ಮುಂಡಗೋಡ ತಾಪಂನಲ್ಲಿ ಎಸ್‌.ಬಿ.ಎಮ್‌. ಪ್ರಗತಿ ಪರೀಶೀಲನಾ ಸಭೆ

ಮುಂಡಗೋಡ ತಾಪಂನಲ್ಲಿ ಎಸ್‌.ಬಿ.ಎಮ್‌. ಪ್ರಗತಿ ಪರೀಶೀಲನಾ ಸಭೆ

ಕಾರವಾರ 06  : ಕೇಂದ್ರ ನೀತಿ ಆಯೋಗವು ಮುಂಡಗೋಡ ತಾಲೂಕನ್ನು ಮಹತ್ವಾಕಾಂಕ್ಷೆ ತಾಲೂಕು ಎಂದು ಗೋಷಣೆ ಮಾಡಿರುವುದರಿಂದ ಸರ್ಕಾರದ ಎಲ್ಲ ಯೋಜನೆಗಳು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮೇಲಾಧಿಕಾರಿಗಳು ಸಭೆ ನಡೆಸಿ ನಿರ್ದೇಶನ ನೀಡುವವರೆಗೆ ಕಾಯದೇ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಕರ್ತವ್ಯ ನಿರತರಾಗಬೇಕು ಎಂದು ಜಿಲ್ಲಾ ಪಂಚಾಯತಿಯ ಆಡಳಿತ ಶಾಖೆಯ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಹೇಳಿದರು. 

 ಬುಧವಾರ ಮುಂಡಗೋಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆಯ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರ್ಕಾರದ ಸೂಚನೆಯಂತೆ ಎಲ್ಲ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳಿಸಬೇಕು. ಇಚ್ಛಾಶಕ್ತಿಯ ಕೊರತೆ ಇದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರು ಆಸಕ್ತಿಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ ಎಂದು ಸೂಚನೆ ನೀಡಿದ ಅವರು, ಶೌಚಾಲಯ ವರ್ಕ್‌ ಕಂಪ್ಲೀಷನ್, ಜಿಯೋ ಟ್ಯಾಗ್, ಅನುದಾನ ಪಾವತಿ, ಅಂತಿಮ ತಪಾಸಣೆ ವರದಿ, ತ್ಯಾಜ್ಯ ವಿಲೇವಾರಿ ಘಟಕ ವ್ಯವಸ್ಥಿತ ನಿರ್ವಹಣೆ, ಮಹಿಳಾ ವಾಹನ ಚಾಲಕಿಯರ ವೇತನ, ಕಸ ಸಂಗ್ರಹ ಕರ ನಿಗದಿ ಮತ್ತು ವಸೂಲಿ ಹಾಗೂ ಮಾದರಿ ಗ್ರಾಮ ಘೋಷಣೆ ಸೇರಿದಂತೆ ಪ್ರಮುಖ ಅಂಶಗಳನ್ನು ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಸಭೆಯ ಬಳಿಕ ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಚ್ಛ ಸಂಕೀರ್ಣ ಘನ ತ್ಯಾಜ್ಯ ಸಂಪನ್ಮೂಲ ಘಟಕ ಹಾಗೂ ಪಾಳಾ ಗ್ರಾಮ ಪಂಚಾಯತಿಯ ಇಂಗಳಕಿ ಗ್ರಾಮದಲ್ಲಿ ಬಹುಗ್ರಾಮ ಘನ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ, ಪರೀವೀಕ್ಷಣೆ ಮಾಡಿದರು.ಈ ವೇಳೆ ಚಿಗಳ್ಳಿ ಗ್ರಾಪಂ ಮಹಿಳಾ ಚಾಲಕಿ ಜೊತೆ ಮಾತನಾಡಿ, ವಾಹನ ಚಾಲನೆ, ಕಸ ಸಂಗ್ರಹಣೆ ಮತ್ತು ವಿಂಗಡಣೆ ಸೇರಿದಂತೆ ವಿವಿಧ ಹಂತಗಳಲ್ಲಿ ಎದುರಿಸುವ ಸವಾಲುಗಳ ಕುರಿತು ಚರ್ಚಿಸಿ, ಅಭಿಪ್ರಾಯ ಪಡೆದರು. ಘಟಕದಲ್ಲಿ ಸ್ವಚ್ಛತಾ ಕೆಲಸಗಾರರಿಗೆ ಕುಡಿಯುವ ನೀರು, ಬೆಳಕು ಮತ್ತು ಶೌಚಾಲಯದ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್‌. ದಾಸನಕೊಪ್ಪ, ಉಪ ನಿರ್ದೇಶಕರು (ಗ್ರಾಉ) ಸೋಮಲಿಂಗಪ್ಪ ಛಬ್ಬಿ, ತಾಲೂಕು ಯೋಜನಾ ಅಧಿಕಾರಿಗಳು ಮಲ್ಲಿಕಾರ್ಜುನ ಬಿಕ್ಕಣನವರ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ತಾಪಂ ಹಾಗೂ ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.