ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ನುಡಿ

 ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ನುಡಿ  Speech by Jagadguru Dr. Channasiddharama Panditaradhya Shivacharya Bhagavatpada of Srisailam Peetha

 ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರ ನುಡಿ  

ಧಾರವಾಡ, 08 : ಇಷ್ಟಲಿಂಗವು ಯಾವುದೇ ಒಂದು ಜಾತಿ ಅಥವಾ ಸಮುದಾಯದ ಕುರುಹಾಗಿರದೇ, ಅದು ಶಿವಜ್ಞಾನದ ಮತ್ತು ಶಿವಧರ್ಮಾಚರಣೆಯ ಸಂಕೇತವಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.   

ಅವರು ಶ್ರೀಶೈಲದ ಶ್ರೀಜಗದ್ಗುರು ಸೂರ್ಯಸಿಂಹಾಸನ ಮಹಾಪೀಠದಲ್ಲಿ ಜರುಗಿದ ಸಾಮೂಹಿಕ ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಶಿವಧರ್ಮದ ಆಚರಣೆಯಲ್ಲಿ ಶ್ರದ್ಧೆಯುಳ್ಳವನಾಗಿ, ದೀಕ್ಷಿತ ನಿಯಮಗಳನ್ನು ಪರಿಪಾಲನೆ ಮಾಡಲು ಸಿದ್ಧನಿದ್ದರೆ, ಗುರುವಿನಿಂದ ದೀಕ್ಷೆಯನ್ನು ಪಡೆದು ಇಷ್ಟಲಿಂಗಧಾರಣೆ ಮಾಡಿಕೊಳ್ಳಲು ಅವಕಾಶವಿದೆ ಎಂದರು. 

  ಮೋಕ್ಷದ ಮಹಾದ್ವಾರವಾದ ಇಷ್ಟಲಿಂಗದೀಕ್ಷೆಯನ್ನು ಪಡೆಯಲು ಜಾತಿ, ವರ್ಣ, ವರ್ಗ ಮತ್ತು ಲಿಂಗ ಮುಂತಾದ ಯಾವುದೇ ಭೇದವಿಲ್ಲದೆ ಸರ್ವರಿಗೂ ಮುಕ್ತವಾದ ಅವಕಾಶವನ್ನು ನೀಡಲಾಗಿದೆ. ಇಷ್ಟಲಿಂಗವನ್ನು ದೇಹದ ಮೇಲೆ ಧರಿಸಿ ಪ್ರತಿನಿತ್ಯ ತಪ್ಪದೆ ಪೂಜಿಸುವವರೆಲ್ಲರೂ ವೀರಶೈವ-ಲಿಂಗಾಯಿತರು. ಇಷ್ಟಲಿಂಗಧಾರಿಗಳಾದವರೆಲ್ಲರೂ ಒಂದೇ ತೆರನಾದ ಧಾರ್ಮಿಕ ಆಚರಣೆ ಹೊಂದಿದವರಾಗಿರುವುದರಿಂದ ಅವರಲ್ಲಿ ಯಾವುದೇ ರೀತಿಯ ಭೇದಭಾವವನ್ನು ಮಾಡಬಾರದೆಂದು ಅವರು ಹೇಳಿದರು.  

ಶಿವಸ್ವರೂಪವಾದ ಇಷ್ಟಲಿಂಗವನ್ನು ದೇಹದಮೇಲೆ ಸದಾ ಧರಿಸಿಕೊಂಡು ಪ್ರತಿನಿತ್ಯ ಸದಾಚಾರ, ಸದ್ವಿಚಾರ ಸಂಪನ್ನನಾಗಿ ನಿಷ್ಠೆಯಿಂದ ಇಷ್ಟಲಿಂಗಪೂಜಾ ಮಹಾವ್ರತವನ್ನು ಪರಿಪಾಲಿಸುವ ವ್ಯಕ್ತಿಯು ಸುಲಭವಾಗಿ ಮೋಕ್ಷವನ್ನು ಪಡಿಯುತ್ತಾನೆ. ಮಾಡುವ ಪೂಜೆ ಫಲಪ್ರದವಾಗಬೇಕಾದರೆ ಪರೋಪಕಾರ ಮುಂತಾದ ಲೋಕೊತ್ತರ ಗುಣಗಳನ್ನು ಹೊಂದಿರಬೇಕು. ಶ್ರೀಗುರುವು ಇಷ್ಟಲಿಂಗ ದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡುವ ಸಂದರ್ಭದಲ್ಲಿ ವೇಧಾದೀಕ್ಷೆ, ಮಂತ್ರದೀಕ್ಷೆ ಮತ್ತು ಕ್ರಿಯಾದೀಕ್ಷೆ ಎಂಬ ಮೂರು ಪ್ರಕಾರದ ದೀಕ್ಷೆಗಳನ್ನು ದಯಪಾಲಿಸಿ ಮಲತ್ರಯಗಳಿಂದ ಮುಕಕ್ತಗೊಳಿಸುತ್ತಾನೆ ಎಂದೂ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ನುಡಿದರು.  

ಜೈನಾಪುರದ ರೇಣುಕ ಶಿವಾಚಾರ್ಯ ಸ್ವಾಮಿಗಳು ದೀಕ್ಷಾರ್ಥಿಗಳಿಗೆ ಮತ್ತು ವಟುಗಳಿಗೆ ಲಿಂಗದೀಕ್ಷೆ ಮತ್ತು ಅಯ್ಯಾಚಾರಗಳನ್ನು ನೀಡಿದರು. 100 ಕ್ಕೂ ಅಧಿಕ ಜಂಗಮ ವಟುಗಳು ಅಯ್ಯಾಚಾರವನ್ನು ಮತ್ತು ಅನೇಕ ಭಕ್ತರು ಇಷ್ಟಲಿಂಗದೀಕ್ಷೆ ಪಡೆದುಕೊಂಡರು. ಮಲ್ಲಿಕಾರ್ಜುನ ಶಾಸ್ತ್ರಿಗಳು ಮತ್ತು ನಾಗರಾಜ ಶಾಸ್ತ್ರಿಗಳು ದೀಕ್ಷೆಯ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ಧರ್ಮೋಪದೇಶ ನೀಡಿದರು. ಶ್ರೀಪೀಠದ ಪ್ರಧಾನ ವ್ಯವಸ್ಥಾಪಕ ಎಂ. ಬಿ. ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು. ಶ್ರೀಶೈಲಂ ಜಂಗಮ ಸಮಾಜದ ಕಾರ್ಯದರ್ಶಿ ನಟರಾಜ ನಿರೂಪಿಸಿದರು. ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರ​‍್ರದೇಶದ ಹಲವಾರು ಭಕ್ತರು ಪಾಲ್ಗೊಂಡಿದ್ದರು.