ಜಗತ್ತಿನ ಎಲ್ಲ ಜೀವ ಜೀವರಾಶಿಗಳ ಸುಖ-ಶಾಂತಿಗೆ ಸಿದ್ಧಚಕ್ರ ಆರಾಧನೆ

ಜಗತ್ತಿನ ಎಲ್ಲ ಜೀವ ಜೀವರಾಶಿಗಳ ಸುಖ-ಶಾಂತಿಗೆ ಸಿದ್ಧಚಕ್ರ ಆರಾಧನೆ Siddha Chakra worship for the happiness and peace of all living beings in the world

 

ಹಾವೇರಿ 10 :  ಜಗತ್ತಿನಲ್ಲಿ ಶಾಂತಿ ನೆಲೆಸಲು ಹಾಗೂ ಭೂಮಿ ಮೇಲಿನ ಎಲ್ಲ ಜೀವರಾಶಿಗಳ ಸುಖ-ಶಾಂತಿಗೆ ಸಿದ್ಧಚಕ್ರ ಆರಾಧನೆ ಮಾಡಲಾಗುತ್ತಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ತಿಳಿಸಿದರು. 

ಹಾವೇರಿ ನಗರದ ಜಿನಮಂದಿರದಲ್ಲಿ ಇದೇ ಡಿ.11 ರಿಂದ ಆರಂಭವಾಗಲಿರುವ ಬೃಹತ್ ಸಿದ್ಧಚಕ್ರ ಆರಾಧನೆ ಮಹೋತ್ಸವ ಕುರಿತು ಮಾಧ್ಯಮಗೋಷ್ಠಿ ಉದ್ದೇಶಿಸಿ  ಮಾತನಾಡಿದ ಅವರು, ಸಂಸಾರದಲ್ಲಿ ಯಾವುದೇ ಉದ್ದೇಶವಿಲ್ಲದೇ ಯಾವುದೇ ಕಾರ್ಯ ಮಾಡುವುದಿಲ್ಲ. ಪ್ರತಿಯೊಂದು ಕಾರ್ಯ ಮಾಡಬೇಕಾದರೆ ಏನಾದರೂ ಒಂದು ಕಾರಣ ಇರುತ್ತದೆ ಎಂದರು. 

ಸಂಸಾರ ದುಃಖ ಮಯ ಹಾಗೂ  ಶರೀರ ರೋಗಮಯವಾಗಿದೆ.  ಎಂಟು ಕರ್ಮಗಳಿಂದ ಮುಕ್ತರಾದಾಗ ಮಾತ್ರ ಶಾಶ್ವತ ಸುಖ  ಪ್ರಾಪ್ತವಾಗಲು ಸಾಧ್ಯ. ಜೈನ ಧರ್ಮದ ಆಚರಣೆಗಳಲ್ಲಿ ಸಿದ್ಧಚಕ್ರ ಆರಾಧನೆ ಶ್ರೇಷ್ಠವಾಗಿದೆ.  ಹಾಗಾಗಿ ಎಂಟು ಕರ್ಮಗಳ ನಿರ್ಜರ ಮಾಡಲು  ಹಾಗೂ ಭಗವಂತರಾಗಲು ಭಾವಮಾಡಲು ಆರಾಧನೆ ಮಾಡಲಾಗುತ್ತದೆ ಎಂದರು. 

ಮುನಿ ಮಹಾರಾಜರ ಸಾನಿಧ್ಯದಲ್ಲಿ ಹಾವೇರಿ ನಗರದಲ್ಲಿ ಬೃಹತ್ ಸಿದ್ಧಚಕ್ರ ಆರಾಧನೆ ಮಾಡುವುದು ಇಲ್ಲಿಯ ಶ್ರಾವಕ ಮತ್ತು ಶ್ರಾವಕಿಯರ ಬಹುದಿನಗಳ ಸಂಕಲ್ಪವಾಗಿತ್ತು. ಯೋಗಾಯೋಗದಿಂದ ಅದು ಈಗ ನೆರವೇರುತ್ತಿದೆ. ಅತ್ಯಂತ ಉತ್ಕೃಷ್ಟವಾಗಿ  ಈ ಆರಾಧನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. 

