ಸಾವಿರಾರೂ ಬಡಮಕ್ಕಳ ಬಾಳಿಗೆ ಬೆಳಕಾದ ಸಿದ್ಧಗಂಗಾ ಸ್ವಾಮಿಗಳು
ಕೊಪ್ಪಳ 15: 20ನೇ ಶತಮಾನದಲ್ಲಿ ಕಾಯಕ ದಾಸೋಹ ಪರಂಪರೆಗೆ ನಿಜಾರ್ಥವನ್ನು ಬೋಧಿಸಿದ ಕರ್ನಾಟಕದ ಹೆಮ್ಮೆಯ ಮಠಗಳಲ್ಲಿ ಸಿದ್ಧಗಂಗಾ ಮಠವು ಒಂದಾಗಿದೆ. ಮಠದ ಪುಣ್ಯ ಪುರುಷ ಪರಮ ಪೂಜ್ಯ ಶಿವಕುಮಾರ ಮಹಾಶಿವಯೋಗಿಗಳ (ಸಿದ್ಧಗಂಗಾ ಶ್ರೀಗಳ) ಅಮೃತ ಸ್ಪರ್ಶದಿಂದ ಮಠದ ದಾಸೋಹ ಚಟುವಟಿಕೆಗಳು ಸಾವಿರಾರು ಬಡ ಮಕ್ಕಳಿಗೆ ಜಾತಿ, ಮತ, ಪಂಥಗಳ ಬೇದವಿಲ್ಲದೇ ಅನ್ನ,ಅಕ್ಷರ, ಆಶ್ರಯಗಳನ್ನು ನೀಡುವಂತಾಯಿತು. ಸಾವಿರಾರೂ ಬಡಮಕ್ಕಳ ಬಾಳಿಗೆ ಸಿದ್ಧಗಂಗಾ ಶ್ರೀಗಳು ದೈವಸ್ವರೂಪಿಯಾದರು. ಮಠದ ವಿಧಾಯಕ ಕಾರ್ಯಗಳಿಂದಾಗಿ ರಾಷ್ಟ್ರಾದ್ಯಾಂತ ಕನ್ನಡ ನಾಡಿನ ಕೀರ್ತಿ ವಿಸ್ತಾರವಾಯಿತು.
ಡಾ.ಶಿವಕುಮಾರ ಮಹಾಸ್ವಾಮಿಗಳ ಶಿಷ್ಯತ್ವ ಹಾಗೂ ಆಶೀರ್ವಾದದೊಂದಿಗೆ ಮಠದ ಜವಾಬ್ದಾರಿಯನ್ನು ಸಿದ್ಧಲಿಂಗ ಮಹಾಸ್ವಾಮಿಗಳು ವಹಿಸಿಕೊಂಡಿದ್ದಾರೆ. ಮಠದ ಸಂಸ್ಥೆಗಳಲ್ಲಿಯೇ ತಮ್ಮ ಅಧ್ಯಯನವನ್ನು ಕೈಗೊಂಡು ಅಧ್ಯಯನ ಗೈಯುವ ಸಂದರ್ಭದಲ್ಲಿ ಸಿದ್ಧಗಂಗಾ ಶ್ರೀಗಳ ಮಾರ್ಗದರ್ಶನದಡಿಯಲ್ಲಿ ಹಲವಾರು ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ಸಂಘಟಿಸಿದ್ದಾರೆ.
ಇವರ ದಿವ್ಯ ನೇತೃತ್ವದಲ್ಲಿ ಮಠವು ಸಿದ್ಧಗಂಗಾ ಶ್ರೀಗಳ ಕನಸುಗಳನ್ನು ಭವಿಷ್ಯದಲ್ಲಿ ಸಾಕಾರಗೊಳಿಸಿ ಇನ್ನಷ್ಟು ಬಡಮಕ್ಕಳ ಅನ್ನ, ಅಕ್ಷರ ಆಶ್ರಯ ಧಾಮವಾಗಲಿ ಮಠದ ಕೀರ್ತಿ ಇನ್ನಷ್ಟು ವಿಸ್ತಾರವಾಗಲಿ ಎಂದು ಗವಿಮಠದ ತುಂಬು ಹೃದಯದ ಹಾರೈಕೆಯಾಗಿದೆ.