್ಠಾನಾಧಿಕಾರಿ ಡಾ.ರವೀಂದ್ರನಾಥ್ ಎಂ.ಹೆಚ್‌.,  ಜಿಲ್ಲಾ ಯೋಜನಾ ಅಭಿವೃದ್ದಿ ಅಧಿಕಾರಿ ಡಾ.ಕುಮಾರಸ್ವಾಮಿ ಗೋನಾಳ,  ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಕಾಶ ಹಾಗೂ  ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ, ಸೈಕಾಲಾಜಿಸ್ಟ್‌ ಶಾಂತಮ್ಮ ಕಟ್ಟಿಮನಿ,  ಸಮಾಜ ಕಾರ್ಯಕರ್ತರಾದ ಸರಸ್ವತಿ ಹಾಗೂ ಜಿಲ್ಲಾ ಹಾಗೂ ತಾಲೂಕ ಮಟ್ಟದ ಪ್ರಾಧಿಕೃತ ತನಿಖಾಧಿಕಾರಿಗಳು ಭಾಗವಹಿಸಿದ್ದರು.