ಗದಗ 15: ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಕೊರೋನಾ ಸೈನಿಕರಾದ ವೈದ್ಯರು, ನರ್ಸ, ಆಶಾ ಕಾರ್ಯಕರ್ತೆಯರಿಗೆ ಸ್ಪೂರ್ತಿ ತುಂಬುವ ಕಾರ್ಯ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ನುಡಿದರು.
ಗದಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿನ 21 ಜಿಲ್ಲೆಗಳಲ್ಲಿನ ಸತತವಾಗಿ ಪ್ರವಾಸ ಮಾಡಿ ಕೊರೋನಾ ನಿಯಂತ್ರಣದ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಯುತ್ತಿದೆ. ಅಲ್ಲಿನ ಜಿಲ್ಲಾಡಳಿತ, ಆರೋಗ್ಯ ಇಲಾಖೆ , ವೈದ್ಯರುಗಳು, ಸಂಸದರುಗಳಿಂದ ಮಾಹಿತಿ ಸಂಗ್ರಹಣೆ ಮಾಡಿ ಕೋವಿಡ್-19 ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಐಸೋಲೆಟೆಡ್ ವಾರ್ಡ ವ್ಯವಸ್ಥೆ ಮಾಡಲಾಗಿದೆ. ಗದಗ ಜಿಲ್ಲೆಯಲ್ಲಿ (ದಿ.14 ರವರೆಗೆ) ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 451 ಇದ್ದು 28 ದಿನಗಳ ನಿಗಾ ಅವಧಿ ಪೂರೈಸಿದವರು 132 ಜನ. ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರುವವರ ಸಂಖ್ಯೆ 303. 202 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.
ಜಿಲ್ಲೆಯಲ್ಲಿ 82 ವರ್ಷದ ವೃದ್ಧೆ ಪಿ-166 ಮರಣಹೊಂದಿದ್ದು ಇವರ ಜತೆ ಸಂಪರ್ಕದಲ್ಲಿದ್ದಂತಹ 82 ಜನರನ್ನು ಗುರುತಿಸಿ ನಿಗಾಕ್ಕೆ ಒಳಪಡಿಸಲಾಗಿ ಪರೀಕ್ಷೆಗೆ ಕಳುಹಿಸಲಾದ ಮಾದರಿಗಳು ನಕಾರಾತ್ಮಕಾಗಿವೆ ಎಂದು ಶ್ರೀರಾಮುಲು ನುಡಿದರು.
ರಾಜ್ಯದಲ್ಲಿ ( ದಿ.15ರ ಮಧ್ಯಾಹ್ನದವರೆಗೆ ) 277 ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ರಾಜ್ಯದಲ್ಲಿ ಕೊರೋನಾದಿಂದ ಒಟ್ಟಾರೆ ಮೃತಪಟ್ಟವರ ಸಂಖ್ಯೆ 11 ಕ್ಕೇರಿದೆ. 75 ಜನ ಗುಣಮುಖರಾಗುತ್ತಿದ್ದಾರೆ. ಗದಗ ಜಿಲ್ಲೆಯಲ್ಲಿ ಶೀಘ್ರವೇ ಕೊರೋನಾ ವೈರಸ್ ಟೆಸ್ಟಿಂಗ್ ಲ್ಯಾಬ್ ತೆರೆಯಲು ಕ್ರಮ ಜರುಗಿಸಲಾಗುತ್ತಿದೆ. ರಾಜ್ಯದಲ್ಲಿರುವ ಖಾಸಗಿ ಕ್ಲಿನಿಕ್ ಹಾಗೂ ನಸರ್ಿಂಗ್ ಹೋಮ್ಗಳ ವೈದ್ಯರು ಕ್ಲಿನಿಕ್ ಬಂದ್ ಮಾಡದೇ ವೈದ್ಯಕೀಯ ಸೇವೆ ಸಲ್ಲಿಸಿ ಸಾರ್ವಜನಿಕರಿಗೆ ಸಹಕರಿಸಬೇಕು ಎಂದು ರಾಜ್ಯದ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ತಿಳಿಸಿದರು.
ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಮಾತನಾಡಿ ಗದಗ ಜಿಲ್ಲೆಯಲ್ಲಿ ಕೋವಿಡ್ -19 ಚಿಕಿತ್ಸೆಯಲ್ಲಿದ 82 ವರ್ಷದ ವೃದ್ಧೆ ಸಾವನ್ನಪ್ಪಿದ್ದು ಪಿ-166 ಪ್ರಕರಣದ ಪ್ರಾಥಮಿಕ ಸಂಪರ್ಕದಲ್ಲಿದ್ದಂತಹ 82 ಜನರನ್ನು ಗುರುತಿಸಿ ಪ್ರತ್ಯೇಕ ನಿಗಾದಲ್ಲಿಡಲಾಗಿದ್ದು ಪರೀಕ್ಷೆಗೆ ಕಳುಹಿಸಿದ ಎಲ್ಲ ಮಾದರಿಗಳು ನಕಾರಾತ್ಮಕವಾಗಿವೆ. ಮುಂಜಾಗ್ರತಾ ಕ್ರಮವಾಗಿ ಕೋವಿಡ್ -19 ಪತ್ತೆಯಾದ 2 ಪ್ರದೇಶಗಳನ್ನು ಕಂಟೇನ್ಮೆಂಟ್ ಏರಿಯಾ ಎಂದು ಘೋಷಿಸಿ ಅಗತ್ಯದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಪಿಂಚಣಿ ಯೋಜನೆಗಳ ಗ್ರಾಮೀಣ ಪ್ರದೇಶದ ಅರ್ಹ ಫಲಾನುಭವಿಗಳಿಗೆ ಬ್ಯಾಂಕ್ ಮಿತ್ರರ ಮುಖಾಂತರ ಸೇವೆ ಒದಗಿಸಲು ಕ್ರಮ ಜರುಗಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಶೇ 82 ರಷ್ಟು ಕುಟುಂಬಗಳಿಗೆ ಪಡಿತರವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.