ಜಿಲ್ಲಾ ಕೃಷಿಕ ಸಮಾಜಕ್ಕೆ ಆಯ್ಕೆ
ಕಾರವಾರ 16 :- ಉತ್ತರ ಕನ್ನಡ ಜಿಲ್ಲಾ ಕೃಷಿಕ ಸಮಾಜದ ನೂತನ ಕಾರ್ಯಕಾರಿ ಸಮಿತಿಗೆ ಕಾರವಾರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಹಾಗು ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಗುರುವಾರ ನಡೆಯಿತು.
2025-26 ರಿಂದ 2029-30ರ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ನಾರಾಯಣ ಗೋವಿಂದ ಹೆಗಡೆ ಅಂಕೋಲ, ಉಪಾಧ್ಯಕ್ಷರಾಗಿ ನಾಗರಾಜ ಮಾದೇವಪ್ಪ ಬೆಣ್ಣೆ ಮುಂಡಗೋಡ, ಪ್ರಧಾನ ಕಾರ್ಯದರ್ಶಿಯಾಗಿ ಗೋಪಾಲ ರಾಮ ನಾಯ್ಕ ಸಿದ್ದಾಪುರ, ಖಜಾಂಚಿಯಾಗಿ ಮಲ್ಲಾರಿ ವಿರೂಪಾಕ್ಷ ಘಾಡಿ ಹಳಿಯಾಳ, ಹಾಗು ರಾಜ್ಯ ಪ್ರತಿನಿಧಿ ಸ್ಥಾನಕ್ಕೆ ರಾಮಚಂದ್ರ ದೇವರು ಹೆಗಡೆ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಇಲಾಖೆಗಳ ಗ್ರೂಪ್ ಬಿ ವೃಂದದ ಹುದ್ದೆಗಳ ಪರೀಕ್ಷೆ : ನಿಷೇಧಾಜ್ಞೆ ಕಾರವಾರ 16 :- ಜಿಲ್ಲೆಯಲ್ಲಿ ಜ19 ಮತ್ತು ಜ.25 ರಂದು ನಡೆಯುವ ಪ್ರಸಕ್ತ ಸಾಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ವೃಂದದ ಹುದ್ದೆಗಳಿಗೆ ಕನ್ನಡ ಭಾಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ಸದರಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಬೇಕಾಗಿರುವುದರಿಂದ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ತರಹದ ಅವ್ಯವಹಾರ ,ಕಾನೂನು ಬಾಹಿರ ಚಟುವಟಿಕೆಗಳು ಅಥವಾ ಶಾಂತತಾ ಭಂಗ ಆಗದಂತೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಸಭೆ ಸಮಾರಂಭಗಳನ್ನು ನಡೆಯುತ್ತಿದ್ದಲ್ಲಿ ಧ್ವನಿವರ್ಧಕಗಳನ್ನು ತಡೆಯುವ ನಿಟ್ಟಿನಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಪರೀಕ್ಷಾ ಸಮಯದಿಂದ ಪರೀಕ್ಷಾ ಅವಧಿ ಮುಗಿಯುವವರೆಗೆ ಭಾರತೀಯ ಸುರಕ್ಷಾ ಸಂಹಿತೆ ಕಾಯ್ದೆ 2023 ಕಲಂ 163 ರಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ನಿಷೇಧಾಜ್ಞೆಯನ್ನು ಹೊರಡಿಸಿರುತ್ತಾರೆ.
ಸದರಿ ಅವಧಿಯಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿರುವ ಝೆರಾಕ್ಸ್ ಅಂಗಡಿ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚುವಂತೆ ಮತ್ತು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ಇಲೆಕ್ಟ್ರಾನಿಕ್ಸ್ ಅಂದರೆ, ಮೊಬೈಲ್ ಫೋನಗಳು, ಸ್ಮಾರ್ಟ್ ವಾಚ್, ವೈರ್ ಲೆಸ್/ ಬ್ಲೂಟೂತ್, ಇಯರ್ ಹೆಡ್ ಫೋನ್ಗಳನ್ನು ತರಲು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.