ಪ್ರತಿಷ್ಠಾಚಾರ್ಯರಾದ ಸದಲಗಾದ ಮಾಣಿಕ ಶ್ರೀಪಾಲ ಚಂದಗಡೆ  ಅವರು ಮಾತನಾಡಿ, ಸತತ 9 ದಿನಗಳ ಆರಾಧನೆ ನಡೆಯಲಿದ್ದು, ಡಿ.11 ರಿಂದ ಡಿ.21ರವರೆಗೆ ಹಾವೇರಿ ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಆರಾಧನೆಯಲ್ಲಿ ಒಟ್ಟು 2048 ಅರ್ಘ್ಯಗಳನ್ನು ಬೆಳಗಲಾಗುವುದು. ಜೈನ್ ಧರ್ಮದಲ್ಲಿ  ಆರಾಧನೆಗೆ ಆದ್ಯತೆ ನೀಡಲಾಗಿದೆ. ಹಾವೇರಿ ಜಿಲ್ಲೆ ಸೇರಿದಂತೆ ವಿವಿಧ ವಿವಿಧ ಜಿಲ್ಲೆಗಳಲ್ಲಿ ಶ್ರಾವಕ ಮತ್ತು ಶ್ರಾವಕಿಯರು ಶ್ವೇತವರ್ಣ ಹಾಗೂ ಕೇಸರಿ ವಸ್ತ್ರಗಳನ್ನು ಧರಿಸಿ ಈ ಆರಾಧನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ಬೆಳಿಗ್ಗೆ 6 ಗಂಟೆಯಿಂದ  ಮಧ್ಯಾಹ್ನ 12-30ರವರೆಗೆ ವಿಶೇಷ ಪೂಜೆಗಳು, ಮಧ್ಯಾಹ್ನ 2-30ಕ್ಕೆ ಸಭೆ ಕಾರ್ಯಕ್ರಮ, ಸಂಜೆ ಆರತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.  

ಬೃಹತ್ ಸಿದ್ಧಚಕ್ರ ಆರಾಧನೆ ಮಹೋತ್ಸ ಸಮಿತಿ ಕಾರ್ಯದರ್ಶಿ ಎಸ್‌.ಎ.ವಜ್ರಕುಮಾರ ಅವರು ಪೂಜಾ ವಿಧಿವಿಧಾನಗಳು ಹಾಗೂ ಮೆರವಣಿಗೆ, ಸಭಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.  

ಇದೇ ಸಂದರ್ಭದಲ್ಲಿ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಬೃಹತ್ ಸಿದ್ಧಚಕ್ರ ಆರಾಧನೆ ಮಹೋತ್ಸದ ಪ್ರಚಾರದ ಪೋಸ್ಟರ್ ಬಿಡುಗಡೆಗೊಳಿಸಿದರು.  

ಈ ಸಂದರ್ಭದಲ್ಲಿ ಬೃಹತ್ ಸಿದ್ಧಚಕ್ರ ಆರಾಧನೆ ಮಹೋತ್ಸ ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಸಿದ್ಧಚಕ್ರ ಆರಾಧನೆ ಮಹೋತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಭರತ ಹಜಾರಿ, ಚಂದ್ರನಾಥ ಕಳಸೂರ, ಸಂಜೀವ ಇಂಡಿ, ಮದನಕುಮಾರ ಶೆಟ್ಟರ್, ವಿಮಲ ಬೋಗಾರ, ಭೂಪಾಲ ಹೊಳಗಿ, ಮಹಾವೀರ ಹಜಾರಿ, ಶ್ರೀಧರ ವರೂರ, ಮಂಜು ಬಾಳಕ್ಕನವರ, ಅರಿಹಂತ ಕಳಸೂರ ಇತರರು ಉಪಸ್ಥಿತರಿದ್ದರು.