ಸ್ಟೀಮ್ ಎಚ್ ಪರಿಕಲ್ಪನೆ ಕೌಶಲ ಭಾರತ ಯೋಜನೆಗೆ ಪೂರಕ : ಡಾ. ದೀಲೀಪ್ ಎ.ಡಿ.

ಸ್ಟೀಮ್ ಎಚ್ ಪರಿಕಲ್ಪನೆ ಕೌಶಲ ಭಾರತ ಯೋಜನೆಗೆ ಪೂರಕ : ಡಾ. ದೀಲೀಪ್ ಎ.ಡಿ. STEAM H concept complements Skill India project: Dr. Dilip A.D.

          ಬೆಳಗಾವಿ, 19 : ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳಿಗೆ ರೋಬೋಟಿಕ್ಸ್‌, ಕೃತಕ ಬುದ್ಧಿಮತ್ತೆ, ನವೀಕರಣಗೊಳಿಸಬಹುದಾದ ಶಕ್ತಿಯಲ್ಲಿ ಮೂಲಗಳು ಮುಂತಾದ ವಿಷಯಗಳ ಕುರಿತು ತರಬೇತಿ ಹಾಗೂ ಸಂಶೋಧನೆಗೆ ಅವಕಾಶ ಒದಗಿಸುವ ಸ್ಟೀಮ್ ಎಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನದ ಪರಿಕಲ್ಪನೆ ಕೇಂದ್ರ ಸರ್ಕಾರದ ಕೌಶಲ ಭಾರತ ಯೋಜನೆಗೆ ಪೂರಕವಾಗಿದೆ ಎಂದು ಐಐಟಿ ಧಾರವಾಡದ ಆಡಳಿತ ವಿಭಾಗದ ಡೀನ್ ಪ್ರೊ. ದೀಲೀಪ್ ಎ.ಡಿ. ಅಭಿಪ್ರಾಯಪಟ್ಟರು. ಅವರು ಇಂದು ನಾಗನೂರು ರುದ್ರಾಕ್ಷಿ ಮಠದ ಆರ್‌. ಎನ್‌. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಸ್ಟೀಮ್ ಎಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಯುವ ವಿಜ್ಞಾನಿ ಆಯ್ಕೆ ಪ್ರಕ್ರಿಯೆಯ ಅಂಗವಾಗಿ ಹಮ್ಮಿಕೊಂಡ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು ಕೇವಲ ಪುಸ್ತಕಗಳಿಂದ ಕೌಶಲ ಅಭಿವೃದ್ಧಿ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಪಠ್ಯಪುಸ್ತಕಕ್ಕೆ ಪೂರಕವಾಗಿ ಸೃಜನಶೀಲತೆಯಿಂದ ಸಂಶೋಧನಾತ್ಮಕ ಪ್ರಕ್ರಿಯೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ತಮ್ಮಲ್ಲಿರುವ ಕೌಶಲ ಬೆಳಕಿಗೆ ಬರುತ್ತದೆ ಎಂದರು. 

          ಸಮಾರಂಭದಲ್ಲಿ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಸರ್ವೋ ಕಂಟ್ರೋಲರ್ಸ್‌ ಮುಖ್ಯಸ್ಥ ದೀಪಕ್ ದಡೂತಿ ದೇಶ ಸೇವೆ ಮಾಡಬೇಕೆಂಬ ಮನಸಿದ್ದರೆ ಐಟಿಐ ಕಲಿತಿದ್ದರೂ ಸಾಕು. ಅದಕ್ಕೆ ಐಐಟಿಯಲ್ಲಿಯೇ ಓದಬೇಕೆಂದೇನಿಲ್ಲ. ಐಐಟಿಯಲ್ಲಿ ಕಲಿತು ಹೊರದೇಶಕ್ಕೆ ಪ್ರತಿಭಾ ಪಲಾಯನ ಮಾಡುವುದಕ್ಕಿಂತ ದೇಶದಲ್ಲಿಯೇ ಇದ್ದು ಇಲ್ಲಿನ ಮೂಲ ಸೌಕರ್ಯಗಳ ಅಭಿವೃದ್ಧಿಗೆ, ತಂತ್ರಜ್ಞಾನದ ಬೆಳವಣಿಗೆಗೆ ಯುವ ಜನತೆ ಶ್ರಮಿಸಬೇಕು. ಬೆಳಗಾವಿ ಸುತ್ತುಮುತ್ತಲಿನ ಭಾಗದ ಯುವಕರು ಇಂದು ಅಂತರಾಷ್ಟ್ರೀಯ ಖ್ಯಾತಿಯ ಇಸ್ರೋದ ಬಹುಮುಖ್ಯ ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಹೆಮ್ಮೆಯ ವಿಷಯ ಎಂದರು. 

          ಕಾರ್ಯಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ ಉತ್ತರ ಕರ್ನಾಟಕದ ಮಕ್ಕಳು ಸಂಶೋಧನೆಗಳಲ್ಲಿ ಹಾಗೂ ಉನ್ನತ ಅಧ್ಯಯನ ಕೈಗೊಳ್ಳಬೇಕೆಂದರೆ ದೂರದ ಬೆಂಗಳೂರು, ಮುಂಬೈ, ಚೆನ್ನೈ ಹಾಗೂ ದೆಹಲಿ ಅಂತಹ ಮಹಾನಗರಗಳಿಗೆ ತೆರಳ ಬೇಕಾಗುತ್ತದೆ. ಬಡ ಮಕ್ಕಳಿಗೆ ಇದು ಕಷ್ಟ ಸಾಧ್ಯ. ಈ ಕಾರಣದಿಂದಲೇ ಉತ್ತರ ಕರ್ನಾಟಕದ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮನ್ನು ಸಂಶೋಧನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರ ಹಾಗು ಅಂತರಾಷ್ಟ್ರ ಮಟ್ಟದ ಶ್ರೇಷ್ಠ ಸಂಶೋಧಕರಾಗಿ ಉದ್ಯಮಿಗಳಾಗಿ ಹೊರಹೊಮ್ಮಲಿ ಎಂಬ ಉದ್ದೇಶದಿಂದ ಸ್ಟೀಮ್ ಎಚ್ ತರಬೇತಿ ಮತ್ತು ಸಂಶೋಧನಾ ಪ್ರತಿಷ್ಠಾನ ಪ್ರಾರಂಭಿಸಿದ್ದು, ಇಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. 

         ಇದೇ ಸಂದರ್ಭದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಡಾ. ಸಂದೀಪ್ ಗೌರ್, ಎಕಸ್ ಪ್ರೈವೇಟ್ ಲಿಮಿಟೆಡ್ ನ ಜನರಲ್ ಮ್ಯಾನೇಜರ್ ಬಸವರಾಜ ಸುಗಂಧಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲೀಲಾವತಿ ಹಿರೇಮಠ ಇವರಿಗೆ ನಾಗನೂರು ರುದ್ರಾಕ್ಷಿ ಮಠದ ವತಿಯಿಂದ ಗೌರವ ಸನ್ಮಾನ ನೆರವೇರಿಸಲಾಯಿತು. ಇದಕ್ಕೂ ಮುನ್ನ ಎಸ್‌. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಗಲಗಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿನ ಅವಕಾಶಗಳ ಕುರಿತು ಅಭಿಪ್ರೇರಣಾ ಉಪನ್ಯಾಸ ನೀಡಿದರು. ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್‌.ಪಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಆಸ್ಟ್ರೇಲಿಯಾದ ಎಫ್ ಪಿ ಡಬ್ಲ್ಯೂ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥಾಪಕ ಬಸನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ವಿಜ್ಞಾನಿ ಆಯ್ಕೆ ಪ್ರಕ್ರಿಯೆಯಲ್ಲಿ 7 ಹಾಗೂ 10ನೇ ತರಗತಿಯ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮೊದಲ ಹಂತದಲ್ಲಿ ಅತ್ಯುತ್ತಮ ಪ್ರತಿಭೆ ತೋರಿದ 45 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ಪ್ರಾಚಾರ್ಯರಾದ ಸಪ್ನಾ ಜೋಶಿ, ಪೂಜಾ ನಾಯಕ್ ಅಂಗ ಸಂಸ್ಥೆಗಳಲ್ಲಿನ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಪ್ರಾರಂಭದಲ್ಲಿ ಪ್ರಾಧ್ಯಾಪಕ ಎ.ಕೆ. ಪಾಟೀಲ ಸ್ವಾಗತಿಸಿದರು ಸಂಯೋಜಕ ರಾಜಶೇಖರ ಪಾಟೀಲ ನಿರೂಪಿಸಿದರು ಕೊನೆಗೆ ಉಪಪ್ರಾಚಾರ್ಯೆ ಶಿವಲೀಲಾ ಪೂಜಾರಿ ವಂದಿಸಿದರು.