ನಿವೇಶನ ಹಕ್ಕುಪತ್ರಕ್ಕಾಗಿ ಧರಣಿ: ಫಲಾನುಭವಿಗಳ ಆಗ್ರಹ

ನಿವೇಶನ ಹಕ್ಕುಪತ್ರಕ್ಕಾಗಿ ಧರಣಿ: ಫಲಾನುಭವಿಗಳ ಆಗ್ರಹ  Sit-in for site title deeds: Beneficiaries' demand

ಹೂವಿನಹಡಗಲಿ, ಆ. 27: ತಾಲೂಕಿನ ಬೂದನೂರು ಗ್ರಾಮದ ಜನತಾ ಪ್ಲಾಟ್ ನಿವಾಸಿಗಳು ನಿವೇಶನ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಮಂಗಳವಾರ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.   ಸರ್ಕಾರವು ಜನತಾ ಪ್ಲಾಟ್ಗಾಗಿ ಗ್ರಾಮದ 1.50 ಎಕರೆ ಜಮೀನು ಖರೀದಿಸಿ, ಸೂರಿಲ್ಲದ 44 ಬಡ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಿತ್ತು. ನಿವೇಶನ ಪಡೆದವರು ಮನೆ ನಿರ್ಮಿಸಿಕೊಂಡು ಐದು ದಶಕಗಳು ಕಳೆದರೂ ಇದುವರೆಗೆ ಹಕ್ಕುಪತ್ರ ನೀಡಿಲ್ಲ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.  

ಹಕ್ಕುಪತ್ರ ಇಲ್ಲದ ಕಾರಣ ಇ-ಸ್ವತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳೂ ದೊರೆಯುತ್ತಿಲ್ಲ. ಹಲವು ವರ್ಷಗಳಿಂದ ನಿರ್ಮಿಸಿರುವ ಮನೆಗಳು ಶಿಥಿಲಾವಸ್ಥೆಗೆ ತಲುಪಿದ್ದು, ಗೃಹಸಾಲ ಪಡೆಯಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಮುಖಂಡ ಚಂದ್ರಶೇಖರ ದೊಡ್ಡಮನಿ ಮಾತನಾಡಿ, ಸರ್ಕಾರ ಮನೆ ಬಾಗಿಲಿಗೆ ತೆರಳಿ ಹಕ್ಕುಪತ್ರ ನೀಡುವುದಾಗಿ ಹೇಳುತ್ತಿದೆ. ಆದರೆ ಬೂದನೂರು ಗ್ರಾಮದ ಬಡವರು ಐದು ದಶಕಗಳಿಂದ ಹಕ್ಕುಪತ್ರಕ್ಕಾಗಿ ಹೋರಾಟ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ಹಕ್ಕುಪತ್ರ ನೀಡುವವರೆಗೆ ಧರಣಿ ಮುಂದುವರಿಸುವುದಾಗಿ ತಿಳಿಸಿದರು.  ಪ್ರತಿಭಟನೆಯಲ್ಲಿ ಟಿ. ಬಸವರಾಜ, ಎಂ. ಫಕೀರ​‍್ಪ, ಕೆ. ಫಕೀರ​‍್ಪ, ಕೊಟ್ರೇಶ, ಸತ್ಯಪ್ಪ, ಪ್ರಹ್ಲಾದ, ರಾಮಜ್ಜ ಸೇರಿದಂತೆ ಹಲವರು ಭಾಗವಹಿಸಿದ್ದರು.