ವಿಜ್ಞಾನದ ಸಂಶೋಧನೆಗಳು ಜನಸಾಮಾನ್ಯರಿಗೂ ತಲುಪುವಂತಾಗಬೇಕು : ಡಾ. ವೀರಣ್ಣ ಡಿ. ಬೋಳಿಶೆಟ್ಟಿ

ವಿಜ್ಞಾನದ ಸಂಶೋಧನೆಗಳು ಜನಸಾಮಾನ್ಯರಿಗೂ ತಲುಪುವಂತಾಗಬೇಕು : ಡಾ. ವೀರಣ್ಣ ಡಿ. ಬೋಳಿಶೆಟ್ಟಿ Scientific research should reach the common people: Dr. Veeranna D. Bolishetty

                ಧಾರವಾಡ 07 : ವಿಜ್ಞಾನವು ಜನಹಿತಕ್ಕೆ ಬಳಕೆಯಾಗಬೇಕೆ ವಿನಹ ಮಾನವಕುಲದ ವಿನಾಶಕ್ಕಲ್ಲಾ. ವಿಜ್ಞಾನದ ಸಂಶೋಧನೆಗಳು ಜನಸಾಮಾನ್ಯರಿಗೂ ತಲುಪುವಂತಾಗಬೇಕೆಂದು ಧಾರವಾಡದ ಪ್ರಾದೇಶಿಕ ವಿಜ್ಞಾನಕೇಂದ್ರದ ನಿರ್ದೇಶಕರಾದ ಡಾ. ವೀರಣ್ಣ ಡಿ. ಬೋಳಿಶೆಟ್ಟಿ ಅಭಿಪ್ರಾಯಪಟ್ಟರು. 

    ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ.ಎಸ್‌. ಪಿ.ಹಿರೇಮಠದತ್ತಿ ಅಂಗವಾಗಿ ಆಯೋಜಿಸಿದ್ದ “ಪ್ರೊ.ಎಸ್‌.ಪಿ.ಹಿರೇಮಠಯುವ ವಿಜ್ಞಾನಿ” ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು. 

ಮುಂದುವರಿದು ಮಾತನಾಡಿದ ಅವರು, ವಿಜ್ಞಾನ ವಿಷಯ ಬೋಧನೆ ಕೇವಲ ಪಠ್ಯ ಪುಸ್ತಕಕ್ಕೆ ಸೀಮಿತವಾಗಬಾರದು.ಬೋಧನೆಯ ಪ್ರಾಯೋಗಿಕ ಜ್ಞಾನ ನೀಡುವಂತಿರಬೇಕು.ವಿದ್ಯಾರ್ಥಿಗಳಿಗೆ ಮನವರಿಕೆ ಯಾಗುವ ರೀತಿಯ ಬೋಧನೆ ಅಗತ್ಯ.ಅಂದಾಗ ಅವರಲ್ಲಿ ತಾರ್ಕಿಕ ಶಕ್ತಿ ಪ್ರಶ್ನೆ ಮಾಡುವ ಮನೋಭಾವ ಹೆಚ್ಚಿಸಲು ಸಾಧ್ಯ.ನಮ್ಮ ಪ್ರಾದೇಶಿಕ ವಿಜ್ಞಾನಕೇಂದ್ರವು ಆ ದೆಸೆಯಲ್ಲಿ ಏನೂ ಸೌಲಭ್ಯಗಳಿಲ್ಲದ ಗ್ರಾಮೀಣ ಶಾಲೆಗೆ ಹೋಗಿ ವೈಜ್ಞಾನಿಕ ಪ್ರಯೋಗಗಳ ಪ್ರಾತ್ಯಕ್ಷಿಕೆಯನ್ನು ಮಾಡಿ ವಿಜ್ಞಾನಕಲಿಕೆಯ ಬಗ್ಗೆ ಆಸಕ್ತಿಯ ಮೂಡಿಸುತ್ತದೆ. ವಿಜ್ಞಾನದ ಜೊತೆ ಗಣಿತ ಪ್ರಯೋಗಾಲಯವನ್ನು ಸ್ಥಾಪಿಸಿ ಗಣಿತ ಕಲಿಕೆ ಸರಳಗೊಳಿಸುತ್ತಿದೆ ಎಂದು ಹೇಳಿದರು.  

ಕುವೆಂಪು ವಿಶ್ವವಿದ್ಯಾಲಯದ ರಸಾಯನ ಶಾಸ್ತ್ರ ವಿಭಾಗದ ವಿದ್ಯಾರ್ಥಿಯೋಗಾನಂದ ಕೆ.ಕೆ. ‘ಯುವ ವಿಜ್ಞಾನಿ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿಯಾದರೂ ಸಾಧನೆ ಮಾಡ ಬೇಕೆಂದರೆ ಆತ್ಮವಿಶ್ವಾಸ, ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಸಕಾರಾತ್ಮಕ ಚಿಂತನೆ ಅಗತ್ಯ.ನನ್ನ ಗುರುಗಳಿಗೆ ತಂದೆತಾಯಿ ಹಾಗೂ ಪ್ರೊ. ಎಸ್‌.ಪಿ.ಹಿರೇಮಠರಿಗೆ ನಾನು ಕೃತಜ್ಞ ಎಂದರು. 

ಅಧ್ಯಕ್ಷತೆ ವಹಿಸಿದ್ದ ಕ.ವಿ.ವಿ.ಯ ವಿಶ್ರಾಂತ ಹಿರಿಯ ಪ್ರಾಧ್ಯಾಪಕ ಡಾ.ಮಹಾದೇವಪ್ಪ ಕರಿದುರಗನವರ ಮಾತನಾಡಿ, ಪ್ರೊ.ಎಸ್‌.ಪಿ.ಹಿರೇಮಠ ಒಬ್ಬ ಸರ್ವಶ್ರೇಷ್ಠ ಉತ್ಕೃಷ್ಟ ಗುಣಮಟ್ಟದ ವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರು ಸಂಶೋಧಕರಾಗಿದ್ದರು. ಯು.ಎಸ್‌.ಎ ಹಾಗೂ ಯು.ಕೆ.ಗಳಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಅನುಪಮ ಸೇವೆ ಸಲ್ಲಿಸಿದ ಕೀರ್ತಿಅವರದು.ಶಿಸ್ತು, ಸಮಯಪ್ರಜ್ಞೆ, ಕಿರಿಯರನ್ನು ಪ್ರೋತ್ಸಾಹಿಸುವ, ಹಿರಿಯರನ್ನು ಗೌರವಿಸುವ ಅವರಗುಣ ಮೆಚ್ಚುವಂತಹುದು.ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳನ್ನು ಉತ್ಕೃಷ್ಟ ಮಟ್ಟಕ್ಕೆ  ಬೆಳೆಸಿದವರು. ಕುವೆಂಪು ವಿ.ವಿ. ತನ್ನ ವಿವಿಯ ಸಭಾಗೃಹಕ್ಕೆ ಅವರ ಹೆಸರನ್ನಿಟ್ಟು ಸ್ಮರಿಸಿದೆ.   ಕ.ವಿ.ವ. ಸಂಘದಲ್ಲಿಯೂ ಸಹ  ಅವರ ಭಾವಚಿತ್ರವನ್ನುಅನಾವರಣ ಮಾಡಬೇಕೆಂದು ಹೇಳಿದರು.  

ದತ್ತಿದಾನಿ ಡಾ. ಉಜ್ವಲಾ ಹಿರೇಮಠದತ್ತಿ ಆಶಯ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ವೀರಣ್ಣಒಡ್ಡೀನ, ಶಿವಾನಂದ ಭಾವಿಕಟ್ಟಿ, ಪ್ರೊ.ಸಿ.ಆರ್‌.ಯರವಿನತೆಲಿಮಠ, ಸುರೇಶ ಹಾಲಭಾವಿ, ಪಾರ್ವತಿ ಹಾಲಭಾವಿ, ಲೀಲಾ ಕಲಕೋಟಿ, ಡಾ.ಪ್ರಭಾಕರ ನೀರಲಗಿ ಇದ್ದರು. ಶಂಕರ ಕುಂಬಿ ಸ್ವಾಗತಿಸಿದರು.ಡಾ. ಶೈಲಜಾ ಅಮರಶೆಟ್ಟಿ ನಿರೂಪಿಸಿದರು.ವಿಶ್ವೇಶ್ವರಿ ಹಿರೇಮಠ ವಂದಿಸಿದರು.