ಲೋಕದರ್ಶನ ವರದಿ
ಸಿಂದಗಿ 19: ಯುಕೆಪಿ ಸಲಹಾ ಸಮಿತಿ ಸಭೆ ಜು.20 ರಂದು ಬೆಂಗಳೂರಿನಲ್ಲಿ ಕರೆದಿರುವುದು ಖಂಡಿಸಿ ಮತ್ತು ಕಾಲುವೆಗಳಿಗೆ ನೀರು ಬಿಡಬೇಕು ಎಂದು ಆಗ್ರಹಿಸಿ ರೈತರು ಶುಕ್ರವಾರ ಪಟ್ಟಣದ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಪ್ರತಿಭಟನಾನಿರತ ರೈತರು ತಹಶೀಲ್ದಾರ ಬಸವರಾಜ ಕಡಕಬಾವಿ ಅವರ ಮೂಲಕ ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ, ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ನೇತೃತ್ವ ವಹಿಸಿದ ರೈತ ಮುಖಂಡ ಚಂದ್ರಶೇಖರ ದೇವರಡ್ಡಿ ಅವರು ಮಾತನಾಡಿ, ಪ್ರತಿ ಸಲ ಯುಕೆಪಿ ಸಲಹಾ ಸಮಿತಿ ಸಭೆ ಆಲಮಟ್ಟಿಯಲ್ಲಿ ಜರುಗುತ್ತಿತ್ತು. ಆದರೆ ಈ ಸಲ ಸಭೆಯನ್ನು ಜು.20 ರಂದು ಬೆಂಗಳೂರಿನಲ್ಲಿ ನಡೆಸುತ್ತಿರುವದು ಸೂಕ್ತವಲ್ಲ. ಸಕಾಲಕ್ಕೆ ಮಳೆ ಬಾರದೆ ಇರುವುದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಹೊಸ ನೀರು ಕೂಡಾ ಹರಿದು ಬರುತ್ತಿದೆ. ಅಲ್ಲದೇ ನಾರಾಯಣಪೂರ ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ಆದ್ದರಿಂದ ಸಿಂದಗಿ, ಇಂಡಿ, ಸೂರಪೂರ ತಾಲೂಕುಗಳಿಗೆ ಜಾಕ್ವೆಲ್ ಹಾಗೂ ಕಾಲುವೆಗಳ ಮೂಲಕ ನೀರು ಹರಿಸಲು ಸರಕಾರಕ್ಕೆ ಅವರು ಕ್ರಮ ಕೈಕೊಳ್ಳಬೇಕು. ಇಲ್ಲದ ಪಕ್ಷದಲ್ಲಿ ಜು. 23 ರಂದು ತಾಲೂಕಿನ ರಾಂಪೂರ ಗ್ರಾಮದಲ್ಲಿನ ಯುಕೆಪಿ ವಿಭಾಗಿಯ ಕಚೇರಿಗೆ ಬೀಗ ಜಡೆದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಚಂದ್ರಗೌಡ ಪಾಟೀಲ ಅವರು ಮಾತನಾಡಿ, ಜಲಾಶಯಗಳಲ್ಲಿ ಸಂಗ್ರಹವಾದ ನೀರನ್ನು ರೈತರ ಅನಕೂಲಕ್ಕೆ ಆಧ್ಯತೆ ನೀಡಬೇಕು. ಕೆಂಬಾವಿಯಿಂದ ಗುತ್ತಿಬಸವಣ್ಣ ಏತನೀರಾವರಿ ಕಾಲುವೆಗೆ ನೀರು ಬಿಡಲು 4 ಮೋಟರ್ ಪಂಪ್ಗಳಿವೆ. ಕಾಲುವೆಯಿಂದ ಸಿಂದಗಿ ತಾಲೂಕಿನಲ್ಲಿನ ಕಾಲುವೆಗಳಿಗೆ ನೀರು ಬರಬೇಕಾದರೆ ಕನಿಷ್ಠ 3 ಮೋಟರ್ ಪಂಪ್ಗಳು ಪ್ರಾರಂಭಿಸಬೇಕು. ಆದರೆ ಅಧಿಕಾರಿಗಳ ನಿರ್ಲಕ್ಷದಿಂದ ಒಂದೇ ಮೋಟರ್ ಪ್ರಾರಂಭಿಸಿದ್ದಾರೆ. ಇದರಿಂದ ನೀರು ಲಿಪ್ಟ್ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ತಾಲೂಕಿನಲ್ಲಿನ ಗುತ್ತಿಬಸವಣ್ಣ ಏತನೀರಾವರಿ ಕಾಲುವೆಗೆ ನೀರು ಹರಿದು ಬರುವುದಿಲ್ಲ. ಆದ್ದರಿಂದ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಕನಿಷ್ಠ 3 ಮೋಟರ್ ಪಂಪ್ಗಳು ಪ್ರಾರಂಭಿಸಿ ನೀರು ಬಿಡಬೇಕು ಎಂದು ಸೂಚನೆ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.
ರೈತರಾದ ಸಿದ್ದನಗೌಡ ದೇವರೆಡ್ಡಿ, ಶ್ರೀಶೈಲ ಯಳಮೇಲಿ, ಅಶೋಕ ಹಣಮಶೆಟ್ಟಿ, ಶಾಂತು ರಾಣಾಗೋಳ, ಶಂಕರಲಿಂಗ ಚಿನಮಳಿ, ಬಿ.ಎಸ್.ಬೂದಿಹಾಳ, ಸಂಗಾರೆಡ್ಡಿ ಬೋರಗಿ, ಬಿ.ಕೆ. ಪೂಜಾರಿ, ಪ್ರಭು ಬೋರಗಿ, ಎಸ್.ಬಿ.ಪೂಜಾರಿ, ಬೀರಪ್ಪ ಹಚ್ಯಾಳ, ಲಕ್ಷ್ಮಣ ಹಚ್ಯಾಳ, ಜಿ.ಬಿ.ಮಣೂರ, ಕೇಶವರಾಯ ಕಡಣಿ, ಬಿ.ಬಿ.ಬಡಿಗೇರ, ಎಸ್.ಎಸ್.ಬಡಿಗೇರ, ಮಲ್ಲಪ್ಪ ಬಾಸಗಿ, ಕಾಶಿನಾಥ ಬಮ್ಮನಹಳ್ಳಿ, ಯಲ್ಲಪ್ಪ ಭಾಸಗಿ, ಮಲಕಣ್ಣ ಬಿರಾದಾರ ಸೇರಿದಂತೆ ಸಿಂದಗಿ, ಇಂಡಿ ತಾಲೂಕಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